ಪ್ರಾಮಾಣಿಕತೆ ಉಳಿದುಕೊಂಡಿರುವ ಏಕೈಕ ಇಲಾಖೆ ಅಂಚೆ ಇಲಾಖೆ: ಸಂಸದ ಸಂಗಣ್ಣ ಕರಡಿ
ಅಂಚೆ ಇಲಾಖೆ ಅತ್ಯಂತ ಹಳೆಯ ಇಲಾಖೆಯಾಗಿದ್ದು, ಪತ್ರಗಳು, ಸಂದೇಶಗಳನ್ನು ರವಾನಿಸುವ ಕೆಲಸದಿಂದ ಇಂದು ಡಿಜಿಟಲ್ ಹಣಕಾಸು ವ್ಯವಹಾರ ನಿರ್ವಹಿಸುವಷ್ಟರ ಮಟ್ಟಿಗೆ ಅಭಿವೃದ್ದಿ ಹೊಂದಿ ಉನ್ನತ ಸೇವೆಗಳನ್ನು ನೀಡುತ್ತಿದೆ. ಇಲಾಖೆಯ ಸಿಬ್ಬಂದಿ ಗ್ರಾಹಕರೊಡನೆ ವ್ಯವಹರಿಸುವಾಗ ತಾಳ್ಮೆಯಿಂದ, ಗೌರವದಿಂದ ವರ್ತಿಸುತ್ತಾರೆ. ಇದು ಎಲ್ಲ ಇಲಾಖೆಗಳಲ್ಲಿಯೂ ಕಾಣಸಿಗುವುದಿಲ್ಲ. ಅಲ್ಲದೆ ಯಾವುದೇ ಆಸೆಗಳಿಲ್ಲದ, ಪ್ರಾಮಾಣಿಕ ಸೇವೆಯನ್ನು ಇಲಾಖೆ ಸಮಾಜಕ್ಕೆ ನೀಡುತ್ತಾ ಬಂದಿದೆ. ಬಹುಶಃ ಪ್ರಾಮಾಣಿಕತೆ ಉಳಿದುಕೊಂಡಿರುವ ಏಕೈಕ ಇಲಾಖೆ ಎಂದರೆ ಅದು ಅಂಚೆ ಇಲಾಖೆ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅವರು ಅಭಿಪ್ರಾಯ ಪಟ್ಟರು.
ಕೊಪ್ಪಳ ಜಿಲ್ಲೆಯು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದ್ದರೂ ಜಿಲ್ಲೆಯ ಅಂಚೆ ಇಲಾಖೆಯು ಕಿತ್ತೂರು ಕರ್ನಾಟಕದ ಗದಗ ವಿಭಾಗಕ್ಕೆ ಒಳಪಟ್ಟಿತ್ತು. 2017 ರಿಂದ ಸತತ ಪ್ರಯತ್ನ, ಜಿಲ್ಲೆಯ ಸಾಹಿತಿ, ಬರಹಗಾರರು, ಪತ್ರಕರ್ತರು, ಅಧಿಕಾರಿಗಳ ಹೋರಾಟದ ಫಲವಾಗಿ ಇಂದು ಜಿಲ್ಲೆಯ ಅಂಚೆ ಇಲಾಖೆಯು ಗದಗ ವಿಭಾಗದಿಂದ ಪ್ರತ್ಯೇಕಗೊಂಡು ಕೊಪ್ಪಳ ಅಂಚೆ ವಿಭಾಗವನ್ನು ಹೊಂದಿದೆ. ಇದು ನನ್ನ ಬಾಳಿನ ಸಾರ್ಥಕ ಕ್ಷಣಗಳಲ್ಲಿ ಒಂದು. ಈ ಇದು ನನ್ನೊಬ್ಬನಿಂದ ಸಾಧ್ಯವಿಲ್ಲ. ನನ್ನೊಂದಿಗೆ ಹೋರಾಟ ಮಾಡಿದ, ಸತತ ಪ್ರಯತ್ನ ಮಾಡಿದ ಎಲ್ಲರಿಗೂ ಈ ಯಶಸ್ಸಿನ ಶ್ರೇಯ ಸಲ್ಲುತ್ತದೆ. ಕೊಪ್ಪಳ ಅಂಚೆ ವಿಭಾಗಕ್ಕೆ ಹೋರಾಡಿದಂತೆ ಸಮಾಜದ ಪ್ರತಿಯೊಬ್ಬರೂ ಸಮಾಜದ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಬಗ್ಗೆ ಹೋರಾಡಬೇಕು. ಹೋರಾಟದ ಮುಲಕ ರಾಜಕಾರಣಿಗಳನ್ನು, ಸರ್ಕಾರವನ್ನು ಪ್ರಶ್ನಿಸಬೇಕು. ಸ್ವಾರ್ಥ ಮನೋಭಾವ, ವೈಯಕ್ತಿಕ ಹಿತಾಸಕ್ತಿಗೆ ಹೊರತಾದ ಒಗ್ಗಟ್ಟಿನ ಹೋರಾಟದ ಫಲ ಎಂದಿಗೂ ಸುಮಧುರವಾಗಿರುತ್ತದೆ ಎಂಬುದಕ್ಕೆ ಇಂದಿನ ಸಾಕ್ಷಿಯಾಗುತ್ತದೆ ಎಂದು ಅವರು ಭಾವುಕ ನುಡಿಗಳನ್ನು ವ್ಯಕ್ತಪಡಿಸಿದರು.
ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಅಂಚೆ ಇಲಾಖೆ ತಲುಪಿಸುತ್ತದೆ. ಡಾಕ್ ಘರ್ ನಿರ್ಯಾತ ಮೂಲಕ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆಯುವ ಕಡೆ ಸಂಪರ್ಕ ಕಲ್ಪಿಸುತ್ತದೆ. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳೆಲ್ಲವೂ ಅಂಚೆ ಇಲಾಖೆ ಮೂಲಕವೇ ಫಲಾನುಭವಿಗಳಿಗೆ ತಲುಪತ್ತವೆ. ಆರ್ಥಿಕ ಯೋಜನೆಗಳಲ್ಲಿ ಯಾವುದೇ ಸೋರಿಕೆ ಇಲ್ಲದೆ ನಿಗಿದಿತ ಮೊತ್ತ ಫಲಾನುಭವಿ ಖಾತೆಗೆ ಸೇರುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಡಿಬಿಟಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಿ ನಾವೆಲ್ಲರೂ ಕೈಜೋಡಿಸಿ, ಶ್ರಮಿಸೋಣ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಕೊಪ್ಪಳ ಅಂಚೆ ವಿಭಾಗ ಆರಂಭಗೊAಡಿರುವುದು ಸಂತಸದ ವಿಷಯ. ಉತ್ತರ ಕರ್ನಾಟಕದ 16ನೇ ಅಂಚೆ ವಿಭಾಗವನ್ನು ಇಂದು ನಾವು ಉದ್ಘಾಟಿಸಿದ್ದೇವೆ. ಅಂಚೆ ಇಲಾಖೆ ನಿಸ್ವಾರ್ಥ ಸೇವೆಯನ್ನು ನೀಡುತ್ತಾ ಬಂದಿದ್ದು, ಮುಂದೆಯೂ ಇಲಾಖೆಯಿಂದ ಈ ಸೇವೆ ಮುಂದುವರೆಯಲಿ ಎಂದು ಅಭಿನಂದಿಸಿದರು.
ಕರ್ನಾಟಕ ವೃತ್ತ ಬೆಂಗಳೂರಿನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಆದ ಎಸ್.ರಾಜೇಂದ್ರಕುಮಾರ ಅವರು ಮಾತನಾಡಿ, ಕೊಪ್ಪಳ ಅಂಚೆ ವಿಭಾಗವು ಕರ್ನಾಟಕ ವೃತ್ತದ 35ನೇ ವಿಭಾಗವಾಗಿದೆ. ಇಂದು ಕೊಪ್ಪಳ ಅಂಚೆ ವಿಭಾಗವು ಉದ್ಘಾಟನೆಗೊಂಡಿದ್ದು, ಏಪ್ರಿಲ್ 01 ರಿಂದ ನಗರದ ಹಳೆಯ ತೋಟಗಾರಿಕೆ ಇಲಾಖೆ ಕಟ್ಟಡದಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳಲಿದೆ. ಇಲಾಖೆಯು ಸಾಂಪ್ರದಾಯಿಕ ಪತ್ರ ರವಾನೆ ಕೆಲಸ ಮಾತ್ರವಲ್ಲದೆ, ಪಾಸ್‌ಪೋರ್ಟ್, ಆಧಾರ್ ನೋಂದಣಿ, ತಿದ್ದುಪಡಿ, ಪ್ಯಾನ್‌ಕಾರ್ಡ್ ವಿತರಣೆ, ಉಳಿತಾಯ ಯೋಜನೆಗಳು, ಠೇವಣಿ ಸೇವೆಗಳು, ಡಿಜಿಟಲ್ ಬ್ಯಾಂಕಿAಗ್, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಸೇರಿದಂತೆ ಹಲವಾರು ಸೇವೆಗಳನ್ನು ನೀಡುತ್ತಿದೆ. ಕೊಪ್ಪಳ ಜಿಲ್ಲೆಗೆ ಪ್ರತ್ಯೇಕ ಅಂಚೆ ವಿಭಾಗವಾಗಿದ್ದರಿಂದ ಜಿಲ್ಲೆಯ ಅಂಚೆ ಇಲಾಖೆಗೆ ಇನ್ನೂ ಹೆಚ್ಚಿನ ಬಲ ಬಂದಿದೆ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು ಅಂಚೆ ಇಲಾಖೆ ಮೂಲಕ ಫಲಾನುಭವಿಗಳಿಗೆ ತಲುಪುತ್ತವೆ. ಹೊಸದಾಗಿ ಆರಂಭಗೊAಡ ಸೌರ ಘರ್ ಯೋಜನೆಯಡಿ ದೇಶದ ಪ್ರತಿಯೊಬ್ಬ ಪ್ರಜೆಯೂ ಅಂಚೆ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಈ ಯೋಜನೆಯಡಿ ಪ್ರತಿ ಮನೆಯಲ್ಲಿ ಸೌರ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರದ ಸಬ್ಸಿಡಿ ನೀಡುತ್ತಿದ್ದು, ಪೋಸ್ಟ್ಮನ್ ಅಥವಾ ಗ್ರಾಮ ಢಾಕ್ ಸೇವಕರು ನೇರವಾಗಿ ಫಲಾನುಭವಿಯ ಮನೆಗೆ ಭೇಟಿ ನೀಡಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ. ಸೌರ ಘಟಕದಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ದೇಶದ ಪ್ರಮುಖ ವಿದ್ಯುತ್ ಘಟಕಕ್ಕೆ ವರ್ಗಾಯಿಸಿ, ಸೌರ ಘಟಕ ಹೊಂದಿದ ಮನೆಗೆ 200 ಯುನಿಟ್ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತದೆ. ಇದರಿಂದ ದೇಶದ ವಿದ್ಯುತ್ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಬಹುದು ಎಂದು ಇಲಾಖೆಯಿಂದ ನೀಡಲಾಗುವ ಸೇವೆಗಳ ಬಗ್ಗೆ ವಿವರಿಸಿದರು.
ಇದೇ ಸಂದರ್ಭ ಕೊಪ್ಪಳ ಅಂಚೆ ವಿಭಾಗದ ಉದ್ಘಾಟನಾ ಸಮಾರಂಭದ ಸವಿನೆನಪಿಗಾಗಿ ಕೊಪ್ಪಳ ಅಂಚೆ ವಿಭಾಗದಿಂದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ಕ್ಷೇತ್ರದ ಚಿತ್ರವಿರುವ ವಿಶೇಷ ಲಕೋಟೆಯನ್ನು ಸಂಸದರು, ವೇದಿಕೆ ಮೇಲಿನ ಗಣ್ಯರು ಬಿಡುಗಡೆಗೊಳಿಸಿದರು. ಈ ವಿಶೇಷ ಲಕೋಟೆಗಾಗಿ ಸಂಸದರಾದ ಸಂಗಣ್ಣ ಕರಡಿ ಅವರು ರೂ.75 ಸಾವಿರಗಳ ದೇಣಿಗೆಯನ್ನು ನೀಡಿದ್ದಾರೆ ಎಂದು ಉತ್ತರ ಕರ್ನಾಟಕ ವಲಯ ಧಾರವಾಡದ ಪೋಸ್ಟ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲಕುಮಾರ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಅಂಚೆ ವಿಭಾಗ ಸ್ಥಾಪನೆಗಾಗಿ ಕೇಂದ್ರ ಸರ್ಕಾರದಲ್ಲಿ ಸತತ ಪ್ರಯತ್ನ, ಹೋರಾಟ ಮಾಡಿದ ಸಂಸದರಾದ ಸಂಗಣ್ಣ ಕರಡಿ ಅವರನ್ನು, ಜಿಲ್ಲೆಯ ಪ್ರಮುಖ ಸಾಹಿತಿಗಳು, ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರ, ಹನುಮಂತಪ್ಪ ಅಂಡಗಿ, ಬಿ.ಬಿ.ರಡ್ಡೇರ್, ಮಹಂತೇಶ ಮಲ್ಲನಗೌಡರ್, ಸಿ.ವಿ.ಜಡಿಯವರ, ನಾಗಪ್ಪ ಬಳಿಗೇರ, ಬೀರನಾಯ್ಕ್, ನಿರ್ಮಲಾ ಬಳ್ಳೊಳ್ಳಿ, ಸಾವಿತ್ರಿ ಮುಜುಂದಾರ, ಎಂ.ಬಿ.ಅಳವAಡಿ, ಸಂಗಮೇಶ ಡಂಬಳ, ರಾಜಶೇಖರ ಅಂಗಡಿ, ಎ.ಎಸ್.ಮದರಿ, ಹಾಗೂ ದಿವಂಗತರಾದ ಬಸವರಾಜ ಆಕಳವಾಡಿ, ವಿಠ್ಠಪ್ಪ ಗೋರಂಟ್ಲಿ ಅವರ ಕುಟುಂಬಸ್ಥರಿಗೆ ಅಭಿನಂದನೆಯ ದ್ಯೋತಕವಾಗಿ ಸನ್ಮಾನಿಸಲಾಯಿತು.
ಗದಗ ವಿಭಾಗದ ಅಂಚೆ ಅಧೀಕ್ಷಕರು ಹಾಗೂ ಕೊಪ್ಪಳ ಅಂಚೆ ವಿಭಾಗದ ಹೆಚ್ಚುವರಿ ಅಂಚೆ ಅಧೀಕ್ಷಕರಾದ ನಿಂಗನಗೌಡ ಜಿ.ಭಂಗಿಗೌಡ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಕುಪ್ಪಸದ ಪ್ರಾರ್ಥಿಸಿದರು. ಉತ್ತರ ಕರ್ನಾಟಕ ವಲಯ ಧಾರವಾಡದ ಅಂಚೆ ಸೇವೆಗಳ ನಿರ್ದೇಶಕರಾದ ವಿ. ತಾರಾ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆ ಕಚೇರಿಯ ಜಿ.ಎನ್.ಹಳ್ಳಿ, ಸೇರಿದಂತೆ ಕೊಪ್ಪಳ ಅಂಚೆ ವಿಭಾಗದ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ, ಸಾಹಿತಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Comments are closed.