ವೃತ್ತಿಯಲ್ಲೂ ಗೋಪಾಲ್‌ರ ನಿರಂತರ ಸೇವಾ ಕಾರ್ಯ.. ೨೩ನೇ ವಾರ್ಷಿಕೋತ್ಸವ:ವಿಕಲಚೇತನರಿಗೆ ಉಚಿತ ಕ್ಷೌರ
ಗಂಗಾವತಿ.
ತಮ್ಮ ವೃತ್ತಿ ಕಾಯಕದಲ್ಲೂ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಗೋಪಾಲ ಹೊಸಳ್ಳಿ ತನ್ನ ನೇತ್ರಾವತಿ ಹೇರ್ ಡ್ರೇಸಸ್‌ನ ವಾರ್ಷಿಕೋತ್ಸವದ ಅಂಗವಾಗಿ ನೂರಕ್ಕು ಹೆಚ್ಚು ಅಂಧ, ಬುದ್ದಿಮಾಂದ್ಯ ಮತ್ತು ವಿಕಲಚೇತನ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಿ ಸೇವಾ ಕಾರ್ಯಕ್ಕೆ ಮಾದರಿಯಾಗಿದ್ದಾರೆ.
ನಗರದ ಆನೆಗೊಂದಿ ರಸ್ತೆಯ ಲೋಕೋಪಯೋಗಿ ಕಚೇರಿ ಎದುರಿಗೆ ಇರುವ ಗೋಪಾಲ್ ಹೊಸಳ್ಳಿ ತನ್ನ ಸಹೋದರರೊಂದಿಗೆ ಕಳೆದ ೨೩ ವರ್ಷಗಳಿಂದ ನೇತ್ರಾವತಿ ಹೇರ್ ಡ್ರೇಸಸ್ ಹೆಸರಿನಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ೨೩ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಉಚಿತ ಕ್ಷೌರ ಸೇವೆ ಮಾಡಿದರು. ಯಾವುದೇ ಫಲಾಪೇಕ್ಷೆ ಇಲ್ಲದೇ ಸತತ ೨೩ ವರ್ಷಗಳಿಂದ ಉಚಿತ ಕ್ಷೌರ ಮಾಡುವ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ತಾಲೂಕಿನ ದಾಸನಾಳ ಗ್ರಾಮದಲ್ಲಿರುವ ಅಂಧ ಮಕ್ಕಳ ವಸತಿ ನಿಲಯದ ವಿದ್ಯಾರ್ಥಿಗಳು, ಲಯನ್ಸ್ ಬುದ್ದಿಮಾಂದ್ಯ ವಿದ್ಯಾರ್ಥಿಗಳು ಸೇರಿ ಇನ್ನಿತರ ವಿಕಲಚೇತನರಿಗೆ ಉಚಿತವಾಗಿ ಕ್ಷೌರ ಮಾಡಿದರು. ನಂತರ ಅವರೆಲ್ಲರಿಗೂ ತಮ್ಮ ಮನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಿ ಅವರನ್ನು ಬಿಳ್ಕೊಟ್ಟರು. ಈ ಕುರಿತು ನೇತ್ರಾವತಿ ಕಟಿಂಗ್ ಶಾಪ್‌ನ ಮಾಲೀಕ ಗೋಪಾಲ್ ಹೊಸಳ್ಳಿ ಮಾತನಾಡಿ, ನಾನು ಅಂಗಡಿ ಪ್ರಾರಂಭಿಸಿದ ಮೊದಲ ವರ್ಷದಲ್ಲಿ ಇಲ್ಲಿ ಅಂಧ ಮಕ್ಕಳ ವಸತಿ ನಿಲಯವಿತ್ತು. ನಿಲಯದ ಎಲ್ಲಾ ಮಕ್ಕಳಿಗೂ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸುತ್ತಿದ್ದೆ. ಇದನ್ನು ಪ್ರತಿ ವರ್ಷವೂ ಮಾಡಲು ನಿರ್ಧರಿಸಿ ಇಂದು ೨೩ನೇ ವರ್ಷದ ವಾರ್ಷಿಕೋತ್ಸವದಂದು ಸುಮಾರು ೧೦೦ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಕ್ಷೌರ ಸೇವೆ ಮಾಡಿದ್ದೇವೆ. ನನ್ನ ಎಲ್ಲಾ ಸಹೋದರರು ಈ ಸೇವೆಯಲ್ಲಿ ಸಾತ್ ನೀಡುತ್ತಾರೆ. ನನ್ನ ವೃತ್ತಿ ಬದುಕಿನಲ್ಲಿ ನಮ್ಮ ಆತ್ಮ ತೃಪ್ತಿಗಾಗಿ ಸಣ್ಣದಾದ ಸೇವೆಯನ್ನು ಮಾಡುತ್ತಿದ್ದೇವೆ. ನಮಗೆ ಶಕ್ತಿ ಇರುವವರೆಗೂ ನಾವು ಈ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.
ಗೋಪಾಲ ಹೊಸಳ್ಳಿ ಅವರು ಪ್ರತಿ ವರ್ಷವೂ ಬುದ್ದಿ ಮಾಂದ್ಯ, ಅಂಧ ಮಕ್ಕಳು ಸೇರಿದಂತೆ ಇನ್ನಿತರ ವಿಕಲಚೇತನರಿಗೆ ಉಚಿತವಾಗಿ ಕ್ಷೌರ ಸೇವೆ ಮಾಡುತ್ತಾ ಬಂದಿದ್ದಾರೆ. ೨೩ ವರ್ಷಗಳಿಂದ ಈ ಸೇವೆ ಸಲ್ಲಿಸಿತ್ತಿರುವ ಗೋಪಾಲ್ ಹೊಸಳ್ಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಲಯನ್ಸ್ ಬುದ್ದಿ ಮಾಂದ್ಯ ಸಂಸ್ಥೆಯ ಶಿಕ್ಷಕರು ಅಭಿನಂದಿಸಿದರು.
Comments are closed.