ಮುಂದಿನ ಚುನಾವಣೆಗೆ ಸಜ್ಜಾಗೋಣ- ಸಿ.ವಿ.ಚಂದ್ರಶೇಖರ್

Get real time updates directly on you device, subscribe now.

ಸೋಲು ಗೆಲುವು ಸಾಮಾನ್ಯ-ಕಾರ್ಯಕರ್ತರು ಎದೆಗುಂದದಿರಿ   

ಕೊಪ್ಪಳ :  ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕಾರ್ಯಕರ್ತರು ಶಕ್ತಿ ಮೀರಿ ದುಡಿದಿದ್ದರಿಂದಲೇ  ಕೇವಲ 20 ದಿನದಲ್ಲಿ ಚುನಾವಣೆ ಎದುರಿಸಿದ್ದೇವೆ. ನಾನಾ ಕಾರಣಗಳಿಂದ  ಸೋತಿರಬಹುದು. ಯಾರೂ ಎದೆಗುಂದಬೇಡಿ. ಮುಂದಿನ ಚುನಾವಣೆಗೆ ಸಜ್ಜಾಗೋಣ. ಇದು ನಮ್ಮ ಅಂತ್ಯವಲ್ಲ, ಆರಂಭ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ಹೇಳಿದರು.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜೆಡಿಎಸ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಭಯ ಹುಟ್ಟಿಸಿದ್ದೇವೆ. ನಮ್ಮನ್ನು ಬಿಟ್ಟರೆ ಕೊಪ್ಪಳ ರಾಜಕಾರಣದಲ್ಲಿ ಬೇರಾರು ಬರುವುದಿಲ್ಲ ಎಂದವರಿಗೆ ಅದು ಸುಳ್ಳು ಎಂಬುದನ್ನು ತೋರಿಸಿದ್ದೇವೆ. ಕೆಲ ತಪ್ಪು ನಿರ್ಣಯಗಳಿಂದ ಸೋಲಾಗಿರಬಹುದು. ಅಭ್ಯರ್ಥಿಯಾಗಿ ಯಾರೆಲ್ಲ ಏನು ಕೆಲಸ ಮಾಡಿದ್ದಾರೆ. ಎಷ್ಟು ಶ್ರಮಿಸಿದ್ದಾರೆಂಬುದರ ಅರಿವು ನನಗಿದೆ. ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡಿ. ಕ್ಷೇತ್ರದ ಶಾಸಕರು ಅಭಿವೃದ್ಧಿ ಮಾಡಿದ್ದಾರೆಂದು ಜನ ಗೆಲ್ಲಿಸಿಲ್ಲ. ಬಿಜೆಪಿ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್ ಗೆದ್ದಿದೆ. ಇನ್ನಾದರೂ ಕ್ಷೇತ್ರ ಅಭಿವೃದ್ಧಿಪಡಿಸಲಿ. ಬರುವ ಜಿಪಂ, ತಾಪಂ ಹಾಗೂ ಲೋಕಸಭೆ ಚುನಾವಣೆಗೆ ಸಜ್ಜಾಗೋಣ, ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿ ಇತರ ಜಿಲ್ಲೆಗಳಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿದು ನಮ್ಮ ಶಕ್ತಿ ಏನೆಂದು ತೋರಿಸೋಣ. ಇದು ನಮ್ಮ ಅಂತ್ಯವಲ್ಲ, ಆರಂಭ ಎಂದರು.

ಮಾಜಿ ಸಚಿವ ಆಲ್ಕೊಡು ಹನುಮಂತಪ್ಪ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸೋಲು ಇರಬೇಕು. ಸಂಖ್ಯೆಗಳಲ್ಲಿ ಸಿವಿಸಿ ಸೋತಿದ್ದಾರೆ. ಆದರೆ, ಜನರ ಮನಸ್ಸು ಗೆದ್ದಿದ್ದಾರೆ. ಕೇವಲ 20 ದಿನದಲ್ಲಿ ಪಕ್ಷ ಸೇರಿ 45 ಸಾವಿರ ಮತಗಳಿಸುವುದು ಸಾಮಾನ್ಯ ಮಾತಲ್ಲ. ಸೋಲನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಬಿಜೆಪಿ ಆಡಳಿತದಿಂದ ಬೇಸತ್ತಿದ್ದ ಜನರು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಇವರೇನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದಲ್ಲ. ಇನ್ನು ಕೆಲವೇ ತಿಂಗಳಲ್ಲಿ ಕಾಂಗ್ರೆಸ್ಸಿಗರ ನಿಜಬಣ್ಣ ಜನತೆಗೆ ತಿಳಿಯಲಿದೆ. ಗ್ಯಾರೆಂಟಿಗಳನ್ನು ನಾವು ಕೇಳಬೇಕು. ಜನರಿಗಾಗಿ ಹೋರಾಟ ಮಾಡಬೇಕು. ಮುಂದಿನ ಚುನಾವಣೆಗಳಿಗೆ ತಯಾರಾಗಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.

ಮುಖಂಡ ಸುರೇಶ ಭೂಮರಡ್ಡಿ ಮಾತನಾಡಿ, ಸಿವಿಸಿ ಎಲ್ಲ ವರ್ಗದವರು ಮೆಚ್ಚುವ ವ್ಯಕ್ತಿ. 20ದಿನದಲ್ಲಿ ಸಾಕಷ್ಟು ಶ್ರಮಿಸಿ ಪಕ್ಷ ಕಟ್ಟಿದ್ದೇವೆ. ಜನರ ತೀರ್ಮಾನಕ್ಕೆ ತಲೆಬಾಗಬೇಕಿದೆ. ಕಾರ್ಯಕರ್ತರ ಶಕ್ತಿ ದೊಡ್ಡದು. ಜೆಡಿಎಸ್ ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಪಕ್ಷ. ಸೋತರು-ಗೆದ್ದರು ನಾವು ಕೊಟ್ಟ ಮಾತಿನಂತೆ ನಿಮ್ಮೊಂದಿಗಿದ್ದೇವೆ. ಎಲ್ಲರೂ ಧೈರ್ಯವಾಗಿರಿ ಎಂದು ಸಲಹೆ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಸಾಧಿಕ್ ಅತ್ತಾರ, ಮೂರ್ತೆಪ್ಪ ಗಿಣಿಗೇರಿ, ಮಂಜುನಾಥ ಸೊರಟೂರ ಮಾತನಾಡಿದರು. ಕೆಲ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪ್ರಮುಖರಾದ ಪ್ರದೀಪಗೌಡ ಮಾಲಿಪಾಟೀಲ್, ಈಶಪ್ಪ ಮಾದಿನೂರು, ಚನ್ನಬಸಪ್ಪ, ಮೌನೇಶ ಕರಾಟೆ ಇತರರಿದ್ದರು.

==========

ಚುನಾವಣೆಯಲ್ಲಿ  ಎಲ್ಲರೂ ತಮ್ಮ ತಮ್ಮ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಿಸಿರುತ್ತಾರೆ. ಕೆಲವೊಂದು ಕಾರಣಗಳಿಗೆ ಸೋಲು-ಗೆಲುವು ಸಂಭವಿಸುತ್ತದೆ. ಗೆದ್ದಾಗ ನಮ್ಮ ಶ್ರಮ ಕಾರಣ ಎನ್ನುವುದು, ಸೋತಾಗ ಇನ್ನೊಬ್ಬರನ್ನು ನಿಂದಿಸುವುದು ಸರಿಯಲ್ಲ. ಅವಲೋಕನ ಎಂದೆಲ್ಲ ಕಾರ್ಯಕರ್ತರನ್ನು ಕುಂದಿಸಬಾರದು. ಬದಲಿಗೆ ಅವರನ್ನು ಅಭಿನಂದಿಸಿ ಮುಂದಿನ ಚುನಾವಣೆಗೆ ಸಜ್ಜುಗೊಳಿಸಬೇಕಿದೆ.-ಸಿ.ವಿ.ಚಂದ್ರಶೇಖರ್. ಜೆಡಿಎಸ್ ಪರಾಜಿತ ಅಭ್ಯರ್ಥಿ ಕೊಪ್ಪಳ.

Get real time updates directly on you device, subscribe now.

Comments are closed.

error: Content is protected !!