ಕೆಯುಡಬ್ಲ್ಯುಜೆ ಮುಂಬಯಿ ಘಟಕ ಉದ್ಘಾಟನಾ ಕಾರ್ಯಕ್ರಮ ಡಿ.23ಕ್ಕೆ

Get real time updates directly on you device, subscribe now.

ಬೆಂಗಳೂರು:
ದೂರದ ಮುಂಬಯಿಗೆ ನಾನಾ ಕಾರಣಕ್ಕಾಗಿ ಉದ್ಯೋಗ ಅರಸಿ ಹೋದ ಕನ್ನಡಿಗರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಕರಾವಳಿ ಭಾಗದ ಜನರು ನಮ್ಮದೇ ಮುಂಬಯಿ ಎನ್ನುವಷ್ಟು ಅಭಿಮಾನದಲ್ಲಿ ಅಲ್ಲಿ ನೆಲೆಸಿದ್ದಾರೆ.
ಅನೇಕ ರಾಜ್ಯ ಮಟ್ಟದ ಕನ್ನಡ ಪತ್ರಿಕೆಗಳು ಮತ್ತು ಅಲ್ಲಿಯೇ ಪ್ರಕಟವಾಗುವ ಹಲವು ಸ್ಥಳೀಯ ಪತ್ರಿಕೆಗಳು ಕನ್ನಡಿಗರ ನಡುವೆ ಭಾವಸೇತುವಾಗಿರುವುದು ವಿಶೇಷ ಮತ್ತು ಅಭಿಮಾನದ ಸಂಗತಿ.
ದೇಶದ ಆರ್ಥಿಕ ನಗರಿ ಎಂದೇ ಗುರುತಿಸಿಕೊಂಡಿರುವ ಮುಂಬಯಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ (ಕೆಯುಡಬ್ಲ್ಯುಜೆ)ತನ್ನ ವ್ಯಾಪ್ತಿ ವಿಸ್ತರಿಸುತ್ತಿದೆ.
ಹೊರನಾಡಿನ ಘಟಕವಾಗಿ ಮುಂಬಯಿ ಕನ್ನಡ ಪತ್ರಕರ್ತರು ಕೆಯುಡಬ್ಲ್ಯುಜೆ ಭಾಗವಾಗುತ್ತಿರುವುದು ಸಂತಸದ ಸಂಗತಿ.
ಮಂಗಳೂರಿನಲ್ಲಿ ನಡೆದ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಪ್ರತಿನಿಧಿಗಳ ಸಮಾವೇಶದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕೇರಳ ರಾಜ್ಯದ ಕಾಸರಗೋಡು ಕನ್ನಡ ಪತ್ರಕರ್ತರ ಘಟಕ ಪ್ರಾರಂಭವಾಗಿದ್ದು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ.
ಮಹಾರಾಷ್ಟ್ರದಲ್ಲಿ ಕನ್ನಡ ಕಂಪು ಬೆಳಗಿಸುತ್ತಿರುವ ಮುಂಬಯಿಯಲ್ಲಿ ಕೆಯುಡಬ್ಲ್ಯುಜೆ ಘಟಕ ಡಿಸೆಂಬರ್ 23ಕ್ಕೆ ಚಾಲನೆಗೊಳ್ಳಲಿದೆ. ರೋನ್ಸ್ ಬಂಟ್ವಾಳ ಮತ್ತಿತರ ಸ್ನೇಹಿತರು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು ಕನ್ನಡಿಗ ಪತ್ರಕರ್ತರ ಸಂಘಟನೆ ಮಾಡಿರುವುದು ವಿಶೇಷ.
ಮುಂದೆ ಕರ್ನಾಟಕ ಮತ್ತು ಮಹಾರಾಷ್ಟ್ರ ಪತ್ರಕರ್ತರ ಸಮಾವೇಶ ಮಾಡುವ ಉದ್ದೇಶವನ್ನು ಕೆಯುಡಬ್ಲುಜೆ ಹೊಂದಿದೆ.
ಉದ್ಘಾಟನಾ ಕಾರ್ಯಕ್ರಮ:
ಕೆಯುಡಬ್ಲ್ಯುಜೆ ಮಹಾರಾಷ್ಟ್ರ ಘಟಕವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಸ್ಪೀಕರ್ ಯು.ಟಿ.ಖಾದರ್ ಅವರು ಸದಸ್ಯರಿಗೆ ಗುರುತಿನ ಐಡಿ ಕಾರ್ಡ್ ನೀಡಲಿದ್ದಾರೆ. ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಡಾ.ನಾರಾಯಣಗೌಡ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಆರ್.ಕೆ.ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಹಾರಾಷ್ಟ್ರ ಘಟಕದ ಅಧ್ಯಕ್ಷ ರೋನ್ಸ್ ಬಂಟ್ವಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!