ರಾಜ್ಯೋತ್ಸವ ಪ್ರಶಸ್ತಿಯನ್ನು ನನ್ನ ಗೆಳೆಯರಿಗೆ ಅರ್ಪಿಸುತ್ತೇನೆ – ಎಂ. ಎಂ. ಮದರಿ

Get real time updates directly on you device, subscribe now.

ಕೊಪ್ಪಳ : ನನಗೆ ಲಭಿಸಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನನ್ನ ಬದುಕಿಗೆ ಆಧಾರ ಸ್ತಂಭಗಳಾಗಿದ್ದ ನನ್ನ ಗೆಳೆಯರಿಗೆ ಅರ್ಪಿಸುತ್ತೇನೆ. ನನ್ನ ಗೆಳೆಯರು ನನಗೆ ಮೂರ್ನಾಲ್ಕು ವರ್ಷಗಳ ಕಾಲ ಅನ್ನ ಹಾಕಿ, ತಮ್ಮ ಬಟ್ಟೆಗಳನ್ನು ನನಗೆ ಕೊಟ್ಟು, ನನ್ನ ಏಳಿಗೆಯಲ್ಲಿ ಖುಷಿಪಡುತ್ತಿದ್ದರು. ಒಂದು ಸಣ್ಣ ಸಮುದಾಯದಲ್ಲಿ ಜನಿಸಿದ ನನ್ನಂಥವರಿಗೆ ಎತ್ತರಕ್ಕೆ ಬೆಳೆಸಿದವರು ನನ್ನ ಗೆಳೆಯರು. ಹೀಗಾಗಿ ಈ ಪ್ರಶಸ್ತಿಯನ್ನು ನನ್ನ ಗೆಳೆಯರಿಗೆ ಅಷ್ಟೇ ಅಲ್ಲದೆ, ನನ್ನ ವಿದ್ಯಾರ್ಥಿಗಳಿಗೂ ಕೂಡ ಈ ಪ್ರಶಸ್ತಿಯನ್ನು ಅರ್ಪಿಸಲು ಬಯಸುತ್ತೇನೆ. ನನಗೆ ಕವಿಯಾಗಿ ಬೇಂದ್ರೆ, ಗದ್ಯ ಲೇಖಕರಾಗಿ ಲಂಕೇಶ್ ನನ್ನ ಮೇಲೆ ಪ್ರಭಾವ ಬೀರಿದರು. ನನಗೆ ನನ್ನ ಸಾಧನೆ ಆಧಾರದ ಮೇಲೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಅನ್ನುವುದಕ್ಕಿಂತಲೂ ಒಂದು ಸಾಮಾಜಿಕ ನೆಲೆಯೊಳಗೆ ನನಗೆ ಪ್ರಶಸ್ತಿ ಬಂದಿದೆ ಎಂದನಿಸುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ನನಗಿಂತಲೂ ಹಿರಿಯರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದವರು ಇದ್ದರೂ ಕೆಳವರ್ಗದಿಂದ ಮೇಲೆ ಬಂದಿದ್ದರಿಂದ ಒಂದು ಸಾಮಾಜಿಕ ನ್ಯಾಯ ಒದಗಿಸಬೇಕು ಎನ್ನುವ ಉದ್ದೇಶಕ್ಕೆ ಸರ್ಕಾರ ನನಗೆ ಈ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹೀಗಾಗಿ ನಾನು ಸರ್ಕಾರಕ್ಕೆ ಚಿರಋಣಿಯಾಗಿದ್ದೇನೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ.ಎಂ. ಮದರಿ ಹೇಳಿದರು.

ಅವರು ರವಿವಾರ ಭಾಗ್ಯನಗರದ ತಮ್ಮ ನಿವಾಸದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ, ನಾನು ನನ್ನ ಸಮಸ್ಯೆಗಳಿಂದ ಹೊರಬರಲಿಕ್ಕೆ ಸಾಹಿತ್ಯವನ್ನು ಓದಲು ಪ್ರಾರಂಭಿಸಿದೆನು. ನಾನು ಕೇವಲ `ಗೊಂದಲಿಗ್ಯಾ’ ಎನ್ನುವ ಆತ್ಮಚರಿತ್ರೆಯನ್ನು ಮಾತ್ರ ಬರೆದಿದ್ದೇನೆ. ಸಾಹಿತ್ಯ ಕ್ಷೇತ್ರಕ್ಕಾಗಿಯೇ ರಾಜ್ಯೋತ್ಸವ ಪ್ರಶಸ್ತಿ ಪಡೆಯುವಷ್ಟು ಸಾಹಿತ್ಯವನ್ನು ನಾನು ರಚನೆ ಮಾಡಿರುವುದಿಲ್ಲ. ಈಗಿನವರು ಬೇಗನೆ ಪ್ರಸಿದ್ಧಿಗೆ ಬರಬೇಕೆಂದು ಹಾತೊರೆಯುತ್ತಿದ್ದಾರೆ. ಆದರೆ ಉತ್ತಮ ಸಾಹಿತ್ಯ ರಚನೆಯಾಗಬೇಕಾದರೆ, ಹೆಚ್ಚೆಚ್ಚು ಅಧ್ಯಯನಶೀಲರಾಗಬೇಕು ಅಂದಾಗ ಮಾತ್ರ ಒಳ್ಳೆಯ ಸಾಹಿತ್ಯ ರಚನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ, ಎ. ಎಂ. ಮದರಿಯವರ ತಂದೆಯವರು ಸಹಿತ ಒಳ್ಳೆಯ ಆಶುಕವಿಗಳಾಗಿದ್ದರು. ಗೀಗೀಪದ, ಹಂತಿಪದ, ಸಣ್ಣಾಟ, ನಾಟಕಗಳನ್ನು ರಚನೆ ಮಾಡುತ್ತಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡುತ್ತಿದ್ದ ಟಿ .ಎಸ್ .ರಾಜಪ್ಪ ಅವರು ಇವರ ತಂದೆಯವರು ಹಾಡುತ್ತಿದ್ದ ಲಾವಣಿಗಳನ್ನು ಸಂಗ್ರಹಿಸಿ, ಅವುಗಳನ್ನು ಎರಡು ಸಂಪುಟಗಳಲ್ಲಿ ಮೈಸೂರ ವಿಶ್ವವಿದ್ಯಾಲಯದಿಂದ ಪ್ರಕಟಿಸಿರುವುದು ಸಂತಸದ ಸಂಗತಿ. ತಂದೆಯ ಬಳುವಳಿಯಾಗಿ ಇವರಿಗೆ ಸಾಹಿತ್ಯ ಕ್ಷೇತ್ರ ಒಲಿದಿದೆ. ಬಹುತೇಕ ಕವಿಗಳು ಕವಿತೆಗಳನ್ನು ಬರೆಯುವುದರ ಮುಖಾಂತರವೇ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಹಾಗೆ ಇವರೂ ಸಹ ೮ನೇ ತರಗತಿ ಓದುತ್ತಿರುವಾಗಲೇ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಆದರೆ ಆರ್ಥಿಕ ತೊಂದರೆಯಿಂದಾಗಿ ಇವುಗಳನ್ನು ಪ್ರಕಟಪಡಿಸಲಿಲ್ಲ. ಕಥೆಗಳನ್ನು ಕೂಡ ಬರೆದಿದ್ದಾರೆ. ಅವು ಅಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಒಳ್ಳೆಯ ವಿಮರ್ಶಕರಾದ ಇವರಿಗೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ನಮಗೆ ಸಂತಸವನ್ನುಂಟು ಮಾಡಿದೆ ಎಂದರು.

ನಿವೃತ್ತ ಉಪನ್ಯಾಸಕರಾದ ಶಂಭುಲಿಂಗಪ್ಪ ಹರಗೇರಿ ಮಾತನಾಡುತ್ತಾ, ಹಿರಿಯ ಸಾಹಿತಿಗಳಾದ ಎ.ಎಂ. ಮದರಿ ಅವರು ಸರಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿ, ಒಳ್ಳೆಯ ಬೋಧನೆಯನ್ನು ಮಾಡುವುದರ ಮೂಲಕ ಸಾಕಷ್ಟು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಮುಂದೆ ಖಜಾನೆ ಇಲಾಖೆಯಲ್ಲಿ ಜಿಲ್ಲಾ ಖಜಾನೆ ಅಧಿಕಾರಿಯಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿದ್ದಾರೆ. ಇವರ ಆತ್ಮಚರಿತ್ರೆ `ಗೊಂದಲಿಗ್ಯಾ’ ಅಪಾರ ಓದುಗರ ಮೆಚ್ಚುಗೆ ಪಡೆದು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಕೂಡ ಪಡೆದಿರುತ್ತದೆ. ಒಂದು ಸಣ್ಣ ಅಲೆಮಾರಿ ಜನಾಂಗದಿಂದ ಬಂದ ಇವರಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದು ನಮಗೆ ಸಂತಸವನ್ನುಂಟು ಮಾಡಿದೆ ಎಂದರು.

ಪಾರ್ವತಿ ಮದರಿ, ಅಶ್ವಿನಿ ಪಾಚಂಗೆ, ವಿನಯ ಮದರಿ, ಅಕ್ಷತಾ ಮದರಿ, ವಿಜಯ ಮದರಿ, ರಂಜನಾ ಮದರಿ, ರೋಹಿತ್ ಪಾಚಂಗೆ, ಸಾತ್ವಿಕ್ ಮದರಿ, ರಿತ್ವಿಕ್ ಮದರಿ, ಅಪೂರ್ವ ಮದರಿ, ವೃಷಾಂಕ ಮದರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!
%d bloggers like this: