ಗಂಗಾವತಿಯಲ್ಲಿ ನ.೪ಕ್ಕೆ ಪಿಂಜಾರ ನದಾಫ ಸಮಾಜದ ಬೃಹತ್ ರಾಜ್ಯ ಸಮಾವೇಶ: ಕಾಶಿಮ್‌ಅಲಿ
೩೦ ಸಾವಿರ ಜನ ಭಾಗಿ: ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
ಗಂಗಾವತಿ: ಕರ್ನಾಟಕ ರಾಜ್ಯ ನದಾಫ್ ಸಂಘ ಹಾಗೂ ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ನ.,೪ ರಂದು ನಗರದ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ರಾಜ್ಯ ಮಟ್ಟದ ಪಿಂಜಾರ ನದಾಫ ಸಮಾಜ ಸಮಾವೇಶ ನಡೆಸಲಾತ್ತಿದ್ದು ೩೦ ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದು ಪಿಂಜಾರ ನದಾಫ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಖಾಸೀಮ್ ಅಲಿ ಮುದ್ದಾಬಳ್ಳಿ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದರು. ಸುವರ್ಣ ಕರ್ನಾಟಕದ ಈ ಸಂಭ್ರಮಾಚರಣೆಯಲ್ಲಿ ಏಕೀಕರಣದ ಹುತಾತ್ಮ ಪೈಲ್ವಾನ್ ಪಿಂಜಾರ ರಂಜಾನ್‌ಸಾಬ್ ಹೆಸರಲ್ಲಿ ವೇದಿಕೆ ಸಜ್ಜುಗೊಳಿಸಲಾಗುತ್ತಿದ್ದು, ಸಮಾವೇಶ ಜರುಗಲಿದ್ದು ಬೆಳಗ್ಗೆ ೧೦:೩೦ ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸಮಾರಂಭ ಉದ್ಘಾಟಿಸುವರು, ಸುವರ್ಣ ಕರ್ನಾಟಕ ಸಂಭ್ರಮಾಚರಣೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಚಾಲನೆ ನೀಡುವರು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಮಾಜದ ಲಾಂಚನ ಲೋಕರ್ಪಣೆಗೊಳಿಸುವರು, ಅಲ್ಪಸಂಖ್ಯಾತರ ಕಲ್ಯಾಣ ವಸತಿ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್, ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಹೆಚ್ ಜಲೀಲ್ ಸಾಬ್ ವಹಿಸುವರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ ೯೫ ಹಾಗೂ ಶೇಕಡ ೯೦ರಷ್ಟು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ನಡೆಸಲಾಗುವುದು. ನಿಗಮ ಮಂಡಳಿ ಸ್ಥಾಪನೆ, ಕೆಟಗರಿ ಒಂದಕ್ಕೆ ಸಂಪೂರ್ಣ ಸೇರ್ಪಡೆ ಸೇರಿದಂತೆ ಸಮಾವೇಶದಲ್ಲಿ ಸಮಾಜಕ್ಕೆ ಅಗತ್ಯ ಇರುವ ವಿಷಯಗಳ ಕುರಿತು ಚಿಂತನ ಮಂಥನ ನಡೆಸಿ ಸಮಾಜದ ಹಿರಿಯರ ಒಪ್ಪಿಗೆ ಪಡೆದು ಎಸ್ಟಿ ಗೆ ಸೇರಲು ಹೋರಾಟ ಹಮ್ಮಿಕೊಳ್ಳುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗುವುದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಪಿಂಜಾರ ನದಾಫ ಸಂಘದ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಸಿನ್‌ಸಾಬ್, ಗಂಗಾವತಿ ತಾಲೂಕಾ ಅಧ್ಯಕ್ಷ ಟಿಪ್ಪು ಸುಲ್ತಾನ್, ತಾಲೂಕ ಪ್ರಧಾನ ಕಾರ್ಯದರ್ಶಿ ಬಾಬುಸಾಬ್, ಮಾಜಿ ಪ್ರಧಾನ ಕಾರ್ಯದರ್ಶಿ ಡಿಶ್ ಜಿಲಾನಿ ಮತ್ತು ಯುವ ಮುಖಂಡರಾದ ಎ.ಟಿವಿ ಖಾದರ್ ಭಾಷಾ ಉಪಸ್ಥಿತರಿದ್ದರು.
Comments are closed.