ಕೇಂದ್ರ ಬರ ಅಧ್ಯಯನ ತಂಡದಿಂದ ಸಾಮಾನ್ಯ ಬರದ ಜತೆಗೆ ಹಸಿರು ಬರದ ಅವಲೋಕನ

Get real time updates directly on you device, subscribe now.

* ಕೊಪ್ಪಳ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಆಗಮನ
* ಸಾಮಾನ್ಯ ಬರದ ಜತೆಗೆ ಹಸಿರು ಬರದ ಅವಲೋಕನ

*ಬೆಳೆ ಹಸಿರಾಗಿ ಕಂಡಾಗ್ಯೂ ಇಳುವರಿಯಲ್ಲಿ ಭಾರಿ ಕುಸಿತ; ರೈತರ ಬರದ ದುಸ್ಥಿತಿಯನು ದಾಖಲಿಸಿದ ಅಧಿಕಾರಿಗಳ ತಂಡ*

ಕೇಂದ್ರ ಬರ ಅಧ್ಯಯನ ತಂಡವು ಅಕ್ಟೊಬರ್ 6ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಿತು.
ಕೊಪ್ಪಳ ಜಿಲ್ಲೆಯಲ್ಲಿ ಸಾಮಾನ್ಯ ಬರದ ಪರಿಸ್ಥಿತಿಯ ಜತೆಗೆ ಹಸಿರು ಬರದ ದುಸ್ಥಿತಿಯನ್ನು ಸಹ ತಿಳಿಸಲು ತಂಡದ ಅಧಿಕಾರಿಗಳನ್ನು ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನ ವಿವಿಧ ಹೋಬಳಿಯ ರೈತರ ಜಮೀನಿನಲ್ಲಿನ ಹಸಿರು ಬೆಳೆಯ ಕೆಲವು ಪ್ರದೇಶಕ್ಕೆ ಕರೆದೊಯ್ದು ಬೆಳೆ ಹಸಿರಾಗಿ ಕಂಡಾಗ್ಯು ಇಳುವರಿಯಲ್ಲಿ ಭಾರಿ ಕುಸಿತ ಆಗಿರುವುದನ್ನು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಗಮನಕ್ಕೆ ತಂದದ್ದು ವಿಶೇಷವಾಗಿತ್ತು.
ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ. ರಾಜಶೇಖರ್ ಐ.ಎ.ಎಸ್ ನೇತೃತ್ವದ, ಪಶುಸಂಗೋಪನೆ ಇಲಾಖೆಯ ನಿರ್ದೇಶಕರಾದ ಆರ್ ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾದ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಕರೀಗೌಡ ಐ.ಎ.ಎಸ್ ಅವರನ್ನು ಒಳಗೊಂಡ ಅಧಿಕಾರಿಗಳ ತಂಡವು ಪೂರ್ವ ನಿಗದಿಯಂತೆ ಮಧ್ಯಾಹ್ನ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಿಂದ ಯಲಬುರ್ಗಾ ತಾಲೂಕಿನ ಯಲಬುರ್ಗಾ ಹೋಬಳಿಯ ಬಂಡಿ ಕ್ರಾಸ್ ಪ್ರವೇಶ ಮೂಲಕ ಬರ ಅಧ್ಯಯನ ಆರಂಭಿಸಿತು.
ತಂಡವು ಮೊದಲಿಗೆ ಯಲಬುರ್ಗಾ ಹೋಬಳಿಯ
ಬಂಡಿ ಗ್ರಾಮದ ರೈತ ಮಹಿಳೆಯ ಹೊಲಕ್ಕೆ ಭೇಟಿ ನೀಡಿತು. “ಮೂರು ತಿಂಗಳಾಯ್ತು ಬಿತ್ತಿ, ಮಳೆ ಇಲ್ಲದೆ ಬೆಳೆ ಹಾಳಾಯ್ತು” ಎಂದು ಯಲಬುರ್ಗಾ ಹೋಬಳಿಯ ಬಂಡಿ ಗ್ರಾಮದ ಶರಣಮ್ಮ ರೊಟ್ಟಿ ಅವರು ತಂಡದ ಎದುರು ಗೋಳಿಟ್ಟರು. ಕಳೆದ ವರ್ಷ ಇದೆ ಸಜ್ಚಿ ಬೆಳೆಯು ಸರಿಯಾಗಿ ಬಂದಿತ್ತು ಎಂದು ಹಿಂದಿನ ವರ್ಷದ ಸಜ್ಜೆ ತೆನೆಗಳನ್ನು ರೈತ ಮಹಿಳೆಯು ಅಧಿಕಾರಿಗಳಿಗೆ ತೋರಿಸಿದರು. ಬೆಳೆ ಹಾಳಾಗಿದ್ದರಿಂದ ಜೀವನ ಹೇಗೆ ನಡಸ್ತಿರಿ? ನಿಮಗೆ ಎಷ್ಟು ಜನ ಮಕ್ಕಳು? ಬೆಳೆ ವಿಮೆ ಮಾಡಿಸಿದ್ದೀರಾ? ಎಂದು ತಂಡದ ಅಧಿಕಾರಿಗಳು ಶರಣಮ್ಮ ಅವರೊಂದಿಗೆ ಮಾತನಾಡಿ ಮಾಹಿತಿ ಪಡೆದರು.
ಬಳಿಕ ತಂಡದ ಅಧಿಕಾರಿಗಳು ಬಂಡಿ ಗ್ರಾಮದಲ್ಲಿನ ಮತ್ತೊಬ್ಬ ರೈತ ಚಂದ್ರಶೇಖರ ಬಡಿಗೇರ ಅವರ ಎರಡೂವರೆ ಎಕರೆ ಹೊಲದಲ್ಲಿ ಬೆಳೆದ ಸಜ್ಜೆ ಬೆಳೆಯ ವೀಕ್ಷಣೆ ನಡೆಸಿ ಮಾಹಿತಿ ಪಡೆದರು. ಅಲ್ಲಿಂದ ಡೊಣ್ಣೆಗುಡ್ಡ ಗ್ರಾಮಕ್ಕೆ ತೆರಳಿ ರೈತ ಮಹಿಳೆ ರೇಣುಕಾ ಡೊಣ್ಣೆಗುಡ್ಡ ಅವರ ಏಳು ಎಕರೆಯಲ್ಲಿನ ಮೆಕ್ಕೆಜೋಳದ ಬೆಳೆ ವೀಕ್ಷಣೆ ನಡೆಸಿದರು.
ಬಳಿಕ ಹನುಮನಾಳ ಹೋಬಳಿಯ ಬೆನಕನಾಳ ಗ್ರಾಮಕ್ಕೆ ತೆರಳಿ ರೈತ
ಹನುಮಪ್ಪ ಸೆಡ್ಡಿಬಟ್ಟಲದ ಅವರ ಹೊಲಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆಯ ವೀಕ್ಷಣೆ ನಡೆಸಿದರು. ‘ನಮ್ಮ ಎರಡು ಎಕರೆ ಹೊಲದಲ್ಲಿನ ಮೆಕ್ಕೆಜೋಳ ಬೆಳೆಯು ಮಳೆ ಇಲ್ಲದೇ ಹಾಳಾಗಿದೆ. ಪರಿಹಾರ ಸಿಗದೇ ಇದ್ದರೆ ಸಾವೇ ಗತಿ’ ಎಂದು ಬೆನಕನಾಳ ಗ್ರಾಮದ ರೈತ ಮಲ್ಲಪ್ಪ ಬಿಂಗಿಕೊಪ್ಪದ ಅವರು ತಂಡದ ಎದುರು ತಮ್ಮ ಅಳಲನ್ನು ತೋಡಿಕೊಂಡರು. ಬಳಿಕ ತಂಡವು ಯರಗೇರಾ ಗ್ರಾಮದ ರೈತ ಮಲ್ಲಪ್ಪ ಗಚ್ಚಿನಮನಿ ಅವರ ಎರಡೂವರೆ ಎಕರೆಯಲ್ಲಿನ ಮೆಕ್ಕೆಜೋಳದ ಬೆಳೆಯ ವೀಕ್ಷಣೆ ನಡೆಸಿತು. ‘ಮಳೆ ಬಾರದೇ ನಮ್ಮ ಹತ್ತಿ ಪ್ಲಾಟ್ ಎಲ್ಲವೂ ಹಾಳಾಗಿದೆ’ ಎಂದು ಯರಗೇರಾ ರೈತ
ಈರಪ್ಪ ಗಡಾದ ತಮ್ಮ ದುಸ್ಥಿತಿಯನ್ನು ಅಧಿಕಾರಿಗಳಿಗೆ ತಿಳಿಸಿದನು. ಬಳಿಕ ತಂಡವು ಹನುಮನಾಳ ಹೋಬಳಿಯ ಬಾದಿಮನಾಳ ಗ್ರಾಮದ ಕೆರೆಯ ಪ್ರದೇಶಕ್ಕೆ ತೆರಳಿ ವೀಕ್ಷಣೆ ನಡೆಸಿತು. ಅಲ್ಲಿಂದ ಚಳಗೇರಾ ಗ್ರಾಮಕ್ಕೆ ತೆರಳಿ ಗ್ರಾಮದ ರೈತ ಶರಣಪ್ಪ ಬಾರಕೇರ ಅವರ ತೋಟಗಾರಿಕಾ ಬೆಳೆ ಹಾನಿಯಾಗಿದ್ದನ್ನು ಪರಿಶೀಲಿಸಿದರು.
*ಸಂಸದರಿಂದ ಮನವರಿಕೆ:* ಸಂಸದರಾದ ಕರಡಿ ಸಂಗಣ್ಣ ಅವರು ಬರ ಅಧ್ಯಯನ ತಂಡದ ಅಧಿಕಾರಿಗಳೊಂದಿಗೆ ಖುದ್ದು ಹಾಜರಿದ್ದು ಯಲಬುರ್ಗಾ, ಕುಷ್ಟಗಿ ತಾಲೂಕಿನ ವಿವಿಧೆಡೆ ಸಂಚರಿಸಿ, ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಖುದ್ದು ತಾವೇ ಮನವರಿಕೆ ಮಾಡಿದರು.
*ಜಿಲ್ಲಾಧಿಕಾರಿಗಳಿಂದ ಮಾಹಿತಿ* ಕೊಪ್ಪಳ ಜಿಲ್ಲೆಯಿಂದ ಕೇಂದ್ರ ಸರ್ಕಾರಕ್ಕೆ ಸಾಮಾನ್ಯ ಬರದ ವರದಿ ಜತೆಗೆ ಗ್ರೀನ್ ಡ್ರಾಟ್ (ಹಸಿರು ಬರ) ವರದಿಯನ್ನು ಸಹ ಕಳುಹಿಸಲಾಗಿದೆ. ಕೆಲವು ಕಡೆಗಳಲ್ಲಿ ಬೆಳೆ ಹಸಿರಾಗಿ ಕಾಣಿಸಿದಾಗ್ಯ ರೈತರಿಗೆ ಕಡಿಮೆ ಇಳುವರಿ ಬಂದು ನಷ್ಟ ಅನುಭವಿಸಿದ್ದಾರೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು, ತಂಡದವರಿಗೆ ಹಸಿರು ಬೆಳೆ ತೋರಿಸಿ, ಆ ಹಸಿರು ಬೆಳೆಯಿಂದ ಇಳುವರಿ ಪ್ರಮಾಣದಲ್ಲಿ ಕುಸಿತ ಉಂಟಾಗಿ ರೈತರು ನಷ್ಟ ಅನುಭವಿಸಿದ್ದಾರೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
*ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ:* ಬರ ಇದ್ದಾಗಲು ಬೆಳೆಗಳು ಹಸಿರಾಗಿರುತ್ತವೆ. ಬೆಳೆಗಳು ಹಸಿರಾಗಿದ್ದಾಗ್ಯು ಇಳುವರಿನಲ್ಲಿ ಕುಂಠಿತವಾಗುತ್ತದೆ ಎಂಬುದನ್ನು ಗಮನಿಸಬೇಕಾಗುತ್ತದೆ. ಕೊಳವೆಬಾವಿಯ ನೀರಾವರಿ ಪ್ರದೇಶ, ಹಸಿರು ಬೆಳೆ ಪ್ರದೇಶ ಇದ್ದಾಗ್ಯೂ ಮಳೆಯಾಗದೇ ಕುಷ್ಟಗಿ ತಾಲೂಕಿನ ಬಹುತೇಕ ಪ್ರದೇಶದಲ್ಲಿನ ಹಸಿರು ಬೆಳೆಯಿಂದ ಅತೀ ಕಡಿಮೆ ಇಳುವರಿ ಬಂದು ರೈತರಿಗೆ ಸಾಕಷ್ಟು ಹಾನಿಯಾಗಿದೆ
ಎಂಬುದರ ಬಗ್ಗೆ ಮನವರಿಕೆ ಮಾಡಲು, ಅತಿ ಕಡಿಮೆ ಮಳೆ ಬಿದ್ದ ಯಲಬುರ್ಗಾ, ಕುಷ್ಟಗಿ ತಾಲೂಕುಗಳಿಗೆ ಸಹ ಬರ ಅಧ್ಯಯನ ತಂಡವನ್ನು ಕರೆಯಿಸಿ, ತಂಡದಲ್ಲಿನ ಅಧಿಕಾರಿಗಳಿಗೆ ಇಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ಕೊಪ್ಪಳ
ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಇದೆ ವೇಳೆ ಸುದ್ದಿಗಾರರಿಗೆ ತಿಳಿಸಿದರು.
ಈ ವೇಳೆ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕುಷ್ಟಗಿ ತಹಸೀಲ್ದಾರ ಶ್ರುತಿ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಉಪ ಕೃಷಿ ನಿರ್ದೇಶಕರು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ಗ್ರಾಮಸ್ಥರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: