ಉಪ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ, ವಿಚಾರಣೆ ಕಾರ್ಯಕ್ರಮ -ಸಿದ್ಧತೆ ಪರಿಶೀಲಿಸಿದ ಲೋಕಾಯುಕ್ತ ಎಸ್ಪಿ ಡಾ.ರಾಮ್ ಎಲ್ ಅರಸಿದ್ಧಿ

Get real time updates directly on you device, subscribe now.

 ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ ಅವರು ಅಕ್ಟೋಬರ್ 5ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ, ಗೌರವಾನ್ವಿತ ಉಪಲೋಕಾಯುಕ್ತರು ಕೊಪ್ಪಳ ಜಿಲ್ಲೆಯಲ್ಲಿ ನಡೆಸಲಿರುವ ಕಾರ್ಯಕ್ರಮದ ಸಿದ್ಧತೆಯನ್ನು ಪರಿಶೀಲಿಸಿದರು.
ಕಾರ್ಯಕ್ರಮದ ಸ್ಥಳವಾದ ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲ್‌ನಲ್ಲಿನ ವೇದಿಕೆ, ಆಸನ ವ್ಯವಸ್ಥೆ, ಅಹವಾಲು ಸ್ವೀಕಾರ ಮತ್ತು ವಿಚಾರಣೆಯ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಗೌರವಾನ್ವಿತ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎಸ್. ಫಣೀಂದ್ರ ಅವರು ಅಕ್ಟೋಬರ್ 07 ರಿಂದ ಅಕ್ಟೋಬರ್ 09ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 01.30 ರವರೆಗೆ ಹಾಗೂ ಮಧ್ಯಾಹ್ನ 02.30 ರಿಂದ 05.00 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಜತೆಗೆ ವಿಚಾರಣೆ ಮಾಡಲಿದ್ದಾರೆ. ಈ ಕಾರ್ಯಕ್ರಮವು ಪೂರ್ವನಿಗದಿಯಂತೆ ಅಚ್ಚುಕಟ್ಟಾಗಿ ನಡೆಯುವಂತಾಗಬೇಕು. ಸಮಯಪಾಲನೆ ಮಾಡಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಗೊಂದಲವಾಗದಂತೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಅಧಿಕಾರಿ ಅಥವಾ ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸವಾಗದೇ, ಅಧಿಕಾರಿ, ನೌಕರರಿಂದ ತೊಂದರೆ ಅನುಭವಿಸಿದ ಸಾರ್ವಜನಿಕರು ಗೌರವಾನ್ವಿತ ಉಪ ಲೋಕಾಯುಕ್ತರ ಮುಂದೆ ತಮ್ಮ ಅಹವಾಲುಗಳನ್ನು ಲಿಖತ ರೂಪದಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಹವಾಲು ಸ್ವೀಕಾರ ಜತೆಗೆ ಇದೆ ಅವಧಿಯಲ್ಲಿ ಕೊಪ್ಪಳ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ (ಗೌರವಾನ್ವಿತ ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಅಥವಾ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿದ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆಯನ್ನು ಗೌರವಾನ್ವಿತ ಉಪಲೋಕಾಯುಕ್ತರು ನಡೆಸುತ್ತಾರೆ ಎಂಬುದಾಗಿ ಈ ಕಾರ್ಯಕ್ರಮದ ಬಗ್ಗೆ ಈಗಾಗಲೇ ಎಲ್ಲಾ ರೀತಿಯಿಂದ ಪ್ರಚಾರ ನಡೆಸಲಾಗಿದೆ. ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಕೊಪ್ಪಳ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಸಲೀಂ ಪಾಶಾ ಅವರು ತಿಳಿಸಿದರು.
ಈ ವೇಳೆ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್‌ಗಳಾದ ಗಿರೀಶ್ ರೋಡಕರ್, ಚಂದ್ರಪ್ಪ, ರಾಜೇಶ ಮತ್ತು ಕೊಪ್ಪಳ ಲೋಕಾಯುಕ್ತ ಕಚೇರಿಯ ರಾಮಣ್ಣ ಅವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!