ರಾಜ್ಯದ ಮಾನ ತೆಗದ ಕಾಂಗ್ರೆಸ್ ಗೆ ಶಿಕ್ಷಕರು ಪಾಠ ಕಲಿಸಲಿದ್ದಾರೆ: ಸಿವಿಸಿ

ಕೊಪ್ಪಳ: ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಪಕ್ಷದಿಂದ ಜನಪರ ಸೇವೆ ಅಸಾಧ್ಯ ಎಂದು ಭಾವಿಸಿರುವ ಶಿಕ್ಷಕರು ರಾಜ್ಯದ ಮಾನ ತೆಗದ ಆ ಪಕ್ಷಕ್ಕೆ
ಪರಿಷತ್ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಶಶೀಲ್ ನಮೋಶಿ ಪರವಾಗಿ ಕೊಪ್ಪಳ ನಗರದ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು.

“ಕಡಿಮೆ ಗೌರವಧನ, ಸೇವೆಯ ಅಭದ್ರತೆ, ನೇಮಕಾತಿ
ಹಾಗೂ ವೇತನ ಪಾವತಿಯಲ್ಲಿ
ವಿಳಂಬ, ಹೆಚ್ಚುವರಿ ಕೆಲಸದ ಒತ್ತಡ, ಮೂಲಸೌಕರ್ಯಗಳ ಕೊರತೆ, ಪಿಂಚಣಿ ಗೊಂದಲ ಹಾಗೂ ಶಿಕ್ಷಕರನ್ನು ಬೋಧನೆಯ ಜೊತೆಗೆ ಚುನಾವಣೆ ಕರ್ತವ್ಯ, ಜನಗಣತಿ, ವಿವಿಧ ಸರ್ಕಾರಿ ಸಮೀಕ್ಷೆಗಳು ಮತ್ತು ಕಾಲೇಜಿನ ಆಡಳಿತಾತ್ಮಕ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಬೋಧನೆಯ ಗುಣಮಟ್ಟ ಕುಸಿದಿದೆ. ಕೆ ಪಿ ಎಸ್ ಸಿ ನೇಮಕಾತಿ ಹಗರಣದಿಂದ ಉದ್ಯೋಗಿಕಾಂಕ್ಷಿಗಳು
ಭ್ರಮನಿರಸನಗೊಂಡಿದ್ದಾರೆ.
ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಸೋತಿದೆ. ಇಂತಹ ಸಂದರ್ಭದಲ್ಲಿ ಎನ್ ಡಿ ಎ ಒಕ್ಕೂಟದಿಂದ ಮಾತ್ರ ಶಿಕ್ಷಕರಿಗೆ ನ್ಯಾಯ ಸಿಗಲು ಸಾಧ್ಯ,” ಎಂದು ಅವರು ಹೇಳಿದರು.
ಕಳೆದ ಮೂರು ದಶಕಗಳಿಂದಲೂ ನಮೋಶಿಯವರು ಪರಿಷತ್ ನಲ್ಲಿ ಶಿಕ್ಷಕರ ಧ್ವನಿಯಾಗಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಅಂತವರು ಪರಿಷತ್ ನಲ್ಲಿ ಇರಬೇಕೆಂದು ಶಿಕ್ಷಕರು ತೀರ್ಮಾನಿಸಿರುವುದು ನಮೋಶಿ ಅವರ ಗೆಲುವನ್ನು ಖಚಿತಪಡಿಸಿದೆ ಎಂದು ಹೇಳಿದರು.
ಅವೈಜ್ಞಾನಿಕ ಯೋಜನಗಳಿಂದ ಆರ್ಥಿಕತೆ ಹಳಿ ತಪ್ಪಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಬೆದರಿಕೆ ಹಾಕಿ ಅಧಿಕಾರದಿಂದ ಕೆಳಗಿಳಿಸಲಾಗಿದೆ. ಹಿರಿಯ ಸಚಿವರನ್ನು ಸ್ಟಿಂಗ್ ಆಪರೇಷನ್ ಮೂಲಕ ಬೆದರಿಸಿ ಅವರ ಧ್ವನಿಯನ್ನು ಅಡಗಿಸಲಾಗಿದೆ. ಇಂತಹ ಅನೈತಿಕ ಪರಂಪರೆ ಆರಂಭಿಸಿ ದೇಶದಲ್ಲಿ ಕರ್ನಾಟಕದ ಮರ್ಯಾದೆಯನ್ನು ಕಾಂಗ್ರೆಸ್
ಹರಾಜು ಹಾಕಿದೆ ಎಂದು ಕಿಡಿ ಕಾರಿದರು.
ವ್ಯಾಪಕವಾಗಿ ನಮೋಶಿ ಅವರನ್ನು ಬೆಂಬಲಿಸಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾ ಸಂಸ್ಕೃತಿ ಘಟಕದ ಅಧ್ಯಕ್ಷ ಮಂಜುನಾಥ ಸೊರಟೂರ, ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷ ವೀರೇಶ್ ಗೌಡ್ರು ದಳಪತಿ, ಜಿಲ್ಲಾ ಎಸ್ ಟಿ ಘಟಕದ ಅಧ್ಯಕ್ಷ ರಮೇಶ್ ಡಂಬ್ರಳ್ಳಿ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಏಳಗಿ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.