ಪ್ರಶ್ನಿಸುವವರ ಬಾಯಿ ಮುಚ್ಚಿಸಲು ಅಟ್ರಾಸಿಟಿ ಕಾಯ್ದೆ ದುರ್ಬಳಕೆ: ಶಾಸಕ ಹಿಟ್ನಾಳ್ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಹ್ಯಾಟಿ ಮುಂಡರಗಿಯಲ್ಲಿ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದ ಶ್ರೀರಾಮುಲು ಮತ್ತು ಬಿಜೆಪಿ ನಾಯಕರು
ಕೊಪ್ಪಳ:ಮೂಲಭೂತ ಸೌಕರ್ಯಕ್ಕಾಗಿ ಶಾಸಕರನ್ನು ಪ್ರಶ್ನಿಸಿದ್ದಕ್ಕೆ ಸುಳ್ಳು ಜಾತಿನಿಂದನೆ ಪ್ರಕರಣ ಎದುರಿಸುತ್ತಿರುವ ಹ್ಯಾಟಿ ಮುಂಡರಗಿ ಗ್ರಾಮದ ಸಂತ್ರಸ್ತ ಕುಟುಂಬಗಳನ್ನು ಹಿರಿಯ ನಾಯಕ ಶ್ರೀ ಬಿ. ಶ್ರೀರಾಮುಲು ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಶಶಿಲ್ ನಮೋಶಿ ಅವರ ಪರವಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ನಡೆಸಲು ಆಗಮಿಸಿದ್ದ ಅವರು, ಹ್ಯಾಟಿ ಮುಂಡರಗಿ ಗ್ರಾಮಕ್ಕೆ ಭೇಟಿ ನೀಡಿದರು. ಇದೇ ವೇಳೆ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ ಅವರು, ಶಾಸಕರ ಬೆಂಬಲಿಗರಿಂದ ಆಗಿರುವ ದೌರ್ಜನ್ಯದ ಬಗ್ಗೆ ಖುದ್ದಾಗಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು, “ಜಾತಿ ನಿಂದನೆ ಹಾಗೂ ದೌರ್ಜನ್ಯ ತಡೆ ಕಾಯ್ದೆಗಳು ಇರುವುದು ನಿಜವಾಗಿ ನೊಂದ ಶೋಷಿತ ಹಾಗೂ ದಲಿತ ಸಮುದಾಯಗಳಿಗೆ ನ್ಯಾಯ ಒದಗಿಸುವುದಕ್ಕಾಗಿ. ಆದರೆ, ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಂತಹವರು, ತಮ್ಮನ್ನು ಪ್ರಶ್ನೆ ಮಾಡುವ ಸಾರ್ವಜನಿಕರ ಬಾಯಿ ಮುಚ್ಚಿಸಲು ಈ ಕಾಯ್ದೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡುವ ಬಹುದೊಡ್ಡ ಅಪಮಾನ. ಇಂಥವರಿಂದಲೇ ಸಮಾಜದಲ್ಲಿ ದಲಿತರ ಮೇಲೆ ತಾತ್ಸಾರ ಭಾವನೆ ಬೆಳೆಯಲು ಸಾಧ್ಯ” ಎಂದು ತೀವ್ರ ವಾಗ್ದಾಳಿ ನಡೆಸಿದರು.
“ನೊಂದ ಕುಟುಂಬಗಳ ಪರವಾಗಿ ನಾನಿದ್ದೇನೆ ಹಾಗೂ ಕೊಪ್ಪಳದ ಬಿಜೆಪಿ ನಾಯಕರಿದ್ದಾರೆ, ಯಾರಿಗೂ ಹೆದರುವ ಅಗತ್ಯವಿಲ್ಲ” ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು. ಇದಕ್ಕೂ ಮುನ್ನ ಗ್ರಾಮದಲ್ಲಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರ ನಾಮಫಲಕಗಳಿಗೆ ಶ್ರೀರಾಮುಲು ಅವರು ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್, ಗ್ರಾಮೀಣ ಮಂಡಲ ಅಧ್ಯಕ್ಷ ವೀರೇಶ್ ಸಜ್ಜನ್ ಹಾಗೂ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಹ್ಯಾಟಿ ಮುಂಡರಗಿ ಗ್ರಾಮಸ್ಥರು ಉಪಸ್ಥಿತರಿದ್ದರು.