ನೀರು ಬಿಡುಗಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಮುನಿರಾಬಾದ ಕಾಡಾ ಕಚೇರಿ ಎದುರು ಪ್ರತಿಭಟನೆಗೆ ಬಿಜೆಪಿ ಬೆಂಬಲ

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆಯ 11-ಎ ವಿತರಣಾ ವ್ಯಾಪ್ತಿಯ ಉಪಕಾಲುವೆಗಳಿಗೆ ತಕ್ಷಣ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ, ರೈತರು ಹಾಗೂ ಬಿಜೆಪಿ ಮುಖಂಡರು ಸೋಮವಾರ ಹಿಟ್ನಾಳದ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹಿಟ್ನಾಳ, ಬಂಡಿಹರ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಈಗಾಗಲೇ ಹತ್ತಾರು ಸಭೆಗಳನ್ನು ನಡೆಸಿದ್ದಾರೆ. ವಿಜಯನಗರ ಎಡದಂಡೆ ಕಾಲುವೆ ಮತ್ತು ಹಿರೇಹಳ್ಳ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ತುಂಗಭದ್ರಾ ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, “ಮುಖ್ಯಮಂತ್ರಿಗಳೇ, ನಾವು ನಿಮ್ಮ ಸರ್ಕಾರವನ್ನು ನಂಬಿ ನಿನ್ನೆಯಿಂದ ಅಥವಾ ಮೊನ್ನೆಯಿಂದ ಕೃಷಿ ಮಾಡುತ್ತಿಲ್ಲ. “ಅಣೆಕಟ್ಟಿನ ನೀರನ್ನು ನಂಬಿ ಬೆಳೆ ಬೆಳೆಯಬೇಡಿ ಎಂದು ಆದೇಶಿಸಿರುವುದು ಸರಿಯಾದ ಕ್ರಮವಲ್ಲ. ಇದೇ ಆದೇಶ ನೆಪ ಮಾಡಿಕೊಂಡು ಕಾಲುವೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ” ಎಂದು ಕಡ್ಡಿಮುರಿದಂತೆ ಅಧಿಕಾರಿಗಳು ಉತ್ತರಿಸಿದ್ದಾರೆ. ರೈತರೊಂದಿಗೆ ಕನಿಷ್ಠ ಸೌಜನ್ಯದಿಂದಲೂ ವರ್ತಿಸದ ಅಧಿಕಾರಿಗಳ ಧೋರಣೆ ಖಂಡನೀಯ ಎಂದು ಬಸವರಾಜ ಕ್ಯಾವಟರ್ ಅವರು ಕಿಡಿಕಾರಿದರು. ಮುಖ್ಯಮಂತ್ರಿಗಳಿಗೆ ಹೊರರಾಜ್ಯಗಳ ಒತ್ತಡವಿರುವುದರಿಂದ ರೈತರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ.
ತುರ್ತು ಸಚಿವ ಸಂಪುಟ ಸಭೆಯ ಬಳಿಕವೂ ರೈತರಿಗೆ ನೀರು ನೀಡಲಾಗುವುದಿಲ್ಲ ಎಂದು ಹೇಳಿರುವುದು ಸರಿಯಲ್ಲ. ನೀವು ಹೊರರಾಜ್ಯಗಳ ಮುಖ್ಯಮಂತ್ರಿಗಳೋ ಅಥವಾ ಕರ್ನಾಟಕದ ಮುಖ್ಯಮಂತ್ರಿಗಳೋ?” ಎಂದು ಕ್ಯಾವಟರ್ ಅವರು ಪ್ರಶ್ನಿಸಿದರು. ತುಂಗಭದ್ರಾ ಜಲಾಶಯ ನಿರ್ಮಾಣಕ್ಕಾಗಿ ನಮ್ಮ ಹಿರಿಯರು ಜಮೀನು ಕಳೆದುಕೊಂಡಿದ್ದಾರೆ; ಬೆವರು ಮತ್ತು ರಕ್ತ ಹರಿಸಿದ್ದಾರೆ. ಈ ನೀರಿನ ಮೇಲೆ ನಮಗೆ ಐತಿಹಾಸಿಕ ಹಕ್ಕಿದೆ. ಇದು ಯಾರೊಬ್ಬರ ವೈಯಕ್ತಿಕ ಆಸ್ತಿಯೂ ಅಲ್ಲ. ರಾಜಕೀಯ ನಾಯಕರ ದಯೆ ಅಥವಾ ಭಿಕ್ಷೆ ನಮಗೆ ಬೇಡ. ನಮ್ಮ ಪಾಲಿನ ನೀರಿಗಾಗಿ, ನಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೇವೆ” ಎಂದು ಹೇಳಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಎರಡು ವರ್ಷಗಳ ಹಿಂದೆ ಕ್ರಸ್ಟ್ ಗೇಟ್ ಮುರಿದ ತಕ್ಷಣವೇ ಉಳಿದ ಗೇಟ್‌ಗಳ ದುರಸ್ತಿಯನ್ನು ಸಮರ್ಪಕವಾಗಿ ಕೈಗೊಂಡಿದ್ದರೆ, ಇಂದು ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬರುತ್ತಿರಲಿಲ್ಲ. ಜಲಾಶಯದ ಇಂದಿನ ದುಸ್ಥಿತಿಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ನಂತರ ಮಾತನಾಡಿದ ವಿವಿಧ ರೈತ ಮುಖಂಡರು, ವಿಜಯನಗರ ಕಾಲುವೆಗಳ ನೀರು ಸರಕಾರ ನೀಡುವ ಭಿಕ್ಷೆಯಲ್ಲ. ಸುಮಾರು 600 ವರ್ಷಗಳ ಹಿಂದೆ ವಿಜಯನಗರದ ಅರಸರು ಈ ಭಾಗದ ರೈತರಿಗೆ ನೀಡಿದ ಕೊಡುಗೆ ಇದು. ಕೊರಗಲ್ ಅಣೆಕಟ್ಟಿನ ಐತಿಹಾಸಿಕ ನೀರಾವರಿ ವ್ಯವಸ್ಥೆಯ ಆಧಾರದ ಮೇಲೆಯೇ ನಂತರ ತುಂಗಭದ್ರಾ ಜಲಾಶಯ ನಿರ್ಮಾಣವಾಗಿದೆ. ತುಂಗಭದ್ರಾ ಜಲಾಶಯ ನಿರ್ಮಾಣಕ್ಕೂ ಮೊದಲಿನಿಂದ ನಮ್ಮ ರೈತರು ಈ ಕಾಲುವೆಗಳ ನೀರನ್ನು ಅವಲಂಬಿಸಿ ಬದುಕಿದ್ದಾರೆ” ಎಂದರು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ತೀರ್ಪಿನಲ್ಲಿ ವಿಜಯನಗರ ಕಾಲುವೆಗಳ ಐತಿಹಾಸಿಕ ನೀರಿನ ಬಳಕೆಯನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಬಸವಣ್ಣ, ರಾಮಸಾಗರ, ಕಂಪ್ಲಿ, ಸಿರುಗುಪ್ಪ, ದೇಸನೂರು, ಕೊರಗಲ್, ಶಿವಪುರ, ಆನೆಗುಂದಿ–ಸಣಾಪುರ, ಮೇಲ್ಗಂಗಾವತಿ ಮತ್ತು ಕೆಳಗಂಗಾವತಿ ಸೇರಿದಂತೆ ವಿಜಯನಗರ ಕಾಲುವೆಗಳನ್ನು ನ್ಯಾಯಮಂಡಳಿಯ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ತೀರ್ಪಿನ ಪ್ರಕಾರ, 1951–52ರಿಂದ 1960–61ರವರೆಗೆ ವಿಜಯನಗರ ಕಾಲುವೆಗಳಿಗೆ ಪ್ರತಿವರ್ಷ 5.71 TMC ನೀರು ಬಳಕೆಯಾಗುತ್ತಿತ್ತು. 1960ರ ಸೆಪ್ಟೆಂಬರ್ ವೇಳೆಗೆ ವಿಜಯನಗರ ಕಾಲುವೆಗಳ ಖಚಿತ ವಾರ್ಷಿಕ ನೀರಿನ ಬಳಕೆಯನ್ನು 5.71 TMC ಎಂದು ನ್ಯಾಯಮಂಡಳಿ ಪರಿಗಣಿಸಿದೆ. ಕೃಷ್ಣಾ ನದಿಯ ನೀರನ್ನು ಹಂಚಿಕೆ ಮಾಡುವಾಗ ವಿಜಯನಗರ ಕಾಲುವೆಗಳ ವಾರ್ಷಿಕ 5.71 TMC ಐತಿಹಾಸಿಕ ನೀರಿನ ಬಳಕೆಗೆ, ಮುಂದೆ ಯೋಜಿಸಲಾಗುವ ಹೊಸ ನೀರಿನ ಬಳಕೆಗಳಿಗಿಂತ ಆದ್ಯತೆ ನೀಡಬೇಕು ಎಂದು ನ್ಯಾಯಮಂಡಳಿ ಸ್ಪಷ್ಟವಾಗಿ ತೀರ್ಮಾನಿಸಿದೆ. ವಿಜಯನಗರ ಕಾಲುವೆಗಳ ನೀರಿನ ಬಳಕೆಯನ್ನು ಸಣ್ಣ ನೀರಾವರಿ ಯೋಜನೆಗಳ ಲೆಕ್ಕದಲ್ಲಿ ಸೇರಿಸದೆ ಪ್ರತ್ಯೇಕವಾಗಿ ಪರಿಗಣಿಸಬೇಕು ಎಂಬುದನ್ನೂ ದಾಖಲೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ವಿಜಯನಗರ ಕಾಲುವೆಗಳಿಗೆ ನೀರು ಕೇಳುತ್ತಿರುವುದು ಹೊಸ ಬೇಡಿಕೆಯಲ್ಲ.
ನ್ಯಾಯಮಂಡಳಿಯೇ ಗುರುತಿಸಿರುವ ಐತಿಹಾಸಿಕ ಮತ್ತು ಆದ್ಯತೆಯ ನೀರಿನ ಹಕ್ಕಾಗಿದೆ ಎಂದು ರೈತ ಮುಖಂಡರು ಪ್ರತಿಪಾದಿಸಿದರು. ಕಾಲುವೆಗಳಿಗೆ ನೀರು ಹರಿಸದಿದ್ದರೆ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ರೈತರ ಮನೆಗಳಲ್ಲಿ ಆಹಾರಧಾನ್ಯದ ದಾಸ್ತಾನು ಇಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಲಿದೆ. ಜನರು ಮತ್ತು ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಹಿಟ್ನಾಳ, ಬಂಡಿಹರ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ನ್ಯಾಯಯುತ ನೀರಿನ ಹಕ್ಕನ್ನು ಸರ್ಕಾರ ಕಾಪಾಡಬೇಕು. ವಿಜಯನಗರ ಎಡದಂಡೆಯ 11-ಎ ವಿತರಣಾ ವ್ಯಾಪ್ತಿಯ ಉಪಕಾಲುವೆಗಳಿಗೆ ತಕ್ಷಣ ನೀರು ಹರಿಸಬೇಕು ಎಂದು ಆಗ್ರಹಿಸಿದರು. ಈ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಪಕ್ಷಾತೀತವಾಗಿ ಎಲ್ಲ ರೈತರೂ ಒಗ್ಗೂಡಿ, ವಿಜಯನಗರ ಕಾಲುವೆಗಳಿಗೆ ನೀರು ಹರಿಸುವವರೆಗೆ ಹೋರಾಟ ಮುಂದುವರಿಸಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ಮುನಿರಾಬಾದ್‌ನ ತುಂಗಭದ್ರಾ ಜಲಾಶಯದ ಎದುರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ರೈತರು ಪ್ರತಿಜ್ಞೆ ಮಾಡಿದರು.
ಬಿಜೆಪಿ ಮುಖಂಡರು ಪ್ರಾದೇಶಿಕ ನೀರಾವರಿ ಅಧಿಕಾರಿಯೊಂದಿಗೆ ಮಾತನಾಡಿ, “ರಾಯ ಬಸವ ಕಾಲುವೆಗೆ ನೀರು ಹರಿಸಿದಂತೆ ವಿಜಯನಗರ ಎಡದಂಡೆಯ 11-ಎ ಉಪಕಾಲುವೆಗಳಿಗೂ ನೀರು ಹರಿಸಬೇಕು” ಎಂದು ಒತ್ತಾಯಿಸಿದರು. ಇತ್ತೀಚೆಗೆ ರೈತರ ನೀರು ಬಿಡುಗಡೆ ಮನವಿಯನ್ನು ತಿರಸ್ಕರಿಸಿ ಹೊರಡಿಸಿದ ಆದೇಶದ ಪ್ರತಿಯನ್ನು ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಿಜಯನಗರ ಎಡದಂಡೆಯ 11-ಎ ವಿತರಣಾ ವ್ಯಾಪ್ತಿಗೆ ತಕ್ಷಣ 1.5 TMC ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರೈತರು ಸಹಿ ಮಾಡಿದ ಮನವಿ ಪತ್ರವನ್ನು ತುಂಗಭದ್ರಾ ಮಂಡಳಿಯ ಅಧಿಕಾರಿಗಳಿಗೆ ಸಲ್ಲಿಸಿದರು. ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ಹೋರಾಟದ ರೂಪುರೇಷೆಯನ್ನು ಪ್ರತಿಭಟನಾ ಸಭೆಯಲ್ಲೇ ನಿರ್ಧರಿಸಿ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಡಾ. ಬಸವರಾಜ್ ಕ್ಯಾವಟರ್, ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಮೈನಹಳ್ಳಿ, ವೀರೇಶ್ ಸಜ್ಜನ್, ಗಣೇಶ್ ಹೊರತಟ್ನಾಳ, ಪ್ರಭುರಾಜ ಪಾಟೀಲ್, ಪ್ರದೀಪ್ ಹಿಟ್ನಾಳ, ಖಾಸಿಂಸಾಬ್, ವಿರೂಪಾಕ್ಷಯ್ಯ ಹಿರೇಮಠ , ವೆಂಕಟರಾವ್ ರೆಡ್ಡಿ, ಕಾಶಯ್ಯ ಅಜ್ಜ, ಹುಲಗಪ್ಪ ಬಾಳಿಕಾಯಿ , ಚನ್ನಪ್ಪಮಲಗಿ , ಖಾಜಾಹುಸೇನ್ ಹೊಸಳ್ಳಿ , ವೆಂಕಟೇಶ್ ಹಲವರ್ತಿ , ಹುಲಗಪ್ಪ ಗಡಾದ ಅನ್ವರ್ ಸಾಬ , ಮಹೇಶ್ ಮಂಗಳೂರು , ಯಂಕಪ್ಪ ಹೊಸಳ್ಳಿ , ಅಶೋಕ ಗುಳದಳ್ಳಿ, ನೀಲಕಂಠಯ್ಯ ಹಾಗೂ ಹಿಟ್ನಾಳ, ಬಂಡಿಹರ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ರೈತ ಮುಖಂಡರು ಪಾಲ್ಗೊಂಡಿದ್ದರು.
Comments are closed.