ಕುಷ್ಟಗಿ : ತಾಲೂಕಿನ ಕನಕೊಪ್ಪ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಲವರ್ಧನೆಗೆ ಖಾಸಗಿ ಕಂಪನಿಯ ನೌಕರನೊಬ್ಬ ತನ್ನ ದುಡಿಮೆಯ ಉಳಿತಾಯದ ಒಂದು ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿ ಗಮನ ಸೆಳೆದಿದ್ದಾರೆ.
ಖಾಸಗಿ ಸೀಡ್ಸ್ ಕಂಪನಿಯಲ್ಲಿ ಉದ್ಯೋಗಿ ಆಗಿರುವ ಕನಕೊಪ್ಪ ಗ್ರಾಮದ ಶಿಕ್ಷಣ ಪ್ರೇಮಿ ನೀಲಪ್ಪ ಗದ್ದಿ ಎಂಬುವರು ತಮ್ಮ ದುಡಿಮೆಯಲ್ಲಿ ಕ್ರೂಢೀಕರಿಸಿದ ಉಳಿತಾಯದ ಹಣವನ್ನು ನೀಡಿ ಶಿಕ್ಷಣ ಪ್ರೇಮ ಮೆರೆದಿದ್ದಾರೆ. ಸರಕಾರಿ ಶಾಲಾ ಮಕ್ಕಳಿಗೆ ಪ್ಲೋರೈಡ್ ಮುಕ್ತ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ಮಾರ್ಟ್ ಕ್ಲಾಸ್ ಸೌಕರ್ಯ ಒದಗಿಸಿ ಗುಣಮಟ್ಟದ ಶಿಕ್ಷಣದ ಅನುಕೂಲಕ್ಕೆ ನನ್ನ ದುಡಿಮೆಯ ಹಣ ಬಳಕೆಯಾಗಲಿ ಎಂಬ ಉದ್ಧೇಶದಿಂದ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಗೆ ತಮ್ಮ ಹಣವನ್ನು ಮುಖ್ಯೋಪಾಧ್ಯಾಯ ಶರಣಪ್ಪ ತುಮ್ಮರಿಕೊಪ್ಪ ಅವರ ಮೂಲಕ ಹಸ್ತಾಂತರಿಸಿದ್ದಾರೆ.
ಶಾಲೆಯ ಮಕ್ಕಳು ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶದಿಂದ ಧನಸಹಾಯ ಮಾಡಿದ ನೀಲಪ್ಪ ಗದ್ದಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಅವರು ತಮ್ಮ ಇಲಾಖೆಯಿಂದ ಗೌರವಿಸಿ ಮಾತನಾಡಿ, ಸರಕಾರಿ ಶಾಲೆಗಳ ಬಗ್ಗೆ ಸಮುದಾಯದವರು ಸಹಾಯ, ಸಹಕಾರ ನೀಡಿದಾಗ ಶಾಲೆಗಳು ಬಲವರ್ಧನೆ ಆಗುತ್ತವೆ. ಪ್ರಸ್ತುತ ದೇಣಿಗೆ ನೀಡಿದ ಇಂತಹ ಮಹನೀಯರ ಸಂಖ್ಯೆ ಹೆಚ್ಚಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ದೇಣಿಗೆ ಸ್ವೀಕರಿಸಿದ ಮುಖ್ಯೋಪಾಧ್ಯಾಯ ಶರಣಪ್ಪ ತುಮ್ಮರಿಕೊಪ್ಪ ಅವರು ಮಾತನಾಡಿ, ಶಾಲಾಭಿವೃದ್ಧಿಗಾಗಿ ಸದರಿ ದೇಣಿಗೆ ಹಣವನ್ನು ಸದುಪಯೋಗ ಪಡಿಸಿಕೊಳ್ಳಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಆರ್.ಪಿ. ಲೋಕೇಶ ಕುಷ್ಟಗಿ,
ಶಾಲಾ ನಿಕಟಪೂರ್ವ ಪ್ರಭಾರಿ ಮುಖ್ಯೋಪಾಧ್ಯಾಯ
ಹನಮಪ್ಪ ಮರಿಚಿನ್ನವರ ಮತ್ತು ಶಾಲಾ ಸಿಬ್ಬಂದಿ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
Comments are closed.