ವಸತಿ ಶಾಲಾ ವಿದ್ಯಾರ್ಥಿಗಳ ನರಕಯಾತನೆ : ಎಸ್ಎಫ್ಐ ಆಕ್ರೋಶ

ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವಸತಿ ನಿಲಯಕ್ಕೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನಿಯೋಗವು ಶುಕ್ರವಾರ ದಿನಾಂಕ 16/01/2026 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿತು.
ತರಗತಿ ಕೊಠಡಿಗಳೇ ಇಲ್ಲದ ವಸತಿ ಶಾಲೆ : ಬಾಗಿಲುಗಳು ಇಲ್ಲದ ಶೌಚಾಲಯ
ಪರಿಶೀಲನೆ ವೇಳೆ ವಸತಿ ನಿಲಯವು ಸಂಪೂರ್ಣವಾಗಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದು ತಿಳಿದುಬಂದಿದ್ದು, ಅಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳೇ ಇಲ್ಲದಂತಹ ದಾರುಣ ಸ್ಥಿತಿ ಕಂಡುಬಂದಿದೆ. ತರಗತಿಗಳಿಗೆ ಸೂಕ್ತ ಕೊಠಡಿಗಳಿಲ್ಲದೆ, ಪಾಳುಬಿದ್ದ ಗೋಡೌನ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದ್ದು, ಜೀವದ ಅಪಾಯವನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಆವರಣದಲ್ಲಿ ಹಾವು–ಚೇಳುಗಳ ಕಾಟ ಹೆಚ್ಚಾಗಿದ್ದು, ಸುತ್ತಮುತ್ತ ನೀರು ನಿಂತು ಗಲೀಜು ವಾತಾವರಣ ನಿರ್ಮಾಣವಾಗಿದೆ. ಶುದ್ಧ ಕುಡಿಯುವ ನೀರಿನ ಕೊರತೆ ತೀವ್ರವಾಗಿದ್ದು, ಬಾಗಿಲುಗಳೇ ಇಲ್ಲದ ಶೌಚಾಲಯಗಳು, ಮುಟ್ಟಿದರೆ ಕರೆಂಟ್ ಹೊಡೆಯುವಂತಹ ಫ್ಯಾನ್ ಮತ್ತು ಲೈಟ್‌ಗಳ ವಿದ್ಯುತ್ ವ್ಯವಸ್ಥೆ ವಿದ್ಯಾರ್ಥಿಗಳ ಜೀವಕ್ಕೆ ಭಾರೀ ಅಪಾಯಕಾರಿಯಾಗಿವೆ.
ಇದೇ ಸಂದರ್ಭದಲ್ಲಿ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಊಟದಲ್ಲಿ ಹುಳು, ಕಲ್ಲುಗಳು ಕಂಡುಬಂದಿದ್ದು, ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಶಿಕ್ಷಣದ ನೆಪದಲ್ಲಿ ವಿದ್ಯಾರ್ಥಿಗಳು ಇಲ್ಲಿ ನರಕ ಯಾತನೆ ಅನುಭವಿಸುವಂತ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಸಂಪೂರ್ಣವಾಗಿ ಸಮಾಜ ಕಲ್ಯಾಣ ಇಲಾಖೆ ಹೊಣೆ ಎಂದು ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ನಿಯೋಗವು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಶಾಶ್ವತ ಕಟ್ಟಡ, ಸುರಕ್ಷಿತ ವಿದ್ಯುತ್ ವ್ಯವಸ್ಥೆ, ಶುದ್ಧ ನೀರು, ಸ್ವಚ್ಛ ಶೌಚಾಲಯ ಹಾಗೂ ಗುಣಮಟ್ಟದ ಆಹಾರ ವ್ಯವಸ್ಥೆ ಒದಗಿಸಬೇಕು ಎಂದು ಆಗ್ರಹಿಸಿದರು.
ಇಂತಹ ದುಸ್ಥಿತಿ ಸಚಿವರ ಕ್ಷೇತ್ರದಲ್ಲೇ ಇರುವುದು ಅತ್ಯಂತ ಲಜ್ಜಾಸ್ಪದ ಸಂಗತಿ. ಸಚಿವರ ಕ್ಷೇತ್ರದಲ್ಲಿನ ವಸತಿ ಶಾಲೆಯ ಸ್ಥಿತಿಯೇ ಹೀಗಾದರೆ, ಉಳಿದ ಕ್ಷೇತ್ರಗಳ ಸ್ಥಿತಿ ಏನಿರಬಹುದು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಇದು ಕೇವಲ ಆಡಳಿತ ವೈಫಲ್ಯವಲ್ಲ, ಇದು ಸಮಾಜ ಕಲ್ಯಾಣ ಇಲಾಖೆಯ ಮತ್ತು ಸಚಿವರ ಹಾಗೂ ಸರ್ಕಾರದ ನೇರ ನಿರ್ಲಕ್ಷ್ಯ ಎಂದು ತಾಲೂಕ ಅಧ್ಯಕ್ಷ ನಾಗರಾಜ್ ಯು ಆಕ್ರೋಶ ವ್ಯಕ್ತ ಪಡಿಸಿದರು .
ಎಸ್ಎಫ್ಐ ನಿಯೋಗವು ತಕ್ಷಣವೇ ಈ ವಸತಿ ನಿಲಯವನ್ನು ಸ್ವಂತ, ಶಾಶ್ವತ ಕಟ್ಟಡಕ್ಕೆ ವರ್ಗಾವಣೆ ಮಾಡಬೇಕು, ಈ ಕೂಡಲೇ ವಿದ್ಯಾರ್ಥಿಗಳಿಗೆ ಸುರಕ್ಷಿತ ತರಗತಿ ಕೊಠಡಿಗಳು, ಶುದ್ಧ ಕುಡಿಯುವ ನೀರು, ಶೌಚಾಲಯ, ಅಪಾಯರಹಿತ ವಿದ್ಯುತ್ ವ್ಯವಸ್ಥೆ ಹಾಗೂ ಗುಣಮಟ್ಟದ ಆಹಾರ ಒದಗಿಸಬೇಕು ಎಂದು ಎಸ್ಎಫ್ಐ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕ ಅಧ್ಯಕ್ಷ ನಾಗರಾಜು ಯು, ಉಪಾಧ್ಯಕ್ಷರಾದ ಶರೀಫ್ ಎಂ, ಸಹ ಕಾರ್ಯದರ್ಶಿ ದರ್ಶನ್, ವಸತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
Comments are closed.