ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವೇ ಶಿಕ್ಷಣ: ಚಂದ್ರೇಗೌಡ

Get real time updates directly on you device, subscribe now.

ಸ್ವಾಗತ ಸಮಾರಂಭ

  • – ಯುವಕರ ಕೈಯಲ್ಲಿದೆ ಭವಿಷ್ಯದ ಸಮಾಜ ನಿರ್ಮಾಣ: ಗುರಿಕಾರ
  • ವಿದ್ಯಾರ್ಥಿಗಳಿಗೆ ಬೇಕು ಪ್ರಯತ್ನಶೀಲತೆ ಗಂಗಾವತಿ: ಶಿಕ್ಷಣವು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಪ್ರತಿ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಸಂಸ್ಕಾರ-ಸಂಸ್ಕೃತಿ ಅನುಸರಿಸಿ ಸಾಗುವುದರಿಂದ ಉತ್ತಮ ಜೀವನ‌ ರೂಪಿಸಿಕೊಳ್ಳಲು ಸಾಧ್ಯ ಎಂದು ನಿವೃತ್ತ ಉಪನ್ಯಾಸಕ ಪ್ರೊ.ಚಂದ್ರೇಗೌಡ ಪೊಲೀಸ್ ಪಾಟೀಲ ಹೇಳಿದರು. ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಸಮಾಜಶಾಸ್ತ್ರ ಸ್ನಾತಕೋತ್ತರ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕ ಮನೋಭಾವ ಅಗತ್ಯ. ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಭವಿಷ್ಯದ ದಿನಗಳಲ್ಲಿ ತಕ್ಕ ಫಲ ದೊರೆಯುತ್ತದೆ ಎಂದು ಅವರು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಕ ಗುರಿಕಾರ ಮಾತನಾಡಿ, ಪ್ರತಿಯೊಬ್ಬರು‌ ಪ್ರಾಮಾಣಿಕ ಮನೋಭಾವ ರೂಢಿಸಿಕೊಳ್ಳಬೇಕು. ಭವಿಷ್ಯದ ಸಮಾಜ ನಿರ್ಮಾಣ ಇಂದಿನ ಯುವಪೀಳಿಗೆ ಕೈಯಲ್ಲಿದೆ‌ ಎಂದು ಅಭಿಪ್ರಾಯಪಟ್ಟರು. ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಫಣಿರಾಜ್ ಬಾರಿಕಾರ್ ಅವರು, ವಿದ್ಯಾರ್ಥಿಗಳಿಗೆ ತರಗತಿಯ ಕೊಠಡಿಗಳು ಭವಿಷ್ಯವನ್ನು ರೂಪಿಸುವ ದೇವಾಲಯಗಳು ಇದ್ದಂತೆ, ಪ್ರತಿಯೊಬ್ಬ ವಿದ್ಯಾರ್ಥಿಯು ತರಗತಿಗಳಲ್ಲಿ ತಿಳಿಸುವ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಪ್ರಯತ್ನಶೀಲರಾಗಿ ಮುಂದುವರಿಯಬೇಕು ಎಂದರು. ಸಮಾಜಶಾಸ್ತ್ರ ವಿಭಾಗದ ಹಿರಿಯ ಅತಿಥಿ ಉಪನ್ಯಾಸಕ ಡಾ. ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ ಅವಶ್ಯವಾಗಿದೆ. ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳುವುದರ ಜೊತೆಗೆ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ಕಾರ್ಯವನ್ನು ಪ್ರತಿಯೊಬ್ಬರು ಅನುಸರಿಸ ಬೇಕಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರಾದ ಡಾ. ಮುದಕನಗೌಡ ಕೆ, ಕಳಕಪ್ಪ ಕುಂಬಾರ್, ಡಾ. ಪಾಂಡುರಂಗ ದೊಡ್ಮನಿ, ಡಾ. ಸುಭಾಷ್ ಚಂದ್ರ ಮತ್ತಿತರರು ಇದ್ದರು. ಸಮಾಜಶಾಸ್ತ್ರ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಪಂಪಾಪತಿ ಮತ್ತು ಬೀರಪ್ಪ ಕಾರ್ಯಕ್ರಮ ನಿರ್ವಹಿಸಿದರು. ಸುಷ್ಮಾ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!