ಕಪ್ಪತಗುಡ್ಡದಿಂದ ಬಲ್ಡೋಟಾ ಓಡಿಸಿದ್ದು ಸಾಮಾನ್ಯ ಜನಶಕ್ತಿ – ನಂದಿವೇರಿ ಶ್ರೀ
ಕಾರ್ಖಾನೆ ಮಾಲೀಕರು ಜನರ ನೋವಿಗೆ ಸ್ಪಂದಿಸುವದಿಲ್ಲ – ಚೇತನ ಅಹಿಂಸಾ
It was the common people who drove Baldota from Kapatagudda – Nandiveri Sri
ಕೊಪ್ಪಳ: ಗದುಗಿನಿಂದ ಜನಸಾಮಾನ್ಯರು ಕಟ್ಟಿದ ಹೋರಾಟದ ಫಲವಾಗಿ ಇದೇ ಬಲ್ಡೋಟಾ ಗೋಲ್ಡ್ ಮೈನಿಂಗ್ ಮಾಡಲು ಕಪ್ಪತಗುಡ್ಡಕ್ಕೆ ಬಂದಿದ್ದರು, ಎಲ್ಲಾ ರೀತಿಯ ಆಮಿಷ ತೋರಿಸಿ ಏನೆಲ್ಲಾ ಮಾಡಲು ಪ್ರಯತ್ನಿಸಿದರೂ ಸಹ ನಾವು ಅವರನ್ನು ಓಡಿಸಿದೆವು ಎಂದು ಗದಗ ಜಿಲ್ಲೆ ಕಪ್ಪತಗುಡ್ಡ ನಂದಿವೇರಿ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಹೇಳಿದರು.
ಅವರು ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ ನಡೆದಿರುವ ಬಲ್ಡೋಟಾ ಹಾಗೂ ಇತರೆ ಕಾರ್ಖಾನೆ ತಡೆ ಹೋರಾಟದ ೧೯ ನೇ ದಿನದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಭೆಗೆ ಬರುವ ಮುಂಚೆ ಅವರು ಭಾದಿತ ಪ್ರದೇಶದ ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿ ಬಂದಿದ್ದರು.
ಈ ವೇಳೆ ಅಲ್ಲಿನ ಗಂಭೀರ ಪರಿಸ್ಥಿತಿಯನ್ನು ಪ್ರತಿ ಮನೆಗೆ ಮುಟ್ಟಿಸುವ ಕೆಲಸವಾಗಬೇಕಿದೆ ಈಗಾಗಲೇ ಹೋರಾಟಕ್ಕೆ ಚಾಲನೆ ನೀಡಿರುವಂತಹ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇದರ ನೇತೃತ್ವ ವಹಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಜನರದ್ದಾಗಿz, ನಮ್ಮಧು ಆಗಿದೆ. ರಾಜ್ಯದ ಎಲ್ಲ ಭಾಗಗಳ ಸ್ವಾಮೀಜಿಗಳನ್ನು ಅವಶ್ಯಕತೆ ಇದೆ ಎಂದರೆ ಕರೆದುಕೊಂಡು ಬರುತ್ತೇವೆ.
ಸ್ವಾಮಿಗಳು ಕೇವಲ ಮಠದಲ್ಲಿ ಕೂಡುವದಲ್ಲ ಅವರು ಸಹ ಜನರ ನೋವಿಗೆ ಸ್ಪಂದಿಸುವ ಅಗತ್ಯ ಇದೆ, ಅಗತ್ಯಬಿದ್ದಾಗ ಮಾಡುತ್ತಾರೆ ಎಂದರು. ನಾವು ಯಾರ ವಿರೋಧಿಗಳಲ್ಲ ಸರಕಾರದ ಮೇಲೆ ನಮಗೆ ಯಾವುದೇ ಹಗೆತನ ಇಲ್ಲ ಆದರೆ ಜನರಿಗೆ ಸಂಕಷ್ಟ ಬಂದಾಗ ಸರಕಾರಗಳು ಸ್ಪಂದಿಸಬೇಕು, ಜನರಿಗೆ ಬೇಕಾದನ್ನು ಮಾತ್ರ ಕೊಡುವಂತೆ ಆಗಬೇಕು ಕಾರ್ಖಾನೆಗಳ ಅಭಿವೃದ್ಧಿ ವಿರುದ್ದವೂ ನಾವು ಇಲ್ಲ, ಆದರೆ ಕಾರ್ಖಾನೆಗಳು ಎಲ್ಲಿ ಎಷ್ಟಿರಬೇಕು ಅಷ್ಟೇ ಇರಬೇಕು.
ಮನುಷ್ಯರು ವಾಸಿಸುವ ಜಾಗದಲ್ಲಿ ಕಾರ್ಖಾನೆಗಳಿಗೆ ಅವಕಾಶ ಕೊಡಬಾರದು ಎಂಬುದು ನಮ್ಮ ಅಭಿಪ್ರಾಯ, ರಾಜ್ಯದಲ್ಲೇ ಅತ್ಯುತ್ತಮ ಗಾಳಿ ಕಪ್ಪತಗುಡ್ಡದಲ್ಲಿದೆ ಅಲ್ಲಿ ಲಕ್ಷ ಲಕ್ಷ ಅತ್ಯದ್ಭುತವಾದ ಸಸ್ಯಕಾಶಿ ಇದೆ, ಆದರೆ ಅದು ಹೇಗೆ ಕಾರ್ಖಾನೆ ತುಂಬಿರುವ ಕೊಪ್ಪಳದ ಹೆಸರನ್ನು ಶುದ್ಧ ಗಾಳಿ ಪಟ್ಟಿಯಲ್ಲಿ ಸೇರಿಸಿದರು ತಿಳಿವಲ್ದು, ಅವರು ಅಧ್ಯಯನದ ಮಾಡಿದ್ದೇ ನನಗೆ ಅರ್ಥವಾಗುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ಇಲ್ಲಿನ ಜನರಿಗೆ ಶುದ್ಧ ಗಾಳಿ, ಶುದ್ಧ ನೀರು, ಶುದ್ಧ ಪರಿಸರ ಮೂಲಭೂತ ಹಕ್ಕು ಅದನ್ನು ಕೊಡಿಸುವ ಸಲುವಾಗಿ ನಿರಂತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.
ಇದೇ ವೇಳೆ ಹೋರಾಟದ ಭಾಗವಾಗಿ ಆಗಮಿಸಿದ ಚಲನಚಿತ್ರ ನಟ, ಪ್ರಗತಿಪರ ಮುಖಂಡ ಚೇತನ ಅಹಿಂಸಾ ಮಾತನಾಡಿ, ಜನರಿಗೆ ಮೂಲಭೂತವಾಗಿ ಅವಶ್ಯಕತೆ ಇರುವ ಬದುಕುವ ಹಕ್ಕನ್ನು ಸಂವಿಧಾನ ಕೊಟ್ಟಿದೆ ಅದರ ಆಶಯದಂತೆ ನಮಗೆ ನ್ಯಾಯ ಸಿಗಬೇಕು. ಹೋರಾಟ ಎಷ್ಟು ದೊಡ್ಡದಿದೆ ಚಿಕ್ಕದಿದೆ ಎಂಬುದು ಮುಖ್ಯವಲ್ಲ ಆದರೆ ಆ ಹೋರಾಟದ ವಿಷಯ ವಸ್ತು ಮತ್ತು ಅದನ್ನು ತೆಗೆದುಕೊಂಡು ಹೋರಾಟ ಮಾಡುವ ಗಟ್ಟಿ ಜನ ಬಹಳ ಮುಖ್ಯ. ಹಾಗಾಗಿ ಅತ್ಯಂತ ಸೂಕ್ತವಾದ ವಿಷಯ ಇಟ್ಟುಕೊಂಡು ಸೂಕ್ತ ಹೋರಾಟ ರೂಪಿಸಿದ ಕಾರಣ ನಾನು ಇಲ್ಲಿಯವರೆಗೆ ಬಂದಿದ್ದೇನೆ, ಜನ ಎದ್ದೇಳಬೇಕು ಹೋರಾಡಬೇಕು ನಾನು ಸಹ ಅಗತ್ಯ ಬಿದ್ದಾಗ ಈ ಹೋರಾಟದಲ್ಲೇ ಮತ್ತೆ ಮತ್ತೆ ಭಾಗವಹಿಸುತ್ತೇನೆ ಎಂದ ಅವರು ಆಳುವ ಜನ ನೋವಿನಲ್ಲಿರುವ ಜನರ ಕಷ್ಟವನ್ನು ಕೇಳುವಂತಿರಬೇಕು ಅಂಥವರನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ಹೇಳಿದಂತೆ ಕೇವಲ ಮತ ಚಲಾಯಿಸುವುದಲ್ಲ ಅಧಿಕಾರದ ಹಕ್ಕನ್ನು ಸಹ ನಾವು ಪಡೆದುಕೊಳ್ಳಬೇಕು ಎಂದರು. ಅಂತಹ ಜಾಗೃತಿ ಮೂಡಿಸುವ ಸಲುವಾಗಿ ನಾನು ರಾಜ್ಯಾದ್ಯಂತ ಓಡಾಡಿ ಜನರಿಗೆ ತಮ್ಮ ಹಕ್ಕು ಅಧಿಕಾರದ ಮಾಹಿತಿ ನೀಡುತ್ತಿದ್ದೇನೆ ಎಂದರು.
ಇಟಗಿಯ ಗವಿಮಠ ಶಾಖಾಮಠದ ಶ್ರೀ ಗುರುಶಾಂತವೀರ ಶಿವಾಚಾರ್ಯಾ ಪೂಜ್ಯರು ಮಾತನಾಡಿ, ಇಲ್ಲಿರುವ ಕಾರ್ಖಾನೆಗಳ ಮಾಲೀಕರು ಇಲ್ಲಿಯೇ ಕಾರ್ಖಾನೆಯ ನೂರಾರು ಎಕರೆ ಪ್ರದೇಶದಲ್ಲಿ ತಮ್ಮ ಕುಟುಂಬ ಕಟ್ಟಿಕೊಂಡು ವಾಸ ಮಾಡಲಿ, ಆಗ ಅದರ ಸಂಕಟ ಅರ್ಥವಾಗುತ್ತದೆ, ಅವರೆಲ್ಲೋ ದೂರದ ಬೆಂಗಳೂರು, ಮುಂಬೈ, ಅಮೇರಿಕದಲ್ಲಿ ಹಾಯಾಗಿ ಇದ್ದು ಇಲ್ಲಿನ ಜನರಿಗೆ ನೋವು ಕೊಡುತ್ತಿದ್ದಾರೆ. ಗವಿಸಿದ್ಧೇಶ್ವರರ ಅಪ್ಪಣೆ ಮೇರೆಗೆ ನಾನು ಇಲ್ಲಿ ಭಾಗವಹಿಸಿದ್ದೇನೆ, ನಾವು ಸದಾ ಜನರಪರ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಪ್ರಮುಖರುಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಿ.ಎಚ್.ಪೂಜಾರ, ಕೆ. ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಎಸ್.ಬಿ.ರಾಜೂರು, ಮೂಕಪ್ಪ ಮೇಸ್ತ್ರಿ, ಯಮನೂರಪ್ಪ ಹಾಲಳ್ಳಿ, ಕರಿಯಪ್ಪ ಗುಡಿಮನಿ, ವಿದ್ಯಾ ನಾಲವಾಡ, ರತ್ನಮ್ಮ ಡಿ. ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಎಸ್. ಎ. ಗಫಾರ್, ಶಂಭುಲಿಂಗಪ್ಪ ಹರಗೇರಿ, ಡಿ.ಎಂ.ಬಡಿಗೇರ, ಮುದಕಪ್ಪ ಹೂಸಮನಿ, ಶರಣು ಪಾಟೀಲ್, ಮಖಬೂಲ್ ರಾಯಚೂರು, ಕಾಶಪ್ಪ ಛಲವಾದಿ, ರಾಜು ಸಸಿಮಠ, ಗವಿಸಿದ್ದಪ್ಪ ಅನೇಕರು ಇದ್ದರು.
Comments are closed.