ಜನಮನದಂತೆ ಹಾಡುವ ಜನಕವಿ ರಮೇಶ ಗಬ್ಬೂರು

Get real time updates directly on you device, subscribe now.


ರಮೇಶ ಗಬ್ಬೂರು ಇವರನ್ನು ಜನಕವಿ, ಪ್ರಗತಿಪರ ಲೇಖಕ, ಹೋರಾಟಗಾರ ಮುಂತಾದ ವಿಶೇಷಣಗಳಿಂದ ಕರೆಯುತ್ತಾರೆ. ವೃತ್ತಿ ಗ್ರಂಥಪಾಲಕ ಸೇವೆ, ಬದುಕು ಬಡತನದ್ದು, ವಿಚಾರಗಳು ಪ್ರಗತಿಪರ, ಹಂಬಲ ಹೋರಾಟದ ಮನೋಭಾವ, ಹವ್ಯಾಸ ಸಾಹಿತ್ಯ ರಚನೆ. ಇವು ರಮೇಶ ಗಬ್ಬೂರರಲ್ಲಿರುವ ಗುಣಗಳು. ಇವು ಎಲ್ಲರಲ್ಲಿಯೂ ಇರುವ ಗುಣಗಳಲ್ಲ. ಕೆಲವು ವ್ಯಕ್ತಿಗಳಲ್ಲಿ ಮಾತ್ರ ಇಂತಹ ಗುಣಗಳನ್ನು ಕಾಣಲು ಸಾಧ್ಯವಿದೆ. ಇಂತಹ ವಿಶೇಷ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಮುಖ್ಯವಾಗಿ ವೃತ್ತಿಯ ಜೊತೆಗೆ ಸಾಹಿತ್ಯದ ರಚನೆ ಮತ್ತು ಹಾಡುಗಳನ್ನು ಹಾಡುತ್ತಾ ಜನರ ಮಧ್ಯೆ ‘ಜನಕವಿ’ಯಾಗಿಯೇ ರಮೇಶ ಗಬ್ಬೂರರು ಇದ್ದಾರೆಂದರೆ ಅದು ಅವರ ಹೊಗಳಿಕೆಯಾಗದು; ಅದು ಅವರ ಸಹಜ ಗುಣವರ್ಣನೆಯಷ್ಟೆ. ಕವನ ಬರೆಯುವ, ರಾಗಬದ್ಧವಾಗಿ ಹಾಡುವ, ರಾಗ ಸಂಯೋಜನೆ ಮಾಡುವ, ತಮಟೆ ಬಾರಿಸುವ, ಕಲಾತಂಡ ಕಟ್ಟಿಕೊಂಡು ಕರ್ನಾಟಕದಾದ್ಯಂತ ತಿರುಗುವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ . ರಮೇಶ ಗಬ್ಬೂರುರವರು ಒಬ್ಬರು ಎಂದರೆ ತಪ್ಪಾಗಲಾರದು.
ರಮೇಶ ಗಬ್ಬೂರುರವರು ಒಂಬತ್ತು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಗೂನುಬೆನ್ನಿನ ಗದ್ದೆ, ಅಲೆಮಾರಿಯ ಹಾಡು, ಗರೀಬ್ ಗಜಲ್, ರಂಗಸಂಪನ್ನರು ಸಂಜೀವಪ್ಪ ಗಬ್ಬೂರ್, ಒಲಿದಂತೆ ಹಾಡುವೆ, ಗಬ್ಬೂರ್ ಗಜಲ್, ಕಾಮ್ರೆಡ್ ಬಸವಣ್ಣ, ಅಪರಿಮಿತದ ಕತ್ತಲೆಯೊಳಗೆ ವಿಪರೀತದ ಬೆಳಕು ಮತ್ತು ಜನಮನದಂತೆ ಹಾಡುವೆ. ಹೀಗೆ ಒಂಬತ್ತು ಕೃತಿಗಳ ಮೂಲಕ ಒಬ್ಬ ಪ್ರಬುದ್ಧ ಕವಿಯಾಗಿ ಹೊರಹೊಮ್ಮಿದ್ದಾರೆ. ಗಜಲ್ ಬರೆಯುವ ಕರ್ನಾಟಕದ ಕೆಲವೇ ಕೆಲವು ಕವಿಗಳಲ್ಲಿ ಇವರೂ ಒಬ್ಬರು. ಜೊತೆಗೆ ಬುದ್ಧನ ಚಿಂತನೆ, ಅಂಬೇಡ್ಕರ್‌ರ ವಾದ ಮತ್ತು ಬಸವ ಮಾರ್ಗದಲ್ಲಿ ನಡೆಯುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಮತ್ತು ವೀಶೇಷವಾಗಿ ಅಂಬೇಡ್ಕರ್‌ರ ಕುರಿತು ಗಜಲ್ ಬರೆದ ಮೊದಲ ಕವಿ . ಗಬ್ಬೂರರು.
‘ಜನಮನದಂತೆ ಹಾಡುವೆ’ ಈ ಕೃತಿಯು ಬರೋಬ್ಬರಿ ಎಂಬತ್ತು ಕವನಗಳನ್ನೊಳಗೊಂಡ ಐದು ಭಾಗಗಳಲ್ಲಿ ವಿಸ್ತಾರಗೊಂಡಿದೆ. ಭೀಮ ಚಿಂತನೆ, ಮಹಿಳಾ ಚಿಂತನೆ, ಮಣ್ಣಿನ ಮಕ್ಕಳು, ವೈಚಾರಿಕತೆ ಮತ್ತು ಕೊರೋನಾ ಹೀಗೆ ಐದು ಭಾಗಗಳಲ್ಲಿ ಈ ಕೃತಿಯನ್ನು ಎಣೆಯಲಾಗಿದೆ. ಅಲ್ಲದೇ ಈ ಕೃತಿಯಲ್ಲಿ ‘ಕತ್ತಲೆಯ ಬಂಡಾಯಕ್ಕೆ ಬೆಳಕಿನ ಬಾವುಟ’ ಎಂಬ ಉಪ ಶೀರ್ಷಿಕೆಯನ್ನು ಬಳಸಿರುವುದರಿಂದ ಇದರಲ್ಲಿ ಭ್ರಷ್ಟ ವ್ಯವಸ್ಥೆಯ ವಿರುದ್ಧ, ನೋವು-ಕಷ್ಟಗಳನ್ನು ವ್ಯವಸ್ಥಿತವಾಗಿ ನೀಡಿದ ಅಸಮಾನತೆಯ ವಿರುದ್ಧ, ಕತ್ತಲೆ ನೀಡಿದವರ ವಿರುದ್ಧದ ಹಾಡುಗಳ ಮೂಲಕ ಬಂಡಾಯದ ರೋಷ ವ್ಯಕ್ತವಾಗಿದೆ. ಅವರ ವಿರುದ್ಧ ಹೋರಾಟದ ಬಾವುಟದೊಂದಿಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಮಾತುಗಳು ಇದರಲ್ಲಿವೆ. ಅವುಗಳನ್ನು ಓದುತ್ತಿದ್ದಂತೆ ಇವು ನೋವುಂಡರ ಮಾತುಗಳು ಎಂದು ಸಹಜವಾಗಿಯೇ ಅರ್ಥವಾಗುತ್ತವೆ.
ಗಬ್ಬೂರುರವರಿಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರೆಂದರೆ ದೇವರು, ಅವರಿಗಿಂತ ಮಿಗಿಲಾದ ದೇವರಿಲ್ಲ ಎಂಬಂತೆ ಭಾವಿಸಿದ್ದಾರೆ ಮತ್ತು ಅದನ್ನು ಈ ಕೃತಿಯಲ್ಲಿಯೂ ಸಹ ಚಿತ್ರಿಸಿದ್ದಾರೆ. ‘ನಿನ್ನಂತಹ ಜ್ಞಾನಿ ಯಾರಿಲ್ಲ ಭೀಮ, ವಿಶ್ವಕ್ಕೆ ಜ್ಞಾನದ ಸಂಕೇತ ಭೀಮ, ಜಯ ಭೀಮ ಜಯ ಭೀಮ ಜಯ ಜಯ ಭೀಮ’ ಎಂದು ಡಾ.ಬಿ.ಆರ್.ಅಂಬೇಡ್ಕರ್‌ರ ಜ್ಞಾನಕ್ಕೆ ಯಾರೂ ಸರಿಸಾಟಿ ಇಲ್ಲ ಎಂಬ ಮಾತನ್ನು ಹಾಡಿ ಹೊಗಳಿದ್ದಾರೆ. ‘ಕೋಟಿ ಕಷ್ಟಗಳ ನಡೆದೆ ನೀ ಭೀಮ, ನಮಗಾಗಿ ಕನಸುಗಳ ಹಡೆದೆ ನೀ ಭೀಮ’ ನಮಗಾಗಿ ಕನಸುಗಳನ್ನು ಕಟ್ಟಿ ಹೋಗಿದ್ದಾರೆ ಎನ್ನುವುದನ್ನು ಈ ಕೃತಿಯಲ್ಲಿ ಸಾರಿ ಸಾರಿ ಹೇಳಲಾಗಿದೆ. ಅವರ ಮಾತುಗಳನ್ನು ಸಾಕಾರಗೊಳಿಸುವುದು ನಮ್ಮ ಜವಾಬ್ಧಾರಿಯಾಗಿದೆ. ನಮಗಾಗಿ ಕಂಡ ಅವರ ಕನಸ್ಸನ್ನು ನನಸು ಮಾಡುವುದು ತೀರಾ ಅವಶ್ಯವಾಗಿದೆ. ‘ಬಾಬಾ ಅಂಬೇಡ್ಕರ ಬಡವರ ಮನೆ ಭಾಸ್ಕರ, ನೀನೇ ಇರದಿದ್ದರೆ ನಾವೇನಾಗುತ್ತಿದ್ದೆವು, ನೀವೇ ಬರದಿದ್ದರೆ ನಾವೇನಾಗುತ್ತಿವು’? ಎಂದು ನೆನಸಿಕೊಂಡಾಗ ಅದೇ ಕಾಲದಂತೆ ದುಡಿಯುತ್ತಾ, ಬಡಿಸಿಕೊಳ್ಳತ್ತಾ ಬದುಕಬೇಕಾಗುತ್ತಿತ್ತೇನೂ ಎಂದೆನಿಸುತ್ತದೆ. ‘ಅಂಬೇಡ್ಕರರೆಂದರೆ ಅಪರಿಮಿತದ ಕತ್ತಲೆಯಲ್ಲಿ ವಿಪರೀತದ ಬೆಳಕಿನಲ್ಲಿ ವಿಶ್ವಜ್ಞಾನಿ’ಯಾದವರೆಂದರೆ ಅದು ಅತಿಶಯೋಕ್ತಿಯಲ್ಲ. ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಅರಿಯಬೇಕಿದ್ದರೆ ಮೊದಲು ಅವರ ಸಂವಿಧಾನವನ್ನು ತಿಳಿಯಬೇಕಿದೆ. ಆಗ ಮಾತ್ರ ಈ ನೆಲದ ರೀತಿ-ರಿವಾಜುಗಳು, ಕಾನೂನುಗಳು, ಭ್ರಾತೃತ್ವ, ಸಮಸಮಾನತೆಯ ತತ್ವ ಹೀಗೆ ಎಲ್ಲವೂ ತಿಳಿಯುತ್ತವೆ. ಅದನ್ನು ತಿಳಿಯದೇ ಭವಿಷ್ಯವಿಲ್ಲ ಅದಕ್ಕಾಗಿ ‘ಬನ್ನಿ ಯುವಜನರೆ ತಿಳಿಯೋಣ ಸಂವಿಧಾನ, ಭಾರತವನ್ನು ಮುನ್ನಡೆಸುವ ಸಮಾಧಾನ, ಇದು ಕಥೆಯಲ್ಲ ಕವಿತೆಯಲ್ಲ ಕಲ್ಪನೆಯಂತೂ ಮೊದಲಲ್ಲ, ಭಹುತ್ವ ಭಾರತವನ್ನು ಅರಿಯುವಾ ಚಿಂತನಾ’ ಎಂದು ಗಬ್ಬೂರರು ಕರೆಕೊಟ್ಟಿದ್ದಾರೆ. ಹೌದು ಮೊದಲು ಈ ದೇಶದ ಯುವಜನತೆ ಜ್ಞಾನವಂತರಾಗಬೇಕಿದೆ. ಅವರು ಈ ದೇಶದ ಕಾನೂನುಗಳನ್ನು ಅರಿಯಬೇಕಿದೆ ‘ದೇಶಂದ್ರೆ ಮಣ್ಣಲ್ಲ ಮನುಷ್ಯಾರಣ್ಣ, ಈ ದೇಶ ಯಾರ ಮನೆಯ ಆಸ್ತಿ ಅಲ್ಲಣ್ಣ’ ದೇಶವೆಂದರೆ ಅದು ಬರೀ ಒಂದು ವಸ್ತುವೊ ಅಥವಾ ಒಬ್ಬ ವ್ಯಕ್ತಿಗೊ ಸೀಮಿತವಾದ್ದಲ್ಲ. ಯಾರ ಮನೆಯ ಸ್ವತ್ತಲ್ಲ, ಯಾರೊಬ್ಬರಿಗೂ ಇದು ಸೇರಿದ್ದಲ್ಲ. ಈ ದೇಶ ಮತ್ತು ಇಲ್ಲಿನ ಕಾನೂನುಗಳನ್ನು ಅರಿತರೆ ನಮನ್ನೇ ನಾವು ಅರಿತಂತೆ, ಅವುಗಳನ್ನು ಗೌರವಿಸಿದರೆ ನಮಗೆ ನಾವೇ ಗೌರವಿಸಿಕೊಂಡಂತೆ. ಈ ಮಾತನ್ನು ಅರಿತುಕೊಂಡಾಗ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ ಎಂಬುದನ್ನು ನಾವು ಮರೆಯುವಂತಿಲ್ಲ.
‘ಓಟೆಂದರೆ ಬಿಳಿಕಾಗದ ಪೇಪರ್‌ಲ್ಲವೋ, ಓಟೆಂದರೆ ಕಂಪ್ಯೂಟರ್ ಬಟನ್ ಅಲ್ಲವೋ, ಹಿಂದಿನ ಕಾಲದಲ್ಲಿ ಓಟು ರಾಜರಿಗೇ ಇತ್ತಂತೆ, ಪ್ರಜೆಗಳೆಲ್ಲಾ ಅವರ ಕೆಳಗೆ ಸೇವಕರಾಗಿದ್ದರಂತೆ’ ಎಂಬ ಮಾತನ್ನೊಮ್ಮೆ ಓದಿದಾಗ ಮತದಾನಕ್ಕಿರುವ ಮಹತ್ವ ಅರ್ಥವಾಗುತ್ತದೆ. ಹಿಂದಿನ ಕಾಲದಲ್ಲಿ ಬರೀ ರಾಜ-ಮಹಾರಾಜರಿಗೆ ಮಾತ್ರ ಅಧಿಕಾರ ಅನುಭವಿಸುವ ಹಕ್ಕಿತ್ತು. ಆದರೆ ಇಂದು ಮತದಾನದ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ನಮ್ಮ ಪ್ರತಿನಿಧಿಯನ್ನು ನಾವೇ ಆಯ್ಕೆಮಾಡಬಹುದು. ಇಂತಹ ಮಹತ್ವದ ಮತದಾನದ ಹಕ್ಕನ್ನು ಸಾಮಾನ್ಯನಿಗೂ ನೀಡಿದ ಗೌರವ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರಿಗೆ ಸಲ್ಲುತ್ತದೆ. ಇಂದು ಮತದಾರನೇ ಪ್ರಭುವಾಗಿದ್ದಾನೆ. ಅವನೇ ತಾನಂದುಕೊಂಡವರನ್ನು ಓಟಿನ ಮೂಲಕ ಆಯ್ಕೆ ಮಾಡಿ ದೇಶ ನಡೆಸುತ್ತಾನೆ. ಅದು ಓಟಿಗಿರುವ ಪವರ್ ಎನ್ನಬಹುದು. ಇಂತಹ ಪವರ್ ಕೊಟ್ಟ ಮಹಾತ್ಮರನ್ನು ನಾವೆಂದೂ ಮರೆಯಬಾರದು. ‘ಬಾಬಾಸಾಹೇಬರ ಮರೆತೂ ಹ್ಯಾಂಗ ಬದುಕಲಯ್ಯ, ನಾನಿಲ್ಲಿ ನಿಂತು ಹಾಡಲು ಅವರೆ ಕಾರಣರಯ್ಯ’ ಹೌದು ಡಾ.ಬಾಬಾಸಾಹೇಬ್ ಅಂಬೇಡ್ಕರರೇ ಇಂದಿನ ನಮ್ಮ ಸ್ವಾತಂತ್ರದ ಬದುಕಿನ ಕಾರಣರವರು ಎಂಬುದರಲ್ಲಿ ಅನುಮಾನವಿಲ್ಲ. ‘ಏನು ಹೇಳಲಮ್ಮ ಭೀಮನೆಂಬ ಶಕ್ತಿಯ’ ಕುರಿತು; ಭೀಮನೆಂದರೆ ಶಕ್ತಿ, ಭೀಮನೆಂದರೆ ಸ್ವಾತಂತ್ರ್ಯ, ಭೀಮನೆಂದರೆ ಜ್ಞಾನ, ಭೀಮನೆಂದರೆ ಸಮಾನತೆ. ಇವು ಅವರ ಹೊಗಳಿಕೆಯಂತೂ ಅಲ್ಲವೇ ಅಲ್ಲಾ. ಅದಕ್ಕಾಗಿ ‘ಹಾಡುವೆ ನೀ ಹೇಳಿದ ಮಾತುಗಳಾ, ಸಾರುವೆ ನೀ ಹೇಳಿದಾ ಕಥೆಗಳಾ ಓ ಬಾಬಾ ಅಂಬೇಡ್ಕರಾ, ನೀವೇ ನನ್ನ ಮಹಾಸಾಗರಾ’ ಎಂದು . ರಮೇಶ ಗಬ್ಬೂರುರವರು ತನ್ನನ್ನು ಬಾಬಾಸಾಹೇಬರಿಗೆ ಒಪ್ಪಿಸಿಕೊಂಡಿದ್ದಾರೆ. ಜನಮನದಂತೆ ಹಾಡುತ್ತಾ ಬಾಬಾಸಾಹೇಬರನ್ನು ನಿರಂತರಗೊಳಿಸುತ್ತಾ, ಮನೆಮನೆಗೆ ಅವರ ಸಂದೇಶ ಸಾರುತ್ತಾ ಬದುಕುತ್ತಿರುವ . ರಮೇಶ ಗಬ್ಬೂರವರಿಗೆ ಅಂಬೇಡ್ಕರರ ಮೇಲಿರುವ ಅಭಿಮಾನ ಕಂಡುಬರುತ್ತಿದೆ.
‘ಎಂದು ಬಂದಿದೆ ಸ್ತ್ರೀ ಕುಲಕ್ಕೆ ಸ್ವಾತಂತ್ರವು?’ ಎಂಬ ಪ್ರಶ್ನೆಗೆ ಈ ಸಮಾಜಕ್ಕೆ ಉತ್ತರ ಗೊತ್ತಿದೆ. ಒಂದು ವೇಳೆ ಡಾ.ಬಿ.ಆರ್.ಅಂಬೇಡ್ಕರ್‌ರವರು ಈ ನಮ್ಮ ನೆಲದಲ್ಲಿ ಜನಿಸದಿದ್ದರೆ ಖಂಡಿತವಾಗಿಯೇ ಮಹಿಳೆಯರು ಅಡುಗೆ ಮನೆಯಲ್ಲಿಯೇ ಬಂಧಿಯಾಗಿರುತ್ತದ್ದಳೇನೋ ಎಂದೆನಿಸುವುದು ಸಹಜ. . ಗಬ್ಬೂರುರವರು ಬಾಬಾ ಸಾಹೇಬ್‌ರನ್ನು ಹೇಗೆ ಗೌರವದಿಂದ ಕಾಣುತ್ತಾರೆಯೋ ಅದರಂತೆ ಒಬ್ಬ ಸ್ತ್ರೀಗೂ ಸಹ ಅಷ್ಟೇ ಗೌರವ ಕೊಟ್ಟಿದ್ದನ್ನು ಈ ಕೃತಿಯಲ್ಲಿ ಕಾಣಬಹುದು. ತಾಯಿಯೇ ಜಗತ್ತು, ಅವಳ ಮಡಿಲೇ ಸ್ವರ್ಗ. ‘ಅಮ್ಮಾ ನಿನ್ನ ಮಡಿಲೊಳಗೆ ಜಗವೇ ಐತ್ಯವ್ವಾ’ ಎಂದು ತಾಯಿಯ ಮಮತೆಯನ್ನು ಇಲ್ಲಿ ಸಾರಿದ್ದಾರೆ. ‘ತಿನಿಸಿದ ತುತ್ತೀಗೆ ಕೊಟ್ಟಂತ ಮುತ್ತೀಗೆ, ಬೆಲೆಯು ಯಾವುದವ್ವಾ?’ ತಾಯಿಗೆ ಬೆಲೆ ಕಟ್ಟಲು ಸಾಧ್ಯವೇ?. ಇಡಿ ಜೀವನಪೂರ್ತಿ ದುಡಿದರೂ ತಾಯಿಯ ಋಣ ತೀರಿಸಲಾಗದು ಎಂಬ ಸತ್ಯವಿಲ್ಲಿದೆ.
ಇಂದು ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮತ್ತು ಅತ್ಯಾಚಾರಗಳೂ ಸಹ ಅಲ್ಲಲ್ಲಿ ನಡೆದ ದುರ್ಘಟನೆಗಳು ಪ್ರಬುದ್ಧರನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಇಂತಹ ಘಟನೆಗಳು ನಡೆದಾಗ ಕವಿಯಾದವನು ರಣಭೂಮಿಕೆಯಲ್ಲಿ ನಿಂತು ಹೋರಾಟ ಮಾಡದಿದ್ದರೂ ತನ್ನ ಕೆಲಸವನ್ನು ತಾನು ಮಾಡಿಯೇ ಮಾಡುತ್ತಾನೆ. ಸಾಹಿತ್ಯದ ಮೂಲಕ ಇಲ್ಲವೇ ಯಾವುದೋ ಒಂದು ಮಾಧ್ಯಮದ ಮೂಲಕ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾನೆ. ಅಂತಹ ಕೆಲಸವನ್ನು . ಗಬ್ಬೂರುರವರು ಈ ಕೃತಿಯಲ್ಲಿ ಮಾಡಿದ್ದಾರೆ. ಈ ಕೃತಿಯಲ್ಲಿ ಮಧು ಪತ್ತಾರ್, ಧರಣಿ ಮುಂತಾದ ಸ್ತ್ರೀಯರು ಬಲಿಯಾದ ಸಂದರ್ಭಗಳನ್ನು ತಮ್ಮ ಹಾಡುಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ದುಷ್ಟ ವ್ಯವಸ್ಥೆಯಲ್ಲಿ ಬಲಿಯಾದ ಅಮಾಯಕ ಮಹಿಳೆಯರ ಕುರಿತು ಸಿಟ್ಟಿದೆ. ಇದು ಒಬ್ಬ ಮಹಿಳಾಪರ ಚಿಂತಕನ ಜವಾಬ್ಧಾರಿಯಾಗಿದೆ. ಅದನ್ನು ರಮೇಶರವರು ಇಲ್ಲಿ ನಿರ್ವಸಿದ್ದಾರೆ.
ದುಡಿಯುವ ವರ್ಗ ಈ ದೇಶವನ್ನು ನಡೆಸುವ ಧಾತರು. ಅವರೇ ನಿಜವಾಗಿ ಈ ನೆಲದ ಮೂಲದವರು ಎಂಬ ವಾದವನ್ನು ಗಬ್ಬೂರುರವರು ಸದಾ ಎತ್ತುತ್ತಿರುತ್ತಾರೆ. ಅವರು ಮುನಿದರೆ ಬಿಕ್ಕುವುದು ಜಗವೆಲ್ಲಾ ಎಂಬುದು ಮಾತ್ರ ಸತ್ಯ. ‘ಮಣ್ಣನ್ನು ಮಲ್ಲಿಗೆ ಮಾಡಿ ಸುಮವ ಅರಳಿಸಿ, ಬಿಸಿಲನ್ನು ನೆರಳ ಚಪ್ಪರದಂತೆ ಬಳಸಿ, ಕಾಯವನ್ನು ಯಂತ್ರದಂತೆ ದುಡಿಸಿ ದುಡಿಸಿ, ಮನುಕುಲಕ್ಕೆ ತುತ್ತಿಟ್ಟು ನಿಮ್ಮ ಹೊಟ್ಟೆಕಟ್ಟಿದವರೆ’ ಎಂದು ‘ಶ್ರಮವ ಹರಿಸಿ ಸಮತೆ ಸಾರ್ವ ನೀವೇ ನಮ್ಮ ಆಶಯ, ನೀವು ಇಲ್ಲದಿದ್ದರೆ ನಮ್ಮ ಪ್ರಾಣಕ್ಕಿಲ್ಲ ಆಶ್ರಯ’ ಎಂದು ದುಡಿಯುವವರ ಮಹತ್ವವನ್ನು ತಿಳಿಹೇಳಿದ್ದಾರೆ. ಇಂದು ಅಲ್ಲಲ್ಲಿ ರೈತರ ಆತ್ಮಹತ್ಯೆಗಳು ನಡೆಯುತ್ತಿರುತ್ತವೆ. ಇದು ದೇಶಕ್ಕೆ ಒಂದು ದೊಡ್ಡ ಕಳಂಕವೇ ಸರಿ. ‘ಅನ್ನದಾತನೆ ಬಿಟ್ಟು ಹೋಗಬೇಡಾ ಜೀವಾ, ಒರೆಸುವರಾರು ನೆಲದ ತಾಯಿಯ ಕಣ್ಣೀರ ತೇವಾ’ ಅನ್ನದಾತನೇ ಈ ತಾಯಿ ನೆಲದ ಕಣ್ಣೀರು ಒರೆಸುವವನು. ಅವನಿಂದಲೇ ಭೂಮಿತಾಯಿಗೆ ಬೆಲೆ, ಭೂಮಿತಾಯಿಂದ ರೈತನಿಗೆ ನೆಲೆ ಎನ್ನುವುದು ಸತ್ಯ. ರೈತನು ಬೆಳೆದ ‘ಅನ್ನವನುಂಡು ವಿಷವ ಕಕ್ಕುವ ಬ್ರಷ್ಟಾಚಾರಿಗಳು, ಹಸಿರ ಸೀರೆಯ ಹರಿದು ನೋಡುವ ಅತ್ಯಾಚಾರಿಗಳು’ ಈ ನೆಲದಲ್ಲಿರುವಾಗ ಅನ್ನದಾತನ ಶ್ರಮ ಸಾರ್ಥಕವಾಗಲಾರದು. ರೈತನ ಅನ್ನವನ್ನುಂಡವ ಈ ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕೇ ವಿನಃ ಬ್ರಷ್ಟಚಾರಿಗಳಾಗಬಾರದು ಎಂಬುದು ಕವಿ ಗಬ್ಬೂರರ ಆಶಯ.
ಈ ದೇಶಕ್ಕೆ ಅನೇಕ ಮಹನೀಯರ ಹೋರಾಟ, ತ್ಯಾಗ-ಬಲಿದಾನಗಳ ಫಲವಾಗಿ ಸ್ವಾತಂತ್ರ್ಯ ಬಂದಿದೆ. ಆದರೆ ಇಂದು ದೇಶದ ಸ್ಥಿತಿ ಏನಾಗಿದೆ? ಇಂದು ಹೋರಾಟದ ಮನೋಭಾವಗಳು ಕಡಿಮೆಯಾಗುತ್ತಿವೆ. ಅದಕ್ಕಾಗಿ ‘ಹೋರಾಟ ಮಾಡದಿದ್ರು ಪರವಾಗಿಲ್ಲ ನೀ ಮಾರಟವಾಗಬೇಡ, ಮಾರಾಟಾದ್ರು ಪರವಾಗಿಲ್ಲ ಮತ್ತೊಂದು ಹೇಳತೀನಿ, ಮಾನ ಹೋಗುವಂತ ಕೆಲಸ ಮಾಡಬೇಡಾ’ ಎಂಬ ಮಾತಿನಲ್ಲಿ . ರಮೇಶ ಗಬ್ಬೂರುರವರ ಕಳಕಳಿ ಎದ್ದು ಕಾಣುತ್ತಿದೆ. ಈ ಕೃತಿಯಲ್ಲಿ ಕವಿ ಡಾ.ಸಿದ್ಧಲಿಂಗಯ್ಯ, ಅಪ್ಪು, ಎಸ್.ಪಿ.ಬಾಲಸುಬ್ರಮಣ್ಯಂ, ದೊರೆಸ್ವಾಮಿ, ಪದ್ಮವರ್ದನ, ನೇಮಿ, ವೇಮುಲಾ, ವಿಠ್ಠಪ್ಪ ಗೋರಂಟ್ಲಿ ಮುಂತಾದ ಹಿರಿಯರ ಸ್ಮರಣೆಯ ನೆನಕೆಗಳು ಈ ಕೃತಿಯಲ್ಲಿ ಕವನಗಳಾಗಿ ಹರಿದಿವೆ. ಜೊತೆಗೆ ಇಡಿ ಜಗತ್ತನ್ನೆ ಕಾಡಿದ್ದ ಕೊರೋನಾ ರೋಗದ ಕುರಿತು ಜಾಗೃತಿಯ ಕವನಗಳು ಇದರಲ್ಲಿವೆ. ಅವೆಲ್ಲವುಗಳನ್ನು ಕವಿ ರಮೇಶರವರು ಜನಮನದಂತೆ ಹಾಡಿದ್ದಾರೆ.
. ರಮೇಶ ಗಬ್ಬೂರುರವರ ಸಾಹಿತ್ಯಿಕ ಸಾಧನೆಗೆ ಅನೇಕ ಪುರಾಸ್ಕರಗಳು ಲಭಿಸಿವೆ. ಆದರೆ ಗಬ್ಬೂರುರವರು ಇದಾವುದನ್ನೂ ಬಯಸುವವರಲ್ಲ. ಮತ್ತು ಅದನ್ನು ಎಲ್ಲಿಯೂ ಹೇಳಿಕೊಳ್ಳುವ ವ್ಯಕ್ತಿಯಲ್ಲ. . ರಮೇಶ ಗಬ್ಬೂರುರವರ ಕವಿತೆಗಳು ಬಳ್ಳಾರಿಯ ವಿಜಯನಗರ . ಕೃಷ್ಣದೇವರಾಯ ವಿಶ್ವವಿದ್ಯಾಲಯ, ಗುಲಬರ್ಗಾ ವಿಶ್ವವಿದ್ಯಾಲಯ ಹಾಗೂ ಬೆಳಗಾವದ ರಾಣಿಚನ್ನಮ್ಮ ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿರುವುದು ಸಾಮಾನ್ಯವಾದ ಸಂಗತಿಯಲ್ಲ. ‘ಗರೀಬ್ ಗಜಲ್’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ‘ಗೂನು ಬೆನ್ನಿನ ಗದ್ದೆ’ ಕೃತಿಗೆ ದಲಿತ ಸಾಹಿತ್ಯ ಪರಿಷತ್ತಿನಿಂದ ಲೇಖಕರ ಮೊದಲ ಕೃತಿ ವಿಭಾಗದಲ್ಲಿ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಅಲ್ಲದೆ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಕಾಮ್ರೇಡ್ ಬಸವಣ್ಣ’ ಕೃತಿಗೆ ದಿ.ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡಿದ್ದಾರೆ. ಅವರ ಸೇವೆಗೆ ಏನೇ ಪ್ರಸ್ತಿಗಳು ಕೊಟ್ಟರೂ ಅವು ಕಡಿಮೆ ಅನಿಸಬಹುದೇನೋ ಎಂದೆನಿಸುತ್ತದೆ.

ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು

Get real time updates directly on you device, subscribe now.

1 Comment
  1. ರಮೇಶ ಗಬ್ಬೂರ್ says

    ಧನ್ಯವಾದಗಳು ಕನ್ನಡ net.com ಗೆ….
    ಮತ್ತು ಪ್ರೀತಿಯಿಂದ ನನ್ನ ಪುಸ್ತಕವನ್ನು ಪರಿಚಯಿಸುತ್ತ ನನ್ನನ್ನು ಪರಿಚಯಿಸಿದ ಡಾಕ್ಟರ್ ಸಿದ್ದಲಿಂಗಪ್ಪ ಕೊಟ್ನೆಕಲ್ ಅವರಿಗೆ ಕೂಡ ಧನ್ಯವಾದಗಳು

Comments are closed.

error: Content is protected !!
%d bloggers like this: