ಎಂ.ಸುಂದರೇಶಬಾಬು ಆಡಳಿತದ ಕಾರ್ಯವೈಖರಿ ಮಾದರಿಯಾದುದು
ಹಿಂದಿನ ಜಿಲ್ಲಾಧಿಕಾರಿಗಳೊಂದಿಗಿನ ಒಡನಾಟ
ಹಂಚಿಕೊಂಡ ನಾಗರಿಕರು, ಅಧಿಕಾರಿಗಳು, ಸಿಬ್ಬಂದಿ
—
ಕೊಪ್ಪಳ : ನಿರ್ಗಮಿತ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಅವರಿಗೆ ಸ್ಮರಣಿಕೆ ನೀಡಿ ಗೌರವಿಸುವುದರ ಜೊತೆಗೆ ಸುಂದರೇಶಬಾಬು ಅವರ ಒಂದು ವರ್ಷದ ಆಡಳಿತದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಇತ್ತೀಚೆಗೆ ಜಿಲ್ಲಾಡಳಿತದಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರು, ನಾಗರಿಕರು, ಪತ್ರಕರ್ತರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯು ಎಂ.ಸುಂದರೇಶಬಾಬು ಅವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ನಾನಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ ಬಗ್ಗೆ ಹಾಗೂ ಅವರೊಂದಿಗಿನ ಒಡನಾಟ ಕ್ಷಣಗಳನ್ನು ಹಂಚಿಕೊಂಡರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ ಅವರು ಮಾತನಾಡಿ, ಈ ಹಿಂದೆ ಜಿಲ್ಲಾ ಪಂಚಾಯತ್ ಸಿಇಓ ಆಗಿಯೂ ಕಾರ್ಯನಿರ್ವಹಿಸಿರುವ ಎಂ.ಸುಂದರೇಶಬಾಬು ಅವರು ಜಿಲ್ಲಾ ಪಂಚಾಯತ್ ಆಡಳಿತದ ವಿಷಯದಲ್ಲಿ ಸಹ ನೀಡುತ್ತಿದ್ದ ಸಲಹೆಗಳು ಪ್ರಯೋಜನಕಾರಿಯಾಗಿವೆ ಎಂದರು.
ವಿವಾದ ರಹಿತ ಆಡಳಿತ: ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಿವೃತ್ತ ಎ.ಎಂ.ಮುಲ್ಲಾ ಅವರು ಮಾತನಾಡಿ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಆಡಳಿತ ಸುಗಮವಾಗಿ ನಡೆಸುವ ನೈಪುಣ್ಯತೆ ಹೊಂದಿದ್ದರಿಂದಾಗಿ ಎಂ.ಸುಂದರೇಶಬಾಬು ಅವರಿಗೆ, ಕಪ್ಪು ಚುಕ್ಕೆ ಇಲ್ಲದ ಹಾಗೆ ಪಾರದರ್ಶಕವಾದ ಆಡಳಿತ ನಡೆಸಲು ಸಾಧ್ಯವಾಗಿದೆ. ನಾಲ್ಕು ನಿಗಮಗಳನ್ನು ಹೊಂದಿದ ನಿರ್ದೇಶಕರ ಹುದ್ದೆಯ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷರಾದ ಪೀರಾಹುಸೇನ ಹೊಸಳ್ಳಿ ಅವರು ಮಾತನಾಡಿ, ಹಿಂದುಳಿದ ಕೊಪ್ಪಳ ಜಿಲ್ಲೆಯ ಜನರ ಬದುಕು-ಭವಣೆ ಬಗ್ಗೆ ತಿಳಿದು, ಇಲ್ಲಿನ ಜನರ ನಾಡಿಮಿಡಿತ ಅರಿತು ಕೆಲಸ ಮಾಡಿದ್ದರಿಂದ ವಿವಾದರಹಿತ ಆಡಳಿತ ನಡೆಸಿದ ಶ್ರೇಯಸ್ಸು ಎಂ.ಸುಂದರೇಶಬಾಬು ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಸುಂದರೇಶಬಾಬು ಅವರಿಗೆ ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿಯು ‘ದೇವರು’ ಎಂದೇ ಸಂಬೋಧಿಸುತ್ತಿದ್ದರು ಎಂಬುದನ್ನು ತಿಳಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಅವರು, ಪ್ರತಿನಿತ್ಯ ನಮ್ಮ ಮನೆಯಂಗಳ ಶುಚಿಗೊಳಿಸುವ ಪೌರ ಕಾರ್ಮಿಕರ ಬಗ್ಗೆ ಸುಂದರೇಶಬಾಬು ಅವರು ವಿಶೇಷ ಕಾಳಜಿ ಹೊಂದಿದ್ದರು. ಪೌರಕಾರ್ಮಿಕರಿಗೆ ಸಹ ಸಕಾಲಕ್ಕೆ ಸೌಕರ್ಯ ಮತ್ತು ಭದ್ರತೆ ಸಿಗಬೇಕು ಎಂದು ಹೇಳುತ್ತಿದ್ದರು. ಇದು ಅವರಲ್ಲಿರುವ ಮಾನವೀಯ ಗುಣಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬಗ್ಗೆ ಸಹ ಸುಂದರೇಶಬಾಬು ಅವರಿಗೆ ವಿಶೇಷ ಕಾಳಜಿ ಇತ್ತು. ಪ್ರತಿ ನಿತ್ಯ ಸಾರ್ವಜನಿಕರೊಂದಿಗಿರುವ ನಿಮಗೆ ಜನಸೇವೆ ಮಾಡಲು ಸಾಕಷ್ಟು ಅವಕಾಶವಿರುತ್ತದೆ ಎಂದು ಕಂದಾಯ ಇಲಾಖೆಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮನವರಿಕೆ ಮಾಡುತ್ತಿದ್ದರು. ಬೆಳೆ ಹಾನಿ, ಮನೆ ಹಾನಿ, ಜೀವ- ಜಾನುವಾರು ಪ್ರಾಣಿ ಹಾನಿ ಪ್ರಕರಣಗಳಲ್ಲಿ ನೊಂದ ಸಂತ್ರಸ್ಥರಿಗೆ ಸಕಾಲಕ್ಕೆ ಪರಿಹಾರ ಕಲ್ಪಿಸಲು ವಿಶೇಷ ಆಸ್ಥೆ ವಹಿಸಿದ್ದರು ಎಂದು ತಿಳಿಸಿದರು.
ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ವ್ಯವಸ್ಥಾಪಕರಾದ ಹರೀಶ್ ಜೋಗಿ ಅವರು ಮಾತನಾಡಿ, ಸುಂದರೇಶಬಾಬು ಅವರಲ್ಲಿನ ತಾಳ್ಮೆ ಗುಣ ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿಯ ಬಗ್ಗೆ ಅವರಿಗಿರುವ ಗೌರವ ಭಾವನೆ ಮಾದರಿಯಾದುದು ಎಂದು ತಿಳಿಸಿದರು.
ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಸುಂದರೇಶಬಾಬು ಅವರಲ್ಲಿ ಅಂತಃಕರಣದ ಗುಣವಿದೆ. ಮಾನವ ಸಂಬಂಧಗಳ ಬಗ್ಗೆ ಅವರಿಗೆ ಅತೀವ ಗೌರವವಿರುವ ಕಾರಣಕ್ಕೆ ಅವರಿಂದ ಜಿಲ್ಲೆಯಲ್ಲಿ ಹತ್ತಾರು ಉತ್ತಮ ಕಾರ್ಯಗಳು ಸಾಧ್ಯವಾಗಿವೆ. ಪತ್ರಕರ್ತರು, ನಾಗರಿಕರು, ಹೋರಾಟಗಾರರು, ಸಾಹಿತಿಗಳು ಯಾರೇ ಬಂದರು ಅವರಿಗೆ ಗೌರವದಿಂದ ಕಾಣುತ್ತಿದ್ದರು ಎಂದು ತಿಳಿಸಿದರು.
ಕಡತಗಳ ನಿರ್ವಹಣೆ ಮತ್ತು ಇನ್ನೀತರ ಕೆಲವು ವಿಷಯಗಳಲ್ಲಿ ಸುಂದರೇಶಬಾಬು ಸಾಹೇಬರು ನೀಡುತ್ತಿದ್ದ ಮಾರ್ಗದರ್ಶನ ನಮಗೆ ದಾರಿದೀಪವಾಗಿದೆ. ಕಚೇರಿಯಲ್ಲಿನ ಗ್ರೂಪ್ ಡಿ ಸಿಬ್ಬಂದಿ ಮನೆಯಲ್ಲಿನ ಸಿಬ್ಬಂದಿಗೆ ಸಹ ಅವರು ಬಹುವಚನದಿಂದ ಮಾತನಾಡಿಸಿ ಗೌರವ ನೀಡುವ ಮಾನವೀಯಗುಣ ಅವರಲ್ಲಿತ್ತು ಎಂದು ಕಂದಾಯ ಇಲಾಖೆಯ ಪ್ರಕಾಶ ಮತ್ತು ಯಮನೂರಪ್ಪ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪತ್ರಿಕೆಗಳಿಂದ ಸಂದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವಾಗ, ನ್ಯೂಸ್ ಸ್ಟೋರಿ ಸಿದ್ಧಪಡಿಸುವ ಸಂದರ್ಭದಲ್ಲಿ ಕರೆ ಮಾಡಿದಾಗ ಎಂ.ಸುಂದರೇಶಬಾಬು ಅವರು ಕರೆ ಸ್ವೀಕರಿಸಿ ಪ್ರತಿಕ್ರಿಯಿಸುವ ಅವರ ಸ್ಪಂದನಾ ಗುಣ ಮೆಚ್ಚುವಂತದ್ದಾಗಿದೆ ಎಂದು ಪತ್ರಕರ್ತರಾದ ಸಿದ್ದಪ್ಪ ಹಂಚಿನಾಳ, ಶ್ರೀಕಾಂತ ಅಕ್ಕಿ ಹಾಗೂ ಅನಿಲ ಬಾಚನಹಳ್ಳಿ ಅವರು ಅಭಿಪ್ರಾಯಪಟ್ಟರು.
ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಸಹ ಮಾತನಾಡಿ ಎಂ.ಸುಂದರೇಶಬಾಬು ಅವರ ಆಡಳಿತ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹಾಗೂ ಇನ್ನೀತರರು ಇದ್ದರು. ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಸಮಾರಂಭದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಎಂ.ಸುಂದರೇಶಬಾಬು ಅವರೊಂದಿಗೆ ಗ್ರೂಪ್ ಫೋಟೊ ತೆಗೆಯಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
Comments are closed.