ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ನಿರ್ಮಾಣಕ್ಕೆ ಅಸ್ತು | ಭೂ ಪರಿಹಾರಕ್ಕೆ 3 ಕೋಟಿ ರೂ. ಬಿಡುಗಡೆ
ಮೇಲ್ಸೆತುವೆಗೆ 29.57 ಕೋಟಿ ರೂ. ಬಿಡುಗಡೆ
ಕೊಪ್ಪಳ: ಹುಲಿಗಿ ಗ್ರಾಮದ ರೈಲ್ವೆ ಗೇಟ್ ಸಂ.79ರ ಹುಲಿಗಿ-ಮುನಿರಾಬಾದ್ ಮೇಲ್ಸೇತುವೆ ಕಾಮಗಾರಿಗೆ ಕೇಂದ್ರ ಸರ್ಕಾರ 29.57 ಕೋಟಿ ರೂ. ಹಾಗೂ ಭೂ ಪರಿಹಾರಕ್ಕೆ 3 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈಲ್ವೆ ಮೇಲ್ಸೆತುವೆಗಳಿಗೆ ರಾಜ್ಯದ ಪಾಲು ಇರಲಿದೆ. ಆದರೆ, ಈ ಯೋಜನೆಗಳಿಗೆ ರಾಜ್ಯ ಸರ್ಕಾರ ನಿರಾಸಕ್ತಿ ತೋರಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ ಆಗಬಾರೆಂಬ ಕಾರಣಕ್ಕೆ ಕೇಂದ್ರ ಸರ್ಕಾರವೇ ಎಲ್ಲ ಹಣ ಬಿಡುಗಡೆ ಮಾಡಿದೆ ಎಂದರು.
ಜಿಲ್ಲೆಯಲ್ಲಿ ರೈಲ್ವೆ ಯೋಜನೆ ಗಳನ್ನು ಅನುಷ್ಠಾನ ಮಾಡುವ ಮೂಲಕ ಕ್ರಾಂತಿ ಮಾಡಲಾಗಿದೆ. ಕಳೆದ 9 ವರ್ಷದಲ್ಲಿ ಇಂದೆಂದೂ ಕಂಡರಿಯದಂತ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸಂಸದನಾಗುವ ಮೊದಲು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಒಂದು ತಾಲೂಕಿಗಷ್ಟೇ ರೈಲ್ವೆ ಸಂಪರ್ಕ ಇತ್ತು. ಆದರೀಗ ಆರು ತಾಲೂಕಿಗೆ ವಿಸ್ತರಿಸಲಾಗಿದೆ. ಶೀಘ್ರದಲ್ಲೇ ಸಿಂಧನೂರಿಗೆ ರೈಲು ಸಂಚಾರ ಆರಂಭವಾಗುವ ಮೂಲಕ ಎಲ್ಲ ತಾಲೂಕುಗಳಿಗೂ ರೈಲು ಓಡಾಟ ನಡೆಸಿದಂತಾಗುತ್ತದೆ. ಇದು ಪ್ರಧಾನಿ ಮೋದಿ ಸರ್ಕಾರದಿಂದ ಸಾಧ್ಯವಾಗಿದೆ ಎಂದರು.
ಕಳೆದ ಆರು ದಶಕದಲ್ಲಿ ಆಗದಂತ ರೈಲ್ವೆ ಯೋಜನೆಗಳನ್ನು ಕೇವಲ 9 ವರ್ಷಗಳಲ್ಲಿ ಸಾಧ್ಯವಾಗಿದೆ. ಇದು ನಮ್ಮ ಬದ್ಧತೆ. ಕಾಂಗ್ರೆಸ್ ಸರ್ಕಾರ ರೈಲ್ವೆ ಯೋಜನೆ ರೂಪಿಸುತ್ತಿತ್ತು. ಆದರೆ, ಹಣ ನೀಡದೇ ನೆನೆಗುದಿಗೆ ಬಿದ್ದಿದ್ದವು. ಆದರೆ, ಬಿಜೆಪಿ ಸರ್ಕಾರ ನೆನೆಗುದಿಗೆ ಬಿದ್ದ ಯೋಜನೆ ಪೂರ್ಣಗೊಳಿಸಿದೆ. ಕಾಂಗ್ರೆಸ್ ನಂತೆ ಘೋಷಣೆಗೆ ಮಾತ್ರ ಸೀಮಿತವಾಗಿಲ್ಲ. ಕಾರ್ಯರೂಪಕ್ಕೆ ತಂದಿದ್ದೇವೆ. ಬಿಜೆಪಿ ಓಲೈಕೆ ರಾಜಕಾರಣ ಮಾಡದೇ ಅಭಿವೃದ್ಧಿ ಪರ ರಾಜಕಾರಣ ಮಾಡುತ್ತಿದೆ. ಇದಕ್ಕೆ ದೇಶದ ಚಿತ್ರಣವೇ ಸಾಕ್ಷಿ ಎಂದರು.
ಡಿಜಿಟಲ್ ವ್ಯವಹಾರ ಜಾರಿಗೊಳಿಸಿದಾಗ ಕಾಂಗ್ರೆಸ್ ನಾಯಕರೇ ವ್ಯಂಗ್ಯವಾಡಿದ್ದರು. ಆದರೀಗ ವಿಶ್ವದಲ್ಲಿ 100 ರೂ. ಸ್ಕ್ಯಾನ್ ಮೂಲಕ ಡಿಜಿಟಲ್ ವ್ಯವಹಾರ ನಡೆದರೆ ಶೇ.47 ರಷ್ಟು ಭಾರತದ ಜನರೆ ವಹಿವಾಟು ಮಾಡಿರುತ್ತಾರೆ. ಅಭಿವೃದ್ಧಿ ಹೊಂದಿದ ದೇಶಗಳೇ ಬಾಯಿ ಮೇಲೆ ಬೆರಳಿಡುವಂತೆ ಮಾಡಿದ್ದೇವೆ. ದೇಶದ ಆರ್ಥಿಕತೆ ವಿಶ್ವದ ಮೂರನೇ ಸ್ಥಾನಕ್ಕೆ ಬಂದಿದೆ. ಹೀಗೇ ಹಲವಾರು ಕ್ಷೇತ್ರಗಳಲ್ಲಿ ಭಾರತ ಮೊದಲ ಸಾಲಿನಲ್ಲಿ ಇದೆ. ಇದು ಅಭಿವೃದ್ಧಿ. ಇದು ಬಿಜೆಪಿ ಸಾಧನೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಬಳಿಕ ಜಿಲ್ಲೆಯಲ್ಲಿ ರೈಲ್ವೆ ಕ್ರಾಂತಿಯಾಗಿದೆ. ತಾಲೂಕು ಕೇಂದ್ರಗಳಿಗೆ ರೈಲು ಮಾರ್ಗ, ರೈಲ್ವೆ ನಿಲ್ದಾಣ ಅಭಿವೃದ್ಧಿಯಾಗಿವೆ. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳನ್ನು ಬಿಜೆಪಿ ಪೂರ್ಣಗೊಳಿಸಿದೆ.– ಸಂಗಣ್ಣ ಕರಡಿ, ಸಂಸದ.
Comments are closed.