ವಿಜೃಂಭಣೆಯಿಂದ ಜರುಗಿದ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ : ಲಕ್ಷಾಂತರ ಭಕ್ತಾದಿಗಳು ಭಾಗಿ:

Get real time updates directly on you device, subscribe now.

ಮಳೆಯಲ್ಲಿಯೂ ಹರಿದು ಬಂದ ಭಕ್ತ ಸಾಗರ: ಉಧೋ ಉಧೋ ಘೋಷಣೆ


ಕೊಪ್ಪಳ ಮೇ 21 : ಕೊಪ್ಪಳ ತಾಲೂಕಿನ ಹುಲಿಗೆ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಮಹಾರಥೋತ್ಸವವು ಬುಧವಾರ ಅಪಾರ ಜನ ಸಾಗರದ ನಡುವೆ ವಿಜೃಂಭಣೆಯಿಂದ ಜರುಗಿತು.

ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಜಾತ್ರೆಯ ಮುಖ್ಯ ಭಾಗವಾದ ಮಹಾರಥೋತ್ಸವವು ಮೇ 21ರ ಸಾಯಂಕಾಲ 5-30 ಗಂಟೆಗೆ ಲಕ್ಷಾಂತರ ಭಕ್ತಾಧಿಗಳ ಸಮೂಹದ ನಡುವೆ ಅದ್ದೂರಿಯಾಗಿ ರಥೋತ್ಸವ ಜರುಗಿತು. ಮಳೆಯ ನಡುವೆಯೂ ಮಹಾರಥೋತ್ಸವಕ್ಕೆ ಭಕ್ತರು ಸಾಗರದಂತೆ ಹರಿದು ಬಂದಿರುವುದು ವಿಶೇಷವಾಗಿತ್ತು.

ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವದಲ್ಲಿ ಭಕ್ತರ ಉಧೋ ಉಧೋ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತವೃಂದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ, ಭಕ್ತಿ ಭಾವ ಮೆರೆದರು. ಕರ್ನಾಟಕದ ವಿವಿಧ ಜಿಲ್ಲೆಗಳ ಮತ್ತು ಆಂದ್ರಪ್ರದೇಶದ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಸೇರಿದಂತೆ ಲಕ್ಷಾಂತರ ಭಕ್ತಾದಿಗಳು ಜಾತ್ರೆಗೆ ಆಗಮಿಸಿ, ಮಹಾರಥೋತ್ಸವವನ್ನು ಕಣ್ತುಂಬಿಕೊಂಡರು. ರಥವು ಪಾಜಕಟ್ಟಿ ವರೆಗೆ ಹೋಗಿ ದೇವಸ್ಥಾನ ಬಳಿ ಮರಳುತ್ತಿದ್ದಂತೆ‌ ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಅಚ್ಚುಕಟ್ಟು ವ್ಯವಸ್ಥೆ: ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯು ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ, ಸ್ನಾನ ಗೃಹ, ಸಾರಿಗೆ ಮತ್ತು ವಾಹನಗಳ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ. ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರತಿನಿತ್ಯ ಪ್ರಸಾದದ ವ್ಯವಸ್ಥೆಯನ್ನು ಸಹ ಉತ್ತಮ ರೀತಿಯಲ್ಲಿ ಮಾಡಲಾಗಿರುತ್ತದೆ.

ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಸಂಸದ ಕರಡಿ ಸಂಗಣ್ಣನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಹೆಚ್.ಪ್ರಕಾಶ್‌ರಾವ್ ಕೊಪ್ಪಳ ಮತ್ತು ಗಂಗಾವತಿ ಡಿವೈಎಸ್‌ಪಿಗಳು, ಇತರೆ ಜನಪ್ರತಿನಿಧಿಗಳು ಹಾಗೂ ಇತರರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತವೃಂದ ಉಪಸ್ಥಿತರಿದ್ದು, ರಥೋತ್ಸವ ಯಶಸ್ವಿಗೆ ಸಾಕ್ಷಿಯಾದರು.

Get real time updates directly on you device, subscribe now.

Comments are closed.

error: Content is protected !!