ಸಂಘ ರಚನೆಗಿಂತ ಸಂಘಟನೆಯನ್ನು ಮುನ್ನಡಿಸುವುದು ಬಹಳ ಮುಖ್ಯ: ದುಂಡಪ್ಪ ತುರಾದಿ

ಕೊಪ್ಪಳ: ಪ್ರಮುಖವಾದ ವ್ಯಕ್ತಿಗಳು ಸೇರಿಕೊಂಡು ಸಂಘವನ್ನು ರಚನೆ ಮಾಡುವುದು ಸುಲಭವಾದ ಕಾರ್ಯವಾಗಿದೆ.ಆದರೆ ಸಂಘದ ಸಂಘಟನೆಯನ್ನು ಸರಿಯಾದ ರೀತಿಯಲ್ಲಿ ಮುನ್ನಡಿಸುವುದು ಬಹಳ ಮುಖ್ಯವಾದ ಕಾರ್ಯವಾಗಿದೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಹೇಳಿದರು.
ಅವರು ಮಂಗಳವಾರ ನಗರದ ತಾಲೂಕ ಪಂಚಾಯತ ಸಭಾಭವನದಲ್ಲಿ ಸರ್ಕಾರಿ ಮಹಿಳೆಯರ ನೌಕರ ಸಂಘದ ಜಿಲ್ಲಾ ಘಟಕದ ಉದ್ಘಾಟನೆ,ಪದಗ್ರಹ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ,ತಮ್ಮ ಹಕ್ಕು ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಆಯ್ದ ವ್ಯಕ್ತಿಗಳು ಸೇರಿಕೊಂಡು ಸಂಘವನ್ನು ರಚನೆ ಮಾಡುವುದು ಬಹಳ ಸರಳವಾದ ವಿಧಾನವಾಗಿದೆ.ಕೇವಲ ಸಂಘವನ್ನು ರಚನೆ ಮಾಡಿದರೆ ಸಾಲದು ಆ ಸಂಘವು ತನ್ನ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು ಹಾಗೂ ಅವರ ಬೇಕು-ಬೇಡಿಕೆಗಳನ್ನು ಸರಿಯಾದ ಸಮಯದಲ್ಲಿ ಈಡೇರಿಸಿದಾಗ ಮಾತ್ರ ಸಂಘವು ಸಂಘಟನೆಯಾಗಿ ಶಾಶ್ವತವಾಗಿ ಉಳಿಯುತ್ತವೆ.ಪ್ರಸ್ತುತ ದಿನಮಾನಗಳಲ್ಲಿ ಅನೇಕ ರೀತಿಯ ಸಂಘಟನೆಗಳು ಉದಯವಾಗುತ್ತಿದ್ದು,ಅವುಗಳು ಸದಸ್ಯರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಲಿ.ಮಹಿಳೆರ ಸಂಘವು ಕೂಡಾ ತನ್ನ ಸದಸ್ಯರ ಬೇಡಿಕೆಗಳಿಗೆ ಹಾಗೂ ಅವರ ಸಮಸ್ಯೆಗಳಿಗೆ ಧ್ವನಿಯಾಗಿಲಿ ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷರಾದ ಅಮ್ಜದ ಪಟೇಲ ಮಾತನಾಡುತ್ತಾ,ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಪ್ರಸ್ತುತ ದಿನಮಾನಗಳಲ್ಲಿ ಬಹಳ ಒತ್ತಡದಿಂದ ಕೆಲಸ ಮಾಡುತ್ತಿದ್ದು,ಸರ್ಕಾರವು ಅವರ ಒತ್ತಡ ಕಡಿಮೆ ಮಾಡಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವ ಕೆಲಸ ಮಾಡಬೇಕಿದೆ.ಸಂಘವು ಹಮ್ಮಿಕೊಳ್ಳುವ ಎಲ್ಲಾ ಕಾರ್ಯಗಳಿಗೆ ಸಂಪೂರ್ಣವಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತಹಸಿಲ್ದಾರರಾದ ವಿಠ್ಠಲ್ ಚೌಗಲೇ ಮಾತನಾಡಿ,ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಿಲ್ಲ.ಅದೇ ಸಂಘ ಹಾಗೂ ಸಂಘಟನೆಯ ಮೂಲಕ ಬೇಗ ಪಡೆಯಬಹುದಾಗಿದೆ.ಸರ್ಕಾರಿ ಸೇವೆಯಲ್ಲಿ ಇರುವ ಮಹಿಳೆಯರು ತಮ್ಮಲ್ಲಿ ಇರುವಂತ ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಇತರೇ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಸರ್ಕಾರಿ ಮಹಿಳೆಯರ ನೌಕರರ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ.ಶೈಲಜಾ.ಸಿ.ವಿ. ಮಾತನಾಡುತ್ತಾ,ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಅನೇಕ ಮಹಿಳೆಯರು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದು,ಅವುಗಳ ಪರಿಹಾರಕ್ಕಾಗಿ ಸಂಘಟನೆಯನ್ನು ಕಟ್ಟಲಾಗಿದೆ.ನೊಂದ ಸರ್ಕಾರಿ ಮಹಿಳಾ ನೌಕರರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸ ಮಾಡಲಾಗಿದೆ.ಮುಂದಿನ ದಿನಗಳ ರಾಜ್ಯ ಎಲ್ಲಾ ಜಿಲ್ಲೆಯಲ್ಲಿ ಸಂಘಟನೆ ಕಟ್ಟಿಯಾದ ನಂತರ ರಾಜ್ಯ ಮಟ್ಟದ ಸಮ್ಮೇಳನ ಮಾಡುವ ಚಿಂತನೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಕುರಿತು ಜಿಲ್ಲಾ ಪ್ರದಾನ ಕಾರ್ಯದರ್ಶಿ ಅನ್ನಪೂರ್ಣ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಮಹಾಲಕ್ಷ್ಮೀ.ಪಿ.ಆರ್.ವಹಿಸಿದ್ದರು.
ಮಹಿಳಾ ಸಬಲೀಕರಣದ ಕುರಿತು ಸಾಹಿತಿ ಅರುಣಾ ನರೇಂದ್ರ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳೆಯರ ನೌಕರ ಸಂಘದ ರಾಜ್ಯಾಧ್ಯಕ್ಷರಾದ ರಮಾ.ಆರ್,ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ,ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಮಾರುತಿ ಮ್ಯಾಗಳಮನಿ ಮುಂತಾದವರು ಹಾಜರಿದ್ದರು.
ಶಿಕ್ಷಕಿ ಸುಜಾತ ಕುರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಂಕ್ರಮ್ಮ ಸ್ವಾಗತಿಸಿ,ಶಾಂತಾ ವಂದಿಸಿದರು.
Comments are closed.