ಕ್ಷೇತ್ರಪತಿ ಸಿನಿಮಾ ವಿಮರ್ಶೆ-ಅನ್ನದಾತನ ಅಳಲಿಗೆ ಅಳತೆಗೋಲು Cinema Review

Get real time updates directly on you device, subscribe now.

– ಬಸವರಾಜ ಕರುಗಲ್
ಉತ್ತರ ಕರ್ನಾಟಕದ ಭಾಷೆ ಮಾತ್ರವಲ್ಲ, ಅಲ್ಲಿನ ರೈತರ ನೈಜಸಮಸ್ಯೆ ಪ್ರತಿಬಿಂಬಿಸುವ, ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನ ಪ್ರಯತ್ನದ ಸಿನಿಮಾ ಈ ವಾರ ತೆರೆ ಕಂಡ ಕನ್ನಡದ ಕ್ಷೇತ್ರಪತಿ.
ಗದಗ ಜಿಲ್ಲೆ ಮತ್ತು‌ ಜಿಲ್ಲೆಯ ತಿಮ್ಮಾಪುರ ಎನ್ನುವ ಗ್ರಾಮವನ್ನು ಪ್ರಾತಿನಿಧಿಕವಾಗಿ ಇಟ್ಟುಕೊಂಡು, ಚಿತ್ರದ ಬಹುಭಾಗವನ್ನು ಬೆಂಗಳೂರು ಸುತ್ತ ಮುತ್ತ ಮತ್ತು ಚಿತ್ರೀಕರಿಸುವುದು ಉತ್ತರ ಕರ್ನಾಟಕದ ಜನರಿಗೆ ಸುಲಭವಾಗಿ ಗೊತ್ತಾಗುತ್ತದೆ. ನೈಜತೆಗೆಂದು ಕೆಲ ದೃಶ್ಯಗಳನ್ನು ಗದಗ ಮತ್ತು ಸುತ್ತ ಮುತ್ತ ಸೆರೆ ಹಿಡಿಯಲಾಗಿದೆ.
ರೈತ, ರೈತನ ಬೆಳೆ, ಆತನ ಅಳಲು ಮತ್ತು ಅವನ ಆತ್ಮಹತ್ಯೆಯ ಕಥಾಹಂದರ ಹೊಂದಿರುವ ಕ್ಷೇತ್ರಪತಿಯ ಜೀವಾಳವೆಂದರೆ ಸಂಭಾಷಣೆ. ಭೂಮಿತಾಯಿಯ ಚೊಚ್ಚಲಮಗ ಸಿನಿಮಾದ ಕ್ಲೈಮ್ಯಾಕ್ಸ್ ಸೀನ್ ಮತ್ತು ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾದ ಅರ್ಧ ಭಾಗ ಕ್ಷೇತ್ರಪತಿ ನೋಡುವಾಗ ಕಣ್ಮುಂದೆ ಸುಳಿದು ಹೋಗುತ್ತವೆ.
50 ಸಾವಿರ ಖರ್ಚು ಮಾಡಿ ತೆಗೆದ ಬೆಳೆ, ಮಾರಾಟವಾದಾಗ ಕೈಗೆ ಬಂದದ್ದು 20 ಸಾವಿರ ರೂಪಾಯಿ. ಇದು ಬಹುತೇಕ ರೈತರ ಬ್ಯಾಲೆನ್ಸ್ ಶೀಟ್. ಹಾಗಾಗಿ ರೈತರು ಆತ್ಮಹತ್ಯೆಗೆ ಶರಣಾಗುತ್ತಲೇ ಇದ್ದಾರೆ. ಇದಕ್ಕೆಲ್ಲ ಕಾರಣ ದಲ್ಲಾಳಿ, ಗ್ರಾಮ ಮಟ್ಟದಲ್ಲೂ ಬೇರೂರಿರುವ ರಾಜಕಾರಣ ಮತ್ತು ಜನರನ್ನಾಳುವ ಸರಕಾರ. ಇದನ್ನೆಲ್ಲ ಮಟ್ಟ ಹಾಕೋದು ಹೇಗೆ ಅನ್ನೋದೇ‌ ಕ್ಷೇತ್ರಪತಿಯ ಕಥಾವಸ್ತು.
ರೈತ ಬೆಳೆದ ಬೆಳೆಗೆ ಬೆಲೆ ಕುಸಿತದ ಸಂಕಷ್ಟ ಎದುರಾದಾಗ ಬೆಂಬಲ ಬೆಲೆ ಘೋಷಿಸುವುದಕ್ಕಿಂತ ರೈತ ಬೆಳೆಯುವ ತರಹೇವಾರಿ ಬೆಳೆಗೆ ಲಾಭದಾಯಕ ಬೆಲೆಯನ್ನು ಬೆಳೆಯುವ ಮೊದಲೇ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಡಳಿತಾತ್ಮಕ ಫಲಕದಲ್ಲಿ ಪ್ರದರ್ಶಿಸಬೇಕೆನ್ನುವ ಮಸೂದೆ ಜಾರಿಯಾಗಬೇಕೆನ್ನುವುದೇ ಚಿತ್ರದ ಸಂದೇಶ.
ಇಡೀ ಚಿತ್ರ ರೈತರ ಸಮಸ್ಯೆಯನ್ನೇ ಬಿಂಬಿಸುವ ಸಾಕ್ಷ್ಯಚಿತ್ರವಾಗುವ ಅಪಾಯ ತಪ್ಪಿಸಿದ್ದು ರೈತರ ನ್ಯೂನ್ಯತೆಗಳನ್ನು ಸೂಚ್ಯವಾಗಿ ಹೇಳುವ ಮೂಲಕ, ಕಾರ್ಪೊರೇಟ್ ಕಂಪನಿಗಳು ಒಕ್ಕಲುತನದ ಮೇಲೂ ಸವಾರಿ ಆರಂಭಿಸಿರುವುದನ್ನ ತೋರಿಸುವ ಮುಖಾಂತರ. ಸಾವಯವದ ಬದಲು ರಾಸಾಯನಿಕ, ‌ಕ್ರಿಮಿನಾಶಕ ಬಳಸುವ ಪದ್ಧತಿ ಟೀಕಿಸುವ, ಕೃಷಿಯಲ್ಲಿ ಎರೆಹುಳ ಬಳಕೆ ಇಲ್ಲದಿರುವುದು, ವ್ಯವಸಾಯಕ್ಕೆ ಎತ್ತು, ಆಕಳು, ಎಮ್ಮೆ ಬದಲು ಟ್ರ್ಯಾಕ್ಟರ್ ಅವಲಂಬನೆಯಂಥ ರೈತರ ಹಲವು ಅನಗತ್ಯ ಆಕರ್ಷಣೆಗಳನ್ನು ಟೀಕಿಸುವ ಮೂಲಕ ಕ್ಷೇತ್ರಪತಿ ನೈಜತೆಗೆ‌ ಹತ್ತಿರ ಎಂಬುದರಲ್ಲಿ ಎರಡು ಮಾತಿಲ್ಲ.
ಬೆಂಗಳೂರಿನಲ್ಲಿ ಎಂಜನಿಯರಿಂಗ್ ಓದುತ್ತಿರುವ ಬಸವರಾಜ ಹಾದಿಮನಿ, ಅಪ್ಪನ ಆತ್ಮಹತ್ಯೆಯ‌ ಬಳಿಕ ತನ್ನ ಹಳ್ಳಿಗೆ ಬಂದು ಕೃಷಿ ಕಾಯಕ ಮಾಡಲು ಮುಂದಾದಾಗ ಎದುರಾಗುವ ಸವಾಲುಗಳನ್ನು ಧೈರ್ಯದಿಂದ, ಜಾಣತನದಿಂದ, ಅಹಿಂಸಾತ್ಮಕ, ಸೌಮ್ಯ ಹೋರಾಟದಿಂದ ಎದುರಿಸಿ, ಊರ ಗೌಡನಿಗೆ, ರಾಜಕಾರಣಿಗಳಿಗೆ ಬಸವನಾಗಿ ಯುವಜನರಿಗೆ ರಾಜನಾಗಿ ರೈತಪರ ಮಸೂದೆ ಜಾರಿಯಾಗುವ ಹಾದಿ ಸುಗಮಗೊಳಿಸಿ, ಪ್ರತಿ ಮನೆ ಸುಖಶಾಂತಿಯಿಂದ‌ ಕಂಗೊಳಿಸುವುದೇ ಕಥೆಯ ಸಾರ.
ನಾಯಕ ನವೀನ ಮಧ್ಯಂತರದ ಸಂಭಾಷಣೆ ಹೇಳುವಾಗ ಇನ್ನೊಂಚೂರು ಜೋಷ್ ಬೇಕಿತ್ತು. ನಾಯಕಿ ಅರ್ಚನಾ ಪ್ರತ್ಯಕ್ಷವಾಗುವುದೇ ವಿರಾಮದ ಬಳಿಕ. ತೂಕವಿಲ್ಲದಿದ್ದರೂ ನ್ಯಾಯದ ಅಭಿನಯ. ಅಚ್ಯುತ್‌ಕುಮಾರ್ ಪಾತ್ರಕ್ಕೂ ತೂಕವೇನಿಲ್ಲ. ಗ್ರಾಮೀಣ ಪರಿಸರ ಸೆರೆ ಹಿಡಿದದ್ದು ಛಾಯಾಗ್ರಾಹಕ ಶಿವಸಾಗರ್ ಹೆಚ್ಚುಗಾರಿಕೆ. ಪಾಳೇಗಾರ ಮಾದರಿಯ ಪಾತ್ರದಲ್ಲಿ ರಾಹುಲ್ ಐನಾಪುರ ಮಿಂಚಿದ್ದಾರೆ. ಕೃಷ್ಣ ಹೆಬ್ಬಾಳೆ ಪಾತ್ರ ಸಹ ಬಂದ ಪುಟ್ಟ, ಹೋದ ಪುಟ್ಟ. ರವಿ ಬಸ್ರೂರ್ ಸಂಗೀತದ ಹಾಡೊಂದು, ಎರಡು ಬೀಟ್ ಚನ್ನಾಗಿವೆ. ಹಿನ್ನೆಲೆ ಸಂಗೀತ ಎಲ್ಲ ದೃಶ್ಯಗಳಲ್ಲೂ ಒಕೆ ಎನ್ನಲಾಗಲ್ಲ. ನಿರ್ದೇಶನದ ಜೊತೆಗೆ ಸಂಭಾಷಣೆಗೂ ಲೇಖನಿ ಹಿಡಿದ ಶ್ರೀಕಾಂತ್ ಕಟಗಿ ಬಹುಶಃ ಉತ್ತರ ಕರ್ನಾಟಕದ ‌ನೆಲೆಯವರು ಎನ್ನುವ ಕುರುಹು ಕಾಣುವಂತೆ ಕಥೆ‌ ಹೆಣೆದಿದ್ದಾರೆ. ಅವರ ಪ್ರಯತ್ನ ಖಂಡಿತ ಮೆಚ್ಚುಗೆಗೆ ಪಾತ್ರ.
ಹಳ್ಳಿ ಜನ, ರೈತರು ಈ ಸಿನಿಮಾ ನೋಡಿದರೆ ಕ್ಷೇತ್ರಪತಿಗೆ, ಕ್ಷೇತ್ರಪತಿ ನಿರ್ಮಾಣಕ್ಕೊಂದು ಸಾರ್ಥಕ್ಯ. ಅಲ್ಲಲ್ಲಿ ಡ್ರ್ಯಾಗ್, ಜಾಳು ಜಾಳು ಎನಿಸುವುದನ್ನ‌ ಬಿಟ್ಟರೆ ಕ್ಷೇತ್ರಪತಿಗೆ ನೋಡಿಸಿಕೊಂಡು ಹೋಗುವ ಗುಣವಿದೆ.
ರೇಟಿಂಗ್: 5ಕ್ಕೆ 3.5 (ಅಂಕ)

Get real time updates directly on you device, subscribe now.

Comments are closed.

error: Content is protected !!
%d bloggers like this: