ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದೆ ಬರಬೇಕು-ಜಿಲ್ಲಾಧಿಕಾರಿ ನಲಿನ್ ಅತುಲ್

0

Get real time updates directly on you device, subscribe now.


ಕೊಪ್ಪಳ ಮಾರ್ಚ್ ೨೮ : ಜಿಲ್ಲೆಯ , ಸಾವಯವ ಕೃಷಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸಾವಯವ ಮೇಳ ಹಾಗೂ ಚರ್ಚಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿಯಲ್ಲಿ ಅತೀ ಹೆಚ್ಚು ರಾಸಾಯನಿಕಗಳ ಬಳಕೆಯಿಂದಾಗಿ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ರಾಸಾಯನಿಕವಾಗಿ ಬೆಳೆದ ಕೃಷಿ ಪದಾರ್ಥಗಳ ಸೇವನೆಯಿಂದಾಗಿ ಜನರ ಆರೋಗ್ಯಕ್ಕೂ ತುಂಬಾ ಹಾನಿಕಾರವಾಗಿದ್ದು, ಭೂಮಿಯ ಸಂರಕ್ಷಣೆ, ಜನರ ಆರೋಗ್ಯಕ್ಕಾಗಿ ಸಾವಯವ ಕೃಷಿಯು ಇಂದಿನ ದಿನಮಾನಗಳಲ್ಲಿ ಬಹಳ ಮಹತ್ವವಾಗಿದೆ. ಗಂಗಾವತಿ, ಕಾರಟಗಿ, ಕನಕಗಿರಿ, ಕೊಪ್ಪಳ ತಾಲ್ಲೂಕಿನ ಕೆಲ ಭಾಗ ಸೇರಿ ನಮ್ಮ ಜಿಲ್ಲೆಯಲ್ಲಿ ಸುಮಾರು ೩ ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಸಾವಯವ ಕೃಷಿಗೆ ತುಂಬಾ ಬೇಡಿಕೆಯಿದ್ದು, ಹಾಗಾಗಿ ರೈತರಿಗೆ ಅರಿವು ಮೂಡಿಸಲು ಕೃಷಿ ಇಲಾಖೆಯಿಂದ ಈ ಸಾವಯವ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾವಯವ ಪದಾರ್ಥಗಳಿಗೆ ಹೆಚ್ಚು ಬೇಡಿಕೆಯಿದ್ದು, ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ಒಂದು ಬ್ರ್ಯಾಂಡಿಂಗ್ ಮಾಡಿದರೇ ಒಳ್ಳೆಯ ಬೆಲೆ ಸಿಗಲಿದೆ. ಇದರಿಂದ ಗ್ರಾಹಕರಿಗೂ ಉತ್ತಮ ಆರೋಗ್ಯ ದೊರೆಯುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಸಮಗ್ರ ಸಾವಯಕ ಕೃಷಿ ಪದ್ಧತಿಯನ್ನು ಜಾರಿಗೆ ಮಾಡಲು ಮುಂಬರುವ ಐದು ವರ್ಷದಲ್ಲಿ ಏನು ಮಾಡಬೇಕೆಂಬುವುದಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ತೋಟಗಾರಿಕೆಗೂ ಉತ್ತಮ ಅವಕಾಶವಿದ್ದು, ನಮ್ಮ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಬೆಳೆಯುತ್ತಿರುವ ಹಣ್ಣುಗಳಿಗೆ ತುಂಬಾ ಬೇಡಿಕೆಯಿದೆ. ರೈತರು ತಮ್ಮ ಜಮೀನಿನ ಶೇ.೪೦ ರಷ್ಟು ಭಾಗದಲ್ಲಿ ತೋಟಗಾರಿಕೆ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಜಿಲ್ಲೆಯ ತೋಟಗಾರಿಕೆ ಇಲಾಖೆಯುವ ಹಲವಾರು ಮೇಳಗಳನ್ನು ಹಮ್ಮಿಕೊಂಡು ರೈತರಿಗೆ ಈ ಕುರಿತು ಅರಿವು ಮೂಡಿಸುತ್ತಿದೆ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಅವರು ಮಾತನಾಡಿ, ಜಿಲ್ಲೆಯಲ್ಲಿ ೨ ಲಕ್ಷ ೮೦ ಸಾವಿರ ರೈತರು ಹಾಗೂ ೪ ಲಕ್ಷ ೩೦ ಸಾವಿರ ಹೆಕ್ಟರ್ ಕೃಷಿ ಭೂಮಿಯಿದ್ದು, ಇದರಲ್ಲಿ ೪ ಸಾವಿರ ಹೆಕ್ಟರ್ ಜಮೀನಿನಲ್ಲಿ ೩ ಸಾವಿರ ರೈತರು ಮಾತ್ರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಸಾವಯವ ಕೃಷಿಯನ್ನು ಹೆಚ್ಚಿಸಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಅಳವಂಡಿ ಭಾಗದಲ್ಲಿನ ಒಬ್ಬ ರೈತನು ತನ್ನ ೫ ರಿಂದ ೧೦ ಎಕರೆ ಜಮೀನಿನಲ್ಲಿ ಕಳೆದ ಮೂರು ವರ್ಷದಿಂದ ಸಾವಯವ ಕೃಷಿ ಪದ್ಧತಿಯನ್ನು ಕೈಗೊಂಡು ದಾಳಿಂಬೆ ಬೆಳೆದು ರೂ. ೩೦ ರಿಂದ ೪೦ ಲಕ್ಷದವರೆಗೆ ಲಾಭ ಪಡೆದಿದ್ದಾರೆ. ಭವಿಷ್ಯದಲ್ಲಿ ಸಾವಯವ ಕೃಷಿಗೆ ಅತ್ಯಂತ ಮಹತ್ವದ ಬೇಡಿಕೆಯಿದ್ದು, ರೈತರು ಸಾವಯವ ಕೃಷಿ ಮಾಡಲು ಮುಂದೆ ಬರಬೇಕು. ಸಾವಯವ ಕೃಷಿಯು ಕೇವಲ ಒಂದೇ ಬೆಳೆಗೆ ಮಾತ್ರ ಸಿಮಿತವಾಗದೇ, ವಿವಿಧ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹೈನುಗಾರಿಕೆ, ಪಶುಪಾಲನೆ, ಕೋಳಿ ಸಾಕಾಣಿಕೆಯಂತಹ ಚಟುವಟಿಕೆಗಳಿಗೂ

 

ಸಹಾಯಕವಾಗುತ್ತದೆ ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶೇಖರಗೌಡ ಮಾಲಿ ಪಾಟೀಲ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ರಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿದೆ. ಇದರಿಂದ ಕೃಷಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಸಾವಯವ ಕೃಷಿಗೆ ಸರ್ಕಾರವು ಹೆಚ್ಚಿನ ಉತ್ತೇಜನ ನೀಡುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಸಾವಯವ ಕೃಷಿ ಪ್ರಮಾಣವು ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ಹಮ್ಮಿಕೊಂಡು, ರೈತರಿಗೆ ಅರಿವು ಮೂಡಿಸಬೇಕು. ಇದಕ್ಕೆ ಜಿಲ್ಲಾ ಕೃಷಿಕ ಸಮಾಜವು ಕೃಷಿ ಇಲಾಖೆಯೊಂದಿಗೆ ಕೈಜೋಡಿಸಲಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಟಿ.ಎಸ್. ರುದ್ರೇಶಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾವಯವ ಕೃಷಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒತ್ತು ನೀಡುತ್ತಿವೆ. ಕೃಷಿಯಲ್ಲಿ ಅತಿ ಹೆಚ್ಚು ರಾಸಾಯನಿಕ ಉಪಯೋಗದಿಂದ ನೀರು. ಭೂಮಿ ಮಣ್ಣಿನ ಫಲವತ್ತತೆ ಕಲುಷಿತವಾಗುವುದರ ಜೊತೆಗೆ ಪ್ರಾಣಿಗಳು ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ರೈತರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು.
ಐಎಟಿ ರಾಜ್ಯ ಕಾರ್ಯದರ್ಶಿ ವಿ.ಕೆ. ಕಮತರ ಅವರು ಮಾತನಾಡಿ, ಸಾವಯವ ಕೃಷಿಯ ಕಡೆಗೆ ನಾವು ಗಮನಹರಿಸಬೇಕಿದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಉತ್ಪಾದನೆ ಮಾಡುವ ಪಂಜಾಬ ರಾಜ್ಯದಲ್ಲಿ ಹೆಚ್ಚಿನ ಕ್ಯಾನ್ಸರ್ ರೋಗಿಗಳು ಸಿಗುತ್ತಾರೆ. ಅವರು ಹತ್ತು ಇಪ್ಪತ್ತು ವರ್ಷಗಳ ಹಿಂದೆ ಕೃಷಿಯಲ್ಲಿ ಹೆಚ್ಚು ರಸಾಯನಿಕ ಬಳಸಿದ ಪರೀಣಾಮ ಅದು ಆಗಿರುವುದು. ನಮ್ಮ ಆರೋಗ್ಯ ಚೆನ್ನಾಗಿ ಇರಬೇಕಾದರೆ ನಾವು ಸಾವಯವ ಕೃಷಿಯ ಕಡೆಗೆ ನಡೆಯಬೇಕಿದೆ ಎಂದು ಹೇಳಿದರು.
ಕೃಷಿ ವಿಶ್ವವಿದ್ಯಾಲಯ ರಾಯಚೂರಿನ ಸಾವಯವ ವಿಭಾಗದ ಮುಖ್ಯಸ್ಥರಾದ ಡಾ.ಬಸವಣ್ಣೆಪ್ಪ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕೃಷಿಯಲ್ಲಿ ಮಹಿಳೆಯರ ಪಾತ್ರವು ಬಹಳ ಪ್ರಮುಖವಾಗಿದೆ. ರೈತರಿಗೆ ಕೃಷಿಯಲ್ಲಿ ನಮಗಿಂತ ಅವರಿಗೆ ಹೆಚ್ಚಿನ ಅನುಭವ ಇರುತ್ತದೆ. ಅವರೇ ಪ್ರಥಮ ವಿಜ್ಞಾನಿಗಳು. ಬೆವರು ಸುರಿಸಿ ಕೆಲಸ ಮಾಡುವ ರೈತರಿಗೆ ಯಾವುದೇ ಕಾಯಿಲೆ ಬರುವದಿಲ್ಲ. ಸಾವಯವ ಕೃಷಿ ಮಾಡುವವರಿಗೆ ಸಾವಿಲ್ಲ. ಅವರು ೮೦ ರಿಂದ ೯೦ ವರ್ಷಗಳ ಕಾಲ ಬದುಕುತ್ತಾರೆ. ರಾಗಿ ತಿಂದವನು ನಿರೋಗಿ. ಸಿರಿಧಾನ್ಯಗಳ ಸೇವನೆಯಿಂದ ಹಲವಾರು ಕಾಯಿಲೆಗಳು ದೂರವಾಗುತ್ತವೆ ಎಂದು ಹೇಳಿದರು.
ರೈತರು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು: ಜಿಲ್ಲಾಧಿಕಾರಿ ನಲಿನ್ ಅತುಲ್

*ಸನ್ಮಾನ:* ರಾಜ್ಯ ಮಟ್ಟದಲ್ಲಿ ಉದಯೋನ್ಮುಖ ಕೃಷಿ ಪ್ರಶಸ್ತಿ ಪಡೆದ ಕೊಪ್ಪಳ ಜಿಲ್ಲೆಯ ರೈತರಾದ ಬಸಯ್ಯ ಹಿರೇಮಠ, ವೆಂಕಟೇಶರಾವ್, ಶ್ರೀನಿವಾಸರಾವ್ ದೇಸಾಯಿ, ಅಜಯಕುಮಾರ್ ಪಾಟೀಲ್ ಅವರಿಗೆ ಇದೇ ಸಂದರ್ಭದಲ್ಲಿ ಗಣ್ಯರಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಿವಣ್ಣ ಮೂಲಿಮನಿ, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಬೋರ್ಡ್ ಸದಸ್ಯರಾದ ತಿಮ್ಮಣ್ಣ ಚೌಡಿ, ಕೊಪ್ಪಳ ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಸಿದ್ದೇಶ, ಕೃಷಿಕ ಸಮಾಜದ ಸದಸ್ಯರು ಹಾಗೂ ಪ್ರಗತಿಪರ ರೈತರಾದ ವೀರುಪಾಕ್ಷಪ್ಪ ನವೋದಯ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ನಾರಪ್ಪ, ಸಹಾಯಕ ಕೃಷಿ ನಿರ್ದೇಶಕರಾದ ಶಶಿಕಲಾ ಹಾಗೂ ಶೇತ್ವಾ ಮತ್ತು ವಿವಿಧ ಇಲಾಖೆಗಳ ಮತ್ತು ಕೃಷಿ ಇಲಾಖೆಯ ಇತರೆ ಅಧಿಕಾರಿ, ಸಿಬ್ಬಂದಿಗಳು, ಜಿಲ್ಲೆಯ ರೈತ ಮುಖಂಡರು, ರೈತರು, ಕೃಷಿ ಸಖಿಯರು, ಪಶುಸಖಿಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!