ಪೌರಾಣಿಕ ನಾಟಕಗಳ ನಾಯಕಿ ಬಿ.ಶಿವಕುಮಾರಿ

Get real time updates directly on you device, subscribe now.

ಕೂಡ್ಲಿಗಿಯ ಖ್ಯಾತ ರಂಗಕಲಾವಿದೆ ಬಿ.ಶಿವಕುಮಾರಿಯವರು ನಿಧನರಾಗಿದ್ದಾರೆ. ಅವರನ್ನು ಕುರಿತು ಈ ಮೊದಲು ನಾನು ವರದಿಗಾರನಾಗಿದ್ದಾಗ ಬರೆದಿದ್ದ ಬರಹವನ್ನು ಇಲ್ಲಿ ಅವರ ಗೌರವಾರ್ಥ ಪೋಸ್ಟ್ ಮಾಡುತ್ತಿದ್ದೇನೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವೆ

ಪೌರಾಣಿಕ ನಾಟಕಗಳ ನಾಯಕಿ ಬಿ.ಶಿವಕುಮಾರಿ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕಲಾವಿದರ ತವರೂರು. ಅನೇಕ ಹಿರಿಯ ಕಲಾವಿದೆಯರು ವೃತ್ತಿ ರಂಗಭೂಮಿಯಲ್ಲಿ ಹಲವಾರು ವರ್ಷ ಶ್ರಮಪಟ್ಟು, ತೆರೆಯ ಮರೆಯಲ್ಲಿದ್ದೇ, ಪ್ರಚಾರ, ಪ್ರಸಿದ್ಧಿ ಕಾಣದೇ ಮರೆಯಾಗಿದ್ದಾರೆ. ಪರಿಸರ, ಅವಕಾಶಗಳು ಪೂರಕವಾಗಿದ್ದರೆ, ವ್ಯಕ್ತಿ ಯಾವ ಮಟ್ಟಕ್ಕಾದರೂ ಬೆಳೆದುಬಿಡಬಲ್ಲ. ಆದರೆ, ವೃತ್ತಿ ರಂಗಭೂಮಿಯೇ ನಶಿಸುತ್ತಿರುವ ಇಂದಿನ ದಿನಮಾನಗಳಲ್ಲಿ, ಕಲೆಯ ಬೆನ್ನುಹತ್ತಿ ಅದರಲ್ಲಿ ಸಾಧನೆ ಮಾಡಿದವರು ಬೆರಳೆಣಿಕೆಯಷ್ಟು ಜನ.
ನಾಡಿನಾದ್ಯಂತ ಕಂಪನಿ ನಾಟಕಗಳಲ್ಲಿ ಅಭಿನಯಿಸಿ, ಜನಮೆಚ್ಚುಗೆಗೆ ಪಾತ್ರರಾದ ಕಲಾವಿದರಿರುವ ಕೂಡ್ಲಿಗಿಯಲ್ಲಿ, ಅದೇ ದಾರಿಯಲ್ಲಿಯೇ ನಡೆದು, ಅವಿರತ 25 ವರ್ಷ ರಂಗಭೂಮಿಯಲ್ಲಿಯೇ ದುಡಿದು, ಇತ್ತೀಚೆಗೆ 2002ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕಲಾವಿದೆ ಬಿ.ಶಿವಕುಮಾರಿ.

ಕೃಷಿ ಮನೆತನದ ಬಿ.ಶಿವಕುಮಾರಿ ಬಡತನದಲ್ಲೇ ಬೆಳೆದುಬಂದವರು. 10ನೇ ತರಗತಿಯವರೆಗೆ ಮಾತ್ರ ಶಿಕ್ಷಣ ಪಡೆದ ಇವರಿಗೆ, ಮುಂದೆ ಉನ್ನತ ವ್ಯಾಸಂಗಕ್ಕೆ ಹೋಗಬೇಕೆಂಬ ಇಚ್ಛೆಯಿದ್ದರೂ, ಇವರೇ ಮನೆಯಲ್ಲಿ ಹಿರಿಯರಾಗಿದ್ದುದರಿಂದ, ಕುಟುಂಬದ ಸಂಪೂರ್ಣ ಜವಾಬ್ದಾರಿ ಇವರಿಗೇ ಬಿತ್ತು. ಹೀಗಾಗಿ ಕುಟುಂಬದ ನಿರ್ವಹಣೆಗಾಗಿ ಅನಿವಾರ್ಯವಾಗಿ ರಂಗಭೂಮಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು. ೮೦ರ ದಶಕದಲ್ಲಿ ಇವರು ಪರಿಸ್ಥಿತಿಯ ಒತ್ತಡದಿಂದಾಗಿ ರಂಗಭೂಮಿ ಕ್ಷೇತ್ರಕ್ಕೆ ಕಾಲಿರಿಸಿದರು.

1985ರಲ್ಲಿ ಪ್ರಥಮ ಬಾರಿಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿಯಲ್ಲಿ ನಡೆದ ಪ್ರೇಮಪಂಜರ ಎಂಬ ನಾಟಕಕ್ಕೆ ಬಣ್ಣ ಹಚ್ಚಿದವರು ಮತ್ತೆ ತಿರುಗಿ ನೋಡಲಿಲ್ಲ. ನಾಟಕದಲ್ಲಿ ಶಿವಕುಮಾರಿ ಅವರದು ನಾಯಕಿಯ ಪಾತ್ರ. ಅಪಾರ ಜನಮೆಚ್ಚುಗೆ ಪಡೆದ ಈ ನಾಟಕದ ನಂತರ, ಶಿವಕುಮಾರಿ ಉತ್ತರ ಕರ್ನಾಟಕದ್ಲಲಿ ಪ್ರಸಿದ್ಧಿಯನ್ನು ಪಡೆದರು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಕಲಾಪ್ರೇಮಿಗಳ ಮನಸೂರೆಗೊಂಡರು. ಅದರಲ್ಲೂ ಪೌರಾಣಿಕ ನಾಟಕಗಳ ಪಾತ್ರಗಳಲ್ಲಿ ಜೀವ ತುಂಬುವುದರಲ್ಲಿ ಇವರು ಸಿದ್ಧಹಸ್ತರು. ಅಕ್ಷಯಾಂಬರ, ಚಿತ್ರಾಂಗದ, ವೀರ ಅಭಿಮನ್ಯು, ರಕ್ತರಾತ್ರಿ, ಕುರುಕ್ಷೇತ್ರ, ಅಶ್ವಮೇಧ ಹೀಗೆ ಇವರು ಅಭಿನಯಿಸಿದ ಪೌರಾಣಿಕ ನಾಟಕಗಳ ಪಟ್ಟಿ ಉದ್ದವಾಗುತ್ತ ಹೋಗುವುದು. ರಕ್ತರಾತ್ರಿ ನಾಟಕದ ಉತ್ತರೆಯ ಪಾತ್ರ ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟ ಪಾತ್ರ.
ಇಂದಿಗೂ ಪ್ರತಿ ವರ್ಷವೂ ನೂರಾರು ನಾಟಕಗಳಲ್ಲಿ ಅಭಿನಯಿಸುವ ಶಿವಕುಮಾರಿ ಸಮಾಜಸೇವೆ ಕ್ಷೇತ್ರದಲ್ಲಿ ತೊಡಗಿಸಿಕೊಂಡ್ದದೂ ಉಂಟು. 1986ರಲ್ಲಿ ಬರಗಾಲದ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಹಸ್ತ ಚಾಚಬೇಕೆಂಬ ದಿಸೆಯಲ್ಲಿ, ಹವ್ಯಾಸಿ ಕಲಾವಿದರ ತಂಡದೊಂದಿಗೆ, ಬಳ್ಳಾರಿ ಜಿಲ್ಲೆಯಾದ್ಯಂತ ನಾಟಕ ಪ್ರದರ್ಶನ ಮಾಡಿ, ಬಂದಂತಹ ಹಣವನ್ನೇ ಬರಪರಿಹಾರಕ್ಕೆ ಸಮರ್ಪಿಸಿದರು. ಇಷ್ಟೇ ಅಲ್ಲದೆ, ಬಡ ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಸಾಕ್ಷರತಾ ಆಂದೋಲನದಲ್ಲಿ ಪಾಲ್ಗೊಳ್ಳುವಿಕೆ, ಕುಟುಂಬ ಕಲ್ಯಾಣ, ಸಮಾಜದಲ್ಲಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಉದಾರತೆಯನ್ನು ಮೆರೆದಿದ್ದಾರೆ.

ಇವರಿಗೆ ದೊರೆತ ಪಶಸ್ತಿಗಳೂ ಹತ್ತು, ಹಲವಾರು. 1993ರಲ್ಲಿ ಮರಿಯಮ್ಮನಹಳ್ಳಿಯ ಲಲಿತಕಲಾ ರಂಗದಿಂದ ವಿಭಾಗ ಮಟ್ಟದ ಪ್ರಶಸ್ತಿ, ಬಳ್ಳಾರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಪರಿಶಿಷ್ಟ ಜಾತಿ/ಪಂಗಡ ಕಲಾವಿದರ ಸಮ್ಮೇಳನದ ಪ್ರಶಸ್ತಿ, 1996ರಲ್ಲಿ ದಾವಣಗೆರೆಯಲ್ಲಿ ಏರ್ಪಡಿಸಿದ್ದ, ಅಖಿಲ ಕರ್ನಾಟಕ ವೃತ್ತಿರಂಗಭೂಮಿ ಕಲಾವಿದರ ಸಮ್ಮೇಳನದ ಪ್ರಶಸ್ತಿ, 1998ರಲ್ಲಿ ಮಹಿಳಾ ರಂಗ ತರಬೇತಿ ಪ್ರಶಸ್ತಿ, 1999ರಲ್ಲಿ ದಾವಣಗೆರೆಯಲ್ಲಿ ಏರ್ಪಡಿಸಿದ್ದ, ಕರ್ನಾಟಕ ನಾಟಕ ಅಕಾಡೆಮಿಯ ವೃತ್ತಿ ರಂಗ ನಾಟಕೋತ್ಸವ ಪ್ರಶಸ್ತಿ, ೨೦೦೪ರಲ್ಲಿ ನೆರೆಯ ಆಂಧ್ರಪ್ರದೇಶ ಸರ್ಕಾರದಿಂದ ನಂದಿ ನಾಟಕೋತ್ಸವದ ನಂದಿ ಪ್ರಶಸ್ತಿ, 2005ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸುವರ್ಣ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ, ಹೀಗೆ ಪ್ರಶಸ್ತಿ, ಗೌರವ, ಅಭಿನಂದನೆಗಳ ಸುರಿಮಳೆಯನ್ನೇ ಶಿವಕುಮಾರಿ ಪಡೆದಿದ್ದಾರೆ.

ಶಿವಕುಮಾರಿಯವರ ಸಾಧನೆಯನ್ನು ಮೆಚ್ಚಿ ಕರ್ನಾಟಕ ನಾಟಕ ಅಕಾಡೆಮಿಯು 2002ರಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದುವರೆಗೂ ನಾಡಿನಾದ್ಯಂತ ಸುಮಾರು 3000ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, ರಂಗಭೂಮಿಯಲ್ಲಿ ತಮ್ಮದೇ ಛಾಪು ಒತ್ತಿರುವ ಶಿವಕುಮಾರಿಯವರು ಧಾರವಾಡ ಆಕಾಶವಾಣಿಯಿಂದ ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೇ, ಕಿರುತೆರೆಯ ಧಾರಾವಾಹಿಯಲ್ಲಿಯೂ ಇತ್ತೀಚೆಗೆ ಅವಕಾಶಗಳು ದೊರೆಯುತ್ತಿವೆ. ಉಳಿದ ಭಾಗಗಳಲ್ಲಿರುವಂತೆ, ಕೂಡ್ಲಿಗಿಯಲ್ಲಿಯೂ ಹವ್ಯಾಸಿ ಕಲಾತಂಡಗಳಾಗಲಿ, ವೃತ್ತಿ ರಂಗಭೂಮಿಯ ಕಂಪನಿಗಳಾಗಲಿ ಇದ್ದಲ್ಲಿ, ಶಿವಕುಮಾರಿಯವರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬಹುದಾಗಿತ್ತು. ಆದರೆ ಇರುವ ಸೀಮಿತ ಅವಕಾಶಗಳಲ್ಲಿಯೇ ಈ ಎತ್ತರಕ್ಕೆ ಏರಿರುವುದು, ಕಲಾವಿದರಿಗಷ್ಟೇ ಅಲ್ಲದೆ, ಕೂಡ್ಲಿಗಿಯ ಕಲಾಪ್ರೇಮಿಗಳು, ಜನತೆ ಹೆಮ್ಮೆಪಡಬಹುದಾದ ಸಂಗತಿಯಾಗಿದೆ.

ಸಿದ್ದರಾಮ ಕೂಡ್ಲಿಗಿ

Get real time updates directly on you device, subscribe now.

Comments are closed.

error: Content is protected !!
%d bloggers like this: