ಕಾಂತರಾಜು ವರದಿಯಲ್ಲಿ ಲೋಪಗಳಿದ್ದರೆ ಸರಿಪಡಿಸೋಣ: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು: ಫೆ.1
ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಎಚ್.ಕಾಂತರಾಜು ಅವರ ವರದಿಯಲ್ಲಿ ಯಾವುದೇ ಲೋಪಗಳಿದ್ದರೆ ಸರಿಪಡಿಸೋಣ, ವರದಿ ನೋಡುವ ಮೊದಲ್ಲೇ ಅದಕ್ಕೆ ವಿರೋಧಪಡಿಸುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಮುಕ್ತಾನಂದ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಶ್ರೀ ಮಡಿವಾಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಸರ್ಕಾರಗಳು ಅಧಿಕಾರಕ್ಕೆ ಬಂದರೂ ವರದಿ ಸ್ವೀಕಾರ ಮಾಡಲಿಲ್ಲ. ನಾವು ವರದಿ ಸ್ವೀಕಾರ ಮಾಡುವುದಿಲ್ಲ ಎಂದು ಕೆಲವರು ಟೀಕೆ ಮಾಡಿದರು. ಆದರೆ ವರದಿಯನ್ನು ಸ್ವೀಕಾರ ಮಾಡಲು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕಾಯಿತು. ಖಂಡಿತವಾಗಿಯೂ ಸಚಿವ ಸಂಪುಟ ಸಭೆಯಗೆ ವರದಿಯನ್ನು ತರುತ್ತೇವೆ. ತುಳಿತಕ್ಕೊಳಗಾದ ಸಮುದಾಯಗಳ ಬಗ್ಗೆ ಯಾರಾದರೂ ಚಿಂತನೆ ಮಾಡುತ್ತಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತ್ರ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಗ್ಗುವ ಪ್ರಶ್ನೆಯೇ ಇಲ್ಲ ಎಂದರು.
ಇನ್ನು ಮಡಿವಾಳ ಸಮಾಜ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಅಂಬೇಡ್ಕರ್ ಅವರು ಹೋರಾಟ, ಶಿಕ್ಷಣ ಮತ್ತು ಸಂಘಟನೆ ಬೇಕು ಎಂದಿದ್ದಾರೆ. ಅದರಂತೆ ಸಣ್ಣ ಸಮುದಾಯಗಳು ಹೋರಾಟ, ಶಿಕ್ಷಣ ಹಾಗೂ ಸಂಘಟನೆಗೆ ಆದ್ಯತೆ ನೀಡಬೇಕು. ಸಮಾಜಗಳಲ್ಲಿ ಒಗ್ಗಟ್ಟನ್ನು ಪ್ರದರ್ಶನ ಮಾಡಿದಾಗ ಸಮಾಜ ಬಲಿಷ್ಠವಾಗಲಿದೆ. ಜೊತೆಗೆ ಸಂಘಟನೆಯಿಂದ ಸಮುದಾಯಕ್ಕೆ ಬೇಕಾದ ಎಲ್ಲಾ ಸವಲತ್ತುಗಳು ಸಿಗಲಿದೆ ಎಂದು ತಿಳಿಸಿದರು.
ಕಳೆದ ಬಾರಿಯ ಬಜೆಟ್ ನಲ್ಲಿ ಮಡಿವಾಳ
ಸಮುದಾಯದ ಭವನ ನಿರ್ಮಾಣಕ್ಕೆ 50 ಲಕ್ಷ ಅನುದಾನ ನೀಡಿದ್ದೇವೆ. ಸಮುದಾಯಕ್ಕೆ ಪ್ರತ್ಯೇಕ ಹಾಸ್ಟೆಲ್ ಗೆ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಮುಂದಿನ ಬಜೆಟ್ ನಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಇನ್ನು ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ, ‘ಮಡಿ’ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಮಹಾ ಘನತೆಗೆ ಸಾಕ್ಷಿ ಎಂದು ಶ್ಲಾಘಿಸಿದರು.
ಮಡಿವಾಳ ಮಾಚಿದೇವರು, ಕಲ್ಯಾಣವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು, ತಮ್ಮ ಅನುಭವಕ್ಕೆ ಬಂದ ವಿಷಯಗಳನ್ನೆಲ್ಲ ವಚನಗಳಾಗಿ ರಚಿಸಿ ನಮಗೆ ನೀಡಿದ್ದಾರೆ. ಇಂಥ ಕಾಯಕಯೋಗಿಯ ಜಯಂತಿಯನ್ನು ಆಚರಿಸುವ ಮೂಲಕ ಆ ಮಹಾನ್ ಚೇತನದ ಸ್ಮರಣೆ ಮಾಡಿಕೊಳ್ಳುವ ಸೌಭಾಗ್ಯ ನಮಗೊದಗಿ ಬಂದಿರುವುದು ನಮ್ಮ ಅದೃಷ್ಟ ಎಂದು ಹೇಳಿದರು.
ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ, ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ.ಹೆಚ್.ರವಿಕುಮಾರ್, ಮಡಿವಾಳ ಸಂಘದ ರಾಜ್ಯಾಧ್ಯಕ್ಷರಾದ ಸಿ.ನಂಜಪ್ಪ, ಶಾಶ್ವತ ಆಯೋಗದ ಮಾಜಿ ಸದಸ್ಯ ಜಿ.ಡಿ.ಗೋಪಾಲ್, ಇಲಾಖೆ ಜಂಟಿ ನಿರ್ದೇಶಕ ಬಲವಂತರಾಯ ಪಾಟೀಲ್
ಹಾಗೂ ಇನ್ನಿತರರು ಉಪಸ್ಥಿತರಿದ್ದರು.