ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ವಾರ್ಷಿಕೋತ್ಸವ ಗಮನ ಸೇಳೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲರವ

0

Get real time updates directly on you device, subscribe now.


ಗಂಗಾವತಿ.
ನಗರದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಬಾಲವಾಟಿಕಾ ತರಗತಿಯಿಂದ ಹಿಡಿದು ಹತ್ತನೇ ತರಗತಿವರೆಗೆನ ವಿದ್ಯಾರ್ಥಿಗಳು ನಡೆಸಿದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಪಾಲಕರನ್ನು ಮಂತ್ರ ಮುಗ್ಧರನ್ನಾಗಿಸಿದ್ದವು.
ಸೋಮವಾರ ಸಂಜೆ ನಗರದ ಆನೆಗೊಂದಿ ರಸ್ತೆಯಲ್ಲಿರುವ ಕೆವಿ ಶಾಲಾ ಆವರಣದಲ್ಲಿ ವಾರ್ಷಿಕೋತ್ಸವವನ್ನು ನಗರದ ಸರಕಾರಿ ಐಟಿಐ ಕಾಲೇಜ್ ಪ್ರಾಚಾರ್ಯ ಡಿ.ಕೋಟ್ರೇಶ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಾಲೆಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ನಲೀನ್ ಅತುಲ್ ವರ್ಚುವಲ್ ಮೂಲಕ ಉದ್ಘಾಟನೆಯ ಸಂದೇಶ ನೀಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಅವರು ೨೧ನೇ ಶತಮಾನದ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು. ಕೇಂದ್ರೀಯ ವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮವಾಗಿ ಅಭ್ಯಾಸ ಮಾಡಿ ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಮತ್ತು ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಪ್ರತಿಯೊಂದು ಸ್ಪರ್ಧಾತ್ಮಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ಪಿಎಂ ಶ್ರೀ ಕೇಂದ್ರೀ ವಿದ್ಯಾಲಯದ ಪ್ರಾಚಾರ್ಯ ಉಮೇಶ ಪ್ರಜಾಪತಿ ಶಾಲೆಯ ವಾರ್ಷಿಕೋತ್ಸವ ವರದಿ ನೀಡಿ, ಗಂಗಾವತಿಯ ನಮ್ಮ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಶೈಕ್ಷಣಿಕ ಪ್ರಗತಿಗೆ ಅವಿರತವಾಗಿ ಶ್ರಮಿಸಲಾಗುತ್ತಿದೆ. ಬಾಲವಾಡಿಕಾ ತರಗತಿಯಿಂದ ಹಿಡಿದು ಹತ್ತನೇ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗುವಂತೆ ಪ್ರೇರೆಪಿಸಲಾಗುತ್ತಿದೆ. ಕಳೆದ ವರ್ಷ ಹತ್ತನೇ ತರಗತಿಯ ಪ್ರಥಮ ಬ್ಯಾಚ್‌ನ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.೧೦೦ಕ್ಕೆ ಫಲಿತಾಂಶ ಪಡೆದುಕೊಂಡು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಸಮೂಹ ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ, ಗಣಿತ ಮತ್ತಿತರ ವಿಷಯಗಳ ಪ್ರತಿಯಲ್ಲು ಉತ್ತಮ ಸಾಧನೆ ಮೆರೆದಿದ್ದಾರೆ. ಪ್ರಥಮ ವಾರ್ಷಿಕೋತ್ಸವ ಆಚರಿಸುತ್ತಿರುವ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ಹತ್ತಾರು ರೀತಿಯ ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದ್ದಾರೆ. ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪಾಲಕರು ನಿಮ್ಮ ಮಕ್ಕಳ ಏಳ್ಗೆಗೆ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ದೈಹಿಕ ಶಿಕ್ಷಣಾಧಿಕಾರಿ ಉಮಾದೇವಿ, ಯುನಿಯನ್ ಬ್ಯಾಂಕ್ ವ್ಯವಸ್ಥಾಪಕ ಮನೋಜಕುಮಾರ, ಶಾಲಾ ಪಾಲಕರ ವಿಎಂಸಿ ಸದಸ್ಯರಾದ ಡಾ|| ಮಹಾಂತೇಶ, ಎ.ಕೆ.ಮಹೇಶಕುಮಾರ, ಲಕ್ಷ್ಮೀಕಾಂತ ಹೇರೂರು ಮತ್ತಿತರು ಉಪಸ್ಥಿತರಿದ್ದು, ವರ್ಷಪೂರ್ತಿ ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆ ಮಾಡಿದರು. ಸಿಸಿಎ ಸಂಯೋಜಕಿ ಶಿಕ್ಷಕಿ ಕುಮಾರಿ ಮಧುಬಾಲಾ ನಿರ್ವಹಿಸಿ ವಂದಿಸಿದರು. ಸಂಜೆ ೫ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೂ ಎಲ್ಲಾ ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿಯ ನೃತ್ಯ, ಸೋಸಿಯಲ್ ಮೀಡಾಯಗಳಿಂದ ಆಗುವ ದುಷ್ಪರಿಣಾಮಗಳು ಸೇರಿದಂತೆ ವಿವಿಧ ಸಮೂಹ ನೃತ್ಯ, ಗಾಯನ, ಭಾಷಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ಪ್ರದರ್ಶಿಸಿ ಮೆಚ್ಚುಗೆ ಪಡೆದರು.

Get real time updates directly on you device, subscribe now.

Leave A Reply

Your email address will not be published.

error: Content is protected !!