ವಸತಿ ಶಾಲೆಗಳ ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಿರಲಿ – ಸಚಿವ ಶಿವರಾಜ ತಂಗಡಗಿ

Get real time updates directly on you device, subscribe now.

ಕೊಪ್ಪಳ  : ಕೊಪ್ಪಳ ಜಿಲ್ಲೆಯ ವಸತಿ ಶಾಲೆಗಳ ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಶನಿವಾರ ಜಿಲ್ಲಾ ಪಂಚಾಯತ್ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ಮಟ್ಟದ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯ ವಸತಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ, ಕುಡಿಯುವ ನೀರು, ಬೆಡ್ ವ್ಯವಸ್ಥೆ, ಬಿಸಿ ನೀರಿನ ವ್ಯವಸ್ಥೆ ಹಾಗೂ ಇತರೆ ಅಗತ್ಯ ಮೂಲಭೂತ ಸೌಕರ್ಯಗಳು ಸರಿಯಾಗಿ ಒದಗಿಸಿ. ಈ ದಿಶೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು ತಮ್ಮ-ತಮ್ಮ ವ್ಯಾಪ್ತಿಗೆ ಬರುವ ಜಿಲ್ಲೆಯ ಎಲ್ಲಾ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಪರಿಶೀಲಿಸುವುದರ ಜೊತೆಗೆ ಖುದ್ದಾಗಿ ಊಟ ಸವಿದು ಆಹಾರದ ಗುಣಮಟ್ಟವನ್ನು ಸಹ ಪರಿಶೀಲಿಸಬೇಕು. ವಸತಿ ಶಾಲೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಂಡುಬAದರೆ ತಕ್ಷಣ ಸಂಬAಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸೂಚನೆ ನೀಡಿದರು.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಹತ್ತು ಹಲವಾರು ಕಾರ್ಯಕ್ರಮಗಳು, ಯೋಜನೆಗಳು ಜಾರಿಯಲ್ಲಿವೆ. ಆದರೆ, ಜಿಲ್ಲೆಯಲ್ಲಿ ಕೆಲ ಮಕ್ಕಳ ಹಾಜರಾತಿ ಕಡಿಮೆ ಇದೆ. ಈ ಬಗ್ಗೆ ಆಯಾ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಶಾಲೆಗೆ ಬಾರದೇ ಇರುವ ಮಕ್ಕಳ ಮನೆಗೆ ಭೇಟಿ ನೀಡುವಂತಾಗಬೇಕು ಹಾಗೂ ಮಕ್ಕಳ ಮತ್ತು ಅವರ ಪಾಲಕರ ಮನವಲಿಸಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಪ್ರಯತ್ನ ಮಾಡಬೇಕು. ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಮಕ್ಕಳಿಗೆ ಹೆಚ್ಚುವರಿ ತರಬೇತಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ವಿನೂತನ ಕಲಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಬೇರೆ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ರೀತಿ ಕೊಪ್ಪಳ ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ತೋಟಗಾರಿಕೆ ತರಬೇತಿ ಕೇಂದ್ರ ಸ್ಥಾಪನೆಯಾಗಬೇಕು. ತೋಟಗಾರಿಕೆ ಪಾರ್ಕ್ಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು. ಕುಷ್ಟಗಿ, ಯಲಬುರ್ಗಾ, ಕನಕಗಿರಿ ಹಾಗೂ ಇತರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ತೋಟಗಾರಿಕೆ ಬೆಳೆಗಳಿಗೆ ಸರ್ಕಾರದ ಸಹಾಯಧನಗಳನ್ನು ನೀಡಲು ಕ್ರಮ ವಹಿಸಿ ಎಂದರು.
ಜಿಲ್ಲೆಯಲ್ಲಿ ಡೆಗ್ಯೂ ಪರೀಕ್ಷೆಗಾಗಿ ನಿಗದಿತ ದರಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪಡೆಯುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆ ಉಂಟಾಗುತ್ತಿದೆ. ಡೆಂಗ್ಯೂ ಪತ್ತೆ ಮಾಡುವ ಖಾಸಗಿ ಲ್ಯಾಬ್‌ಗಳಿಗೆ ಸರ್ಕಾರವು ನಿಗದಿಪಡಿಸಿರುವ ದರ ಮತ್ತು ಮಾರ್ಗಸೂಚಿಗಳನ್ನು ನೀಡಿ, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.  ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತ ಪಡೆಯುವ ಲ್ಯಾಬ್‌ಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಜಿಲ್ಲೆಯ ಕುಕನೂರು, ಕಾರಟಗಿ ಮತ್ತು ಕನಕಗಿರಿ ತಾಲ್ಲೂಕುಗಳಲ್ಲಿ ಮಂಜೂರಾಗಿರುವ 100 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಉತ್ತಮ ರೀತಿಯಲ್ಲಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆಯು ರಾಜ್ಯದಲ್ಲಿಯೇ ಐದನೇ ಸ್ಥಾನದಲ್ಲಿದೆ. ಯಾವುದೇ ಅರ್ಹ ಫಲಾನುಭವಿಗಳು ಯೋಜನೆಗಳಿಂದ ಹೊರಗುಳಿಯದಂತೆ ನೋಂಡಿಕೊಳ್ಳಬೇಕು. ಸರ್ಕಾರಿ ಅಧಿಕಾರಿಗಳು ಬಿ.ಪಿ.ಎಲ್ ಕಾರ್ಡ್ಗಳನ್ನು ಹೊಂದಿದ್ದರೆ, ಅವುಗಳನ್ನು ಕೂಡಲೇ ಹಿಂದಿರುಗಿಸಬೇಕು. ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 5438 ಫಲಾನುಭವಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಜಿಲ್ಲೆಯಲ್ಲಿ 94 ಹೊಸ ಬಸ್‌ಗಳನ್ನು ನೀಡಲಾಗಿದೆ. 528 ಟ್ರಿಪ್‌ಗಳು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ಉಚಿತ ಬಸ್ ಪ್ರಯಾಣದಿಂದ ಜನರ ಓಡಾಟ ಹೆಚ್ಚಾಗಿದ್ದು, ಶಾಲಾ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸಾರಿಗೆ ಅಧಿಕಾರಿಗಳಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದರೆ, ಮಾಹಿತಿ ನೀಡಿ. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು. ತಮಗೆ ನೀಡಿದ ಕಾಲಮಿತಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಬೇಕು. ಅಧಿಕಾರಿಗಳು ಕೆಡಿಪಿ ಸಭೆಗೆ ಗೈರಾಗದೇ ಸ್ಪಷ್ಟ ಮಾಹಿತಿಯೊಂದಿಗೆ ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕೆಂದು ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ್ ಅವರು ಮಾತನಾಡಿ, ಜೆಜೆಎಂ ಯೋಜನೆಯಡಿ ಎಲ್ಲಾ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಕುಷ್ಟಗಿಯಲ್ಲಿ 10 ಬಸ್ಸುಗಳಿಗೆ ಟೈಯರ್ ಹಾಳಾಗಿವೆ ಎಂದು ಹಾಗೇಯೆ ನಿಲ್ಲಿಸಿದ್ದಾರೆ. ಅದರಿಂದ ಜನರ ಪ್ರಮಾಣಕ್ಕೆ ತೊಂದರೆಯಾಗುತ್ತಿದೆ. ಈ ಬಸ್ಸುಗಳಿಗೆ ಕೂಡಲೇ ಹೊಸ ಟೈಯರ್‌ಗಳನ್ನು ಅಳವಡಿಸಿ ಎಂದು ಸಾರಿಗೆ ಅಧಿಕಾರಿಗೆ ಸೂಚನೆ ನೀಡಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಜಿಲ್ಲೆಯ ವಿವಿಧ ಪಶು ಆಸ್ಪತ್ರೆಗಳಲ್ಲಿ ಪಶುವೈದ್ಯಾಧಿಕಾರಿಗಳ ಕೊರತೆಯಿದ್ದು, ಇದಕ್ಕಾಗಿ 6 ಜನರನ್ನು ಸರ್ಕಾರದಿಂದ ಇಲ್ಲಿಗೆ ವರ್ಗಾವಣೆ ಮಾಡಿಲಾಗಿತ್ತು. ಆದರೆ, ಮೂರು ವೈದ್ಯರು ಮಾತ್ರ ಇಲ್ಲಿಗೆ ಹಾಜರಾಗಿದ್ದಾರೆ. ಪಶು ವೈದ್ಯಾಧಿಕಾರಿಗಳಿಗೆ ವಸತಿ ಗೃಹದ ವ್ಯವಸ್ಥೆ ಕಲ್ಪಿಸಿ, ಈ ಭಾಗದಲ್ಲಿ ಕಾರ್ಯನಿರ್ವಹಿಸಲು ಅವರಿಗೆ ಮನವಲಿಸಲು ಪಶು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗಂಗಾಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣ ಫಲಾನುಭವಿಗಳಿಗೆ ಜೆಸ್ಕಾಂ ಕಛೇರಿಗೆ ಅಲೆದಾಡುತ್ತಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಕೂಡಲೇ ಈ ಕುರಿತು ಕ್ರಮ ವಹಿಸಬೇಕು. ಫವನ ವಿದ್ಯುತ್ ಕಂಬಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಭಾರಿ ವಾಹನಗಳ ಮೂಲಕ ಅವುಗಳನ್ನು ಸಾಗಿಸುತ್ತಿರುವುದರಿಂದ ಹಳ್ಳಿಗಳ ರಸ್ತೆಗಳು ಹಾಳಾಗುತ್ತಿವೆ. ತಕ್ಷಣ ಅದನ್ನು ನಿಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಜಿ.ಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಹಾಗೂ ಆಹಾರ ಇಲಾಖೆ ಉಪನಿರ್ದೇಶಕಿ ರೇಷ್ಮಾ ಹಾನಗಲ್, ಕೊಪ್ಪಳ ಜಿಲ್ಲಾ ಮಟ್ಟದ ಕೆಡಿಪಿ ಸಮಿತಿಯ ಸದಸ್ಯರು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!