ಕಲೆ ಆಸ್ವಾದಿಸುವ ಮನಸ್ಸುಗಳು ಹೆಚ್ಚಾಗಲಿ: ಕೆವಿ ಪ್ರಭಾಕರ್ ಕರೆ
ಪ್ರೇಕ್ಷ ಕರ ರಂಜಿಸಿದ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ
ಬೆಂಗಳೂರು:
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮತ್ತು ಪ್ರೆಸ್ ಕ್ಲಬ್‌ನ ಸಂಯುಕ್ತಾಶ್ರಯದಲ್ಲಿ ಬಹುರೂಪಿ ಫೌಂಡೇಶನ್ ಮತ್ತು ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಆಯೋಜಿಸಿದ್ದ ಯಕ್ಷಗಾನ ತಾಳ ಮದ್ದಳೆ ಸಾಂಸ್ಕೃತಿಕ ಕಾರ್ಯಕ್ರಮ ಜನ ಮನ ಸೆಳೆಯಿತು.
ಸಾಂಸ್ಕೃತಿಕ ಸಂಜೆಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಕೆಯುಡಬ್ಲೂಜೆ ಮತ್ತು ಪ್ರೆಸ್ ಕ್ಲಬ್ ಜೊತೆಯಾಗಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ ಎಂದರು.
ಕಲೆಯನ್ನು ಆಸ್ವಾದಿಸುವ ಮನಸ್ಸುಗಳು ಹೆಚ್ಚಾದಾಗ ಮಾತ್ರ ಕಲೆಗೆ ಹೆಚ್ಚಿನ ಪ್ರೋತ್ಸಾಹವೂ ದೊರೆಯುತ್ತದೆ. ನಾವೆಲ್ಲರೂ ಬೆನ್ನು ತಟ್ಟಿ ಪ್ರೋತ್ಸಾಹ ಮಾಡುವ ಕೆಲಸವನ್ನು ಮಾಡೋಣ. ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಸದಾ ಒತ್ತಡದಲ್ಲಿ ಕೆಲಸ ಮಾಡುವ ಕಾರಣ ಒತ್ತಡ ನಿವಾರಣೆಗಾಗಿ ಇಂಥಹ ದೇಶೀಯ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಅವರು ಅಧ್ಯಕ್ಷತೆ ವಹಿಸಿದ್ದರು. ಬಹುರೂಪಿ ಸಂಸ್ಥೆಯ ಜಿ.ಎನ್.ಮೋಹನ್, ವಸತಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಲಕ್ಷ್ಮಿನಾರಾಯಣ, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬೆಳ್ಳಿತಟ್ಟೆ, ಮುಮ್ತಾಜ್ ಅಲೀಂ, ಕೆಯುಡಬ್ಲೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಖಜಾಂಚಿ ವಾಸುದೇವ ಹೊಳ್ಳ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಜೀ ಕನ್ನಡ ಡ್ರಾಮ ಜೂನಿಯರ್ಸ್ 5ರ ಪ್ರಶಸ್ತಿ ವಿಜೇತಳಾದ ರಿಷಿಕಾ ಕುಂದೇಶ್ವರ ಮತ್ತು ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಬಳಿಕ ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸುಮೋ ಹಾಗೂ ಅವಿನಾಶ್ ಶೆಟ್ಟಿ ತಂಡದಿಂದ ಪಾರ್ತಿ ಸುಬ್ಬರ ಅಂಗದ ಸಂಧಾನ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.
Comments are closed.