ಹೊಸ ತಾಲೂಕುಗಳಿಗೆ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಬದ್ಧ: ಸಚಿವ ಕೃಷ್ಣ ಬೈರೇಗೌಡ

Get real time updates directly on you device, subscribe now.

ಕಲಬುರಗಿ, ಜುಲೈ 31;  ರಾಜ್ಯದಲ್ಲಿ ಹೊಸದಾಗಿ ರಚಿಸಲಾಗಿರುವ 63 ತಾಲೂಕುಗಳಲ್ಲಿ ತಾಲೂಕು ಮಟ್ಟದ ಕಚೇರಿ ಪೈಕಿ 20 ತಾಲೂಕುಗಳಲ್ಲಿ ಮೂಲಸೌಕರ್ಯ ಕಲ್ಪಿಸಿದ್ದು, ಉಳಿದ ತಾಲೂಕುಗಳಲ್ಲಿ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ಕಲಬುರಗಿಯ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನೂತನ ತಾಲೂಕುಗಳಲ್ಲಿ ಆದ್ಯತೆ ಮೇಲೆ ಮೂಲಸೌಕರ್ಯ ನೀಡಲಾಗುವುದು ಎಂದರು.

ಇಂದಿನ ಪ್ರಗತಿ ಪರಿಶೀಲನೆಯಲ್ಲಿ ಇತ್ತೀಚಿನ ನೆರೆ ಹಾವಳಿ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇನೆ. ಹೊಸ ಸರ್ಕಾರದ ಆಶಯಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಅಧಿಕಾರಿಗಳು ಸಹ ಇರುವ ವ್ಯವಸ್ಥೆಯಲ್ಲಿ ಮತ್ತಷ್ಟು ಸರಳೀಕರಣಕ್ಕೆ ಸಲಹೆ ನೀಡಿದ್ದಾರೆ ಎಂದರು.

ನೆರೆ ಹಾವಳಿ ಪರಿಹಾರಕ್ಕೆಂದೆ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಗೆ 141 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನು ಧೀರ್ಘಾವಧಿ ಯೋಜನೆಗಳ ಸಾಕಾರಕ್ಕೆ 39 ಕೋಟಿ ರೂ. ಹಾಗೂ ಇನ್ನಿತರ ಕೆಲಸಗಳಿಗೆ 13 ಕೋಟಿ ರೂ. ಅನುದಾನ ಒದಗಿಸಲಾಗಿದೆ. ನೆರೆ ಹಾವಳಿ ಪರಿಹಾರ ಮತ್ತು ಮಳೆ ಹಾನಿಯಿಂದ ತ್ವರಿತ ರೀತಿಯಲ್ಲಿ ಕೆಲಸ ನಿರ್ವಹಿಸಲು ಯಾವುದೇ ಅನುದಾನ ಕೊರತೆಯಿಲ್ಲ. ಅವಶ್ಯಕತೆ ಇದ್ದಲ್ಲಿ ಇನ್ನೂ ಅನುದಾನ ನಿಡಲಾಗುವುದು ಎಂದರು.

ಕಲಬುರಗಿ ವಿಭಾಗದಲ್ಲಿ ಪಹಣಿ ತಿದ್ದುಪಡಿ, ವರ್ಗಾವಣೆ, ಕಂದಾಯ ನ್ಯಾಯಲಯಗಳ ಪ್ರಕರಣಗಳು ಸೇರಿದಂತೆ ಒಟ್ಟು 1.50 ಲಕ್ಷ ಕೇಸ್ ಬಾಕಿ ಇವೆ. ಇದರಲ್ಲಿ ಶೇ.75ರಷ್ಟು ಕ್ಲಿಷ್ಟಕರ ಅಲ್ಲದ ಪ್ರಕರಣಗಳಿದ್ದು, ಇವುಗಳನ್ನು ಮುಂದಿನ 3 ತಿಂಗಳಲ್ಲಿ ಅಭಿಯಾನದ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.

ಹೊಸದಾಗಿ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಾಪನೆಗೆ ಮಾಹಿತಿ ಸಂಗ್ರಹ:

ರಾಜ್ಯದಲ್ಲಿ ಹೊಸದಾಗಿ ಸಬ್ ರಿಜಿಸ್ಟಾರ್ ಕಚೇರಿ ಸ್ಥಾಪನೆ ಸಂಬಂಧ ಪ್ರಸ್ತುತ ಇರುವ ಎಸ್.ಆರ್.ಓ. ಕಚೇರಿಯಲ್ಲಿ ದೈನಂದಿನ ವ್ಯವಹಾರಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. 2 ತಿಂಗಳಿನಲ್ಲಿ ಮಾಹಿತಿ ಸಿಗಲಿದ್ದು, ತದನಂತರ ಹೆಚ್ಚಿನ ಕಾರ್ಯದೊತ್ತಡ ಇರುವ ತಾಲೂಕಿನಲ್ಲಿ ಹೊಸದಾಗಿ ಎಸ್.ಆರ್.ಓ. ಕಚೇರಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ನೋಂದಣಿ ಸೋರಿಕೆ ತಡೆಗೆ ಕ್ರಮ:

ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಆಸ್ತಿಗಳ ಮಾರಾಟ, ಒಪ್ಪಂದ ಪ್ರಕರಣದಲ್ಲಿ ನಿಗದಿತ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ದಾಖಲಿಸಿ ಸರ್ಕಾರಕ್ಕೆ ಬರಬೇಕಾದ ಕಂದಾಯ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪರಿಶೀಲನೆಗೆ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ತಂಡ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಿ ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಸರ್ಕಾರಕ್ಕೆ ಆಗುತ್ತಿರುವ ನಷ್ಠ ತಪ್ಪಿಸಲಾಗುವುದು ಎಂದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಏಜೆಂಟ್ ಹಾವಳಿ ತಡೆಗೆ ಸರ್ಕಾರ ಮುಂದಾಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಮೂರನೇ ವ್ಯಕ್ತಿ ಹಾವಳಿ ತಪ್ಪಿಸಲೆಂದೆ ಕಾವೇರಿ 2.0 ತಂತ್ರಾಂಶ ಜಾರಿಗೆ ತರಲಾಗಿದೆ. ಸಾರ್ವಜನಿಕರು ನೋಂದಣಿ ಮುನ್ನ ತಮ್ಮ ದಾಖಲೆಗಳನ್ನು ಆನ್‍ಲೈನ್ ಮೂಲಕ ಸಬ್ ರಜಿಸ್ಟಾರ್ ಕಚೇರಿಗೆ ಸಲ್ಲಿಸಿದಾಗ ಸದರಿ ದಾಖಲೆಗಳು ಸರಿಯಾಗಿವೆ ಅಥವಾ ಇಲ್ಲ ಎಂಬುದನ್ನು ಆನ್‍ಲೈನ್ ಮೂಲಕವೇ 3 ದಿನದಲ್ಲಿ ನೊಂದಣಿ ಕಚೇರಿಯಿಂದ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತದೆ. ನಂತರ ಅರ್ಜಿದಾರ ನಿಗದಿತ ಶುಲ್ಕ ಪಾವತಿಸಿ ನೋಂದಣಿಗೆ ದಿನಾಂಕ ಮತ್ತು ಸಮಯ ಅರ್ಜಿದಾರನೇ ನಿಗದಿಗೊಳಿಸಲು ಅವಕಾಶ ನೀಡಲಾಗಿದೆ ಎಂದರು.

3 ಕಾಯ್ದೆಗೆ ತಿದ್ದುಪಡಿ:

ಕಂದಾಯ ವ್ಯವಸ್ಥೆಯಲ್ಲಿ ಮತ್ತಷ್ಟು ಸರಳೀಕರಣಗೊಳಿಸಲು ಕಳೆದ ಅಧಿವೇಶನದಲ್ಲಿ ಮೂರು ಮಸೂದೆಗೆ ತಿದ್ದುಪಡಿ ತರಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಸುಳ್ಳು ಮಾಹಿತಿ ನೀಡಿ, ವಂಚಿಸಿ ಅಥವಾ ಕೊಟ್ಟಿ ದಾಖಲೆ ಸೃಷ್ಟಿಸಿ ದುರಪಯೋಗದ ಮೂಲಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿರುವುದು ಕಂಡುಬಂದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಅಂತಹ ಪ್ರಕರಣಗಳು ಕೈಗೆತ್ತಿಕೊಂಡು 3 ತಿಂಗಳ ಒಳಗಾಗಿ ಸದರಿ ದಸ್ತಾವೇಜನ್ನು ರದ್ದುಪಡಿಸುವ ಅಧಿಕಾರ, ಮಹಾ ಯೋಜನೆ (ಮಾಸ್ಟರ್ ಪ್ಲ್ಯಾನ್) ಅನುಮೋದಿತ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಬಳಿ ಹೋಗದೆ ನೇರವಾಗಿ ನಗರ ಯೋಜನಾ ಕಚೇರಿ/ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲಿಸಿ ಪರಿವರ್ತನೆಗೆ ನಿಗದಿತ ಶುಲ್ಕ ಪಾವತಿ ಮಾಡಿ ಎನ್.ಎ. ಆಗಿ ಬದಲಾಯಿಸುವ ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978ಕ್ಕೆ ತಿದ್ದುಪಡಿ ತಂದು ಎಸ್.ಸಿ.-ಎಸ್.ಟಿ ಜನಾಂಗದವರ ಹಕ್ಕು ರಕ್ಷಿಸಲಾಗಿದೆ. ಇದು ಜನಪರ ಸರ್ಕಾರದ ಜನಪರ ನಿರ್ಧಾರಗಳಾಗಿವೆ. ಇದು ಜನಪರ ಆಡಳಿತಕ್ಕೆ ಸರ್ಕಾರಕ್ಕಿರುವ ಬದ್ಧತೆ ಪ್ರದರ್ಶಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತ ಜೆ.ಮಂಜುನಾಥ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಇದ್ದರು.

Get real time updates directly on you device, subscribe now.

Comments are closed.

error: Content is protected !!