ಭಾಗ್ಯನಗರ ಪಟ್ಟಣ ಪಂಚಾಯತಿಯನ್ನು ಕೊಪ್ಪಳ ನಗರಸಭೆಗೆ ಸೇರಿಸಲು ಗೊಂಡಬಾಳ ಮನವಿ

Get real time updates directly on you device, subscribe now.

ಕೊಪ್ಪಳ: ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಭಾಗ್ಯನಗರವನ್ನು ಗ್ರಾಮ ಪಂಚಾಯತಿಯಿಂದ ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯತಿಯನ್ನಾಗಿ ೨೦೧೬ರಲ್ಲಿ ಸ್ಥಾಪಿಸಿದ್ದು, ಒಂದು ಅವಧಿ ಪೂರ್ಣಗೊಂಡು ಎರಡನೇ ಅವಧಿಯ ಚುನಾವಣೆ ಆದರೂ ಇದೂವರೆಗೆ ಅದು ಜಾರಿಗೆ ಬಂದಿರುವದಿಲ್ಲ, ಸದರಿ ಭಾಗ್ಯನಗರ ಪಟ್ಟಣ ಪಂಚಾಯತಿಯನ್ನು ಇಲ್ಲಿಗೆ ಮುಕ್ತಾಯಗೊಳಿಸಿ ಅದನ್ನು ಕೊಪ್ಪಳ ನಗರಸಭೆಗೆ ಸೇರಿಸುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪೌರಾಡಳಿತ ನಗರ ಮೂಲಸೌಕರ್ಯ ಸಚಿವರಿಗೆ ತಹಶೀಲ್ದಾರ ಮೂಲಕ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಮಂಜುನಾಥ ಜಿ. ಗೊಂಡಬಾಳ ಅವರು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವಿಭಾಘೀಯ ಸಂಚಾಲಕರೂ ಆಗಿರುವ ಅವರು ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದ್ದು, ಪಟ್ಟಣ ಪಂಚಾಯತಿಯನ್ನು ತೆಗೆದು ನಗರಸಭೆಗೆ ಸೇರಿಸಲು ಪೂರಕ ಅಂಶಗಳನ್ನು ಪಟ್ಟಿ ಮಾಢಿ ಸಲ್ಲಿಸಿದ್ದಾರೆ. ಒಂದು ಸರಕಾರದ ಮಟ್ಟದಲ್ಲಿ ಆಗದಿದ್ದಲ್ಲಿ ಕಾನೂನಿನ ಮೂಲಕವಾದರೂ ಕೊಪ್ಪಳಕ್ಕೆ ಸೇರಿಸಿ, ಅಲ್ಲಿನ ಜನರ ಮೂಲಭೂತ ಸೌಕರ್ಯಗಳನ್ನು ಪಡೆಯುವದಾಗಿ ಅವರು ಹೇಳಿದ್ದಾರೆ.
ಸಂಪೂರ್ಣವಾಗಿ ಕೊಪ್ಪಳ ನಗರಸಭೆಯೊಂದಿಗೆ ಹೊಂದಿಕೊಂಡು ಇರುತ್ತದೆ, ಕಾನೂನಿನಲ್ಲಿಯೇ ಇದಕ್ಕೆ ಅವಕಾಶ ಇರುವದಿಲ್ಲ. ಭಾಗ್ಯನಗರ ವ್ಯಾಪ್ತಿಯಲ್ಲಿಯೇ ಕೊಪ್ಪಳ ನಗರಸಭೆಯ ವಾರ್ಡ ೨೬ ಇದ್ದು ಇದೂ ಸಹ ಕ್ಷೇತ್ರ ವಿಂಗಡಣೆಯ ಅವೈಜ್ಞಾನಿಕತೆಯನ್ನು ತೋರಿಸುತ್ತದೆ. ಜಿಲ್ಲಾಧಿಕಾರಿಗಳ ಸಂಕೀರ್ಣವು ಸಹ ಭಾಗ್ಯನಗರ ವ್ಯಾಪ್ತಿಯಲ್ಲಿದ್ದು, ಅಲ್ಲಿನ ಕಸ ವಿಲೇವಾರಿ ಸೇರಿ ಎಲ್ಲಾ ಕೆಲಸಗಳನ್ನು ನಗರಸಭೆ ನೋಡಿಕೊಳ್ಳುತ್ತದೆ, ಇದು ಹೆಚ್ಚುವರಿ ಆರ್ಥಿಕ ಹೊರೆಯಾಗಿದೆ. ಭಾಗ್ಯನಗರದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೊಪ್ಪಳ ನಗರಸಭೆ ಜಾಕ್ವೆಲ್ ನಿಂದ ಪೂರೈಸುತ್ತಿದ್ದು, ಅದೂ ಸಹ ನಗರಸಭೆಗೆ ಹೊರೆಯಾಗಿದೆ.
ಭಾಗ್ಯನಗರದಲ್ಲಿ ಮತದಾರರಾಗಿರುವ ಶೇ. ೨೦ ರಷ್ಟು ಜನ ಅಲ್ಲಿ ವಾಸವಾಗಿಲ್ಲ, ಈಗಿರುವ ಜನಸಂಖ್ಯೆಯ ಅಂಕಿ ಅಂಶಗಳು ಸಹ ಅವೈಜ್ಞಾನಿಕವಾಗಿವೆ. ಪಟ್ಟಣ ಪಂಚಾಯತಿಯ ವ್ಯಾಪ್ತಿ ದೊಡ್ಡದಾಗಿದ್ದು, ಅಲ್ಲಿನ ಕಸ ವಿಲೇವಾರಿ, ಸ್ವಚ್ಛತೆ ಮತ್ತು ಮೂಲ ಸೌಕರ್ಯಗಳನ್ನು ಪೂರೈಸಲು ಸಂಪೂರ್ಣ ವಿಫಲವಾಗಿದೆ. ಇಡೀ ಕೊಪ್ಪಳದ ಅರ್ಧದಷ್ಟು ಕ್ಷೇತ್ರ ವ್ಯಾಪ್ತಿ ಇದ್ದರೂ ಕೆಲಸ ಮಾಡಲು ಪೌರ ಕಾರ್ಮಿಕರ ತೀವ್ರ ಕೊರತೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಕಾರ್ಮಿಕರ ಸಂಖ್ಯೆ ಕೇವಲ ೨೫ ಆಗಿದ್ದು, ಅಲ್ಲಿನ ಒತ್ತಡಕ್ಕೆ ಕನಿಷ್ಠ ೭೦ ಜನ ಪೂರ್ಣಾವಧಿ ಪೌರ ಕಾರ್ಮಿಕರ ಅಗತ್ಯ ಇದೆ, ಅದು ಸಾಧ್ಯವಿಲ್ಲದ ಮಾತು, ಇದರಿಂದ ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ತೆರಿಗೆ ಮತ್ತು ಸಂಪನ್ಮೂಲಕ್ಕೆ ಬಂದರೂ ಇಷ್ಟು ವ್ಯಾಪ್ತಿಯ ಅಭಿವೃದ್ಧಿ ಮಾಡುವದೂ ಸಹ ಅಸಾಧ್ಯವಾಗಿದ್ದು, ಅದರಿಂದ ಸಹ ಇಲ್ಲಿನ ಬೆಳವಣಿಗೆಯ ವೇಗಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೊಪ್ಪಳ ನಗರಕ್ಕೆ ಹೊಂದಿಕೊಂಡಿದ್ದರೂ ಸಹ ಪಟ್ಟಣ ಪಂಚಾಯತಿ ಎಂಬ ಕಾರಣಕ್ಕೆ ತೆರಿಗೆಯ ವಸೂಲಿ ಸಹ ಕಡಿಮೆ ಆಗಿದ್ದು, ಇಲ್ಲಿನ ಭೂಮಿ ಬೆಲೆ ಕೊಪ್ಪಳ ನಗರಕ್ಕಿಂತಲೂ ಹೆಚ್ಚಿದ್ದು ಸರಕಾರಕ್ಕೆ ನಷ್ಟವಾಗುತ್ತಿದೆ. ಕೊಪ್ಪಳ ನಗರಸಭೆ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಹಲವು ಬಾರಿ ಭಾಗ್ಯನಗರವನ್ನು ನಗರಸಭೆಗೆ ಸೇರಿಸುವ ಸಂಬಂಧ ಠರಾವು ಮಾಡಿ ಸರಕಾರಕ್ಕೆ ಸಲ್ಲಿಸಿರುವದನ್ನು ಪರಿಗಣಿ, ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿ ಮತ್ತು ಟೌನ್ ಮ್ಯಾಪಿಂಗ್‌ನಲ್ಲಿ ಬರುತ್ತದೆ.
ಭಾಗ್ಯನಗರ ಪಟ್ಟಣ ಪಂಚಾಯತಿ ಇರುವದರಿಂದ ಸರಕಾರಕ್ಕೆ ಅನಾವಶ್ಯಕ ಆರ್ಥಿಕ ಹೊರೆ ಉಂಟಾಗುತ್ತದೆ. ಇದರ ಬದಲಿಗೆ ಅದೇ ಕಛೇರಿಯನ್ನು ನಗರಸಭೆಯ ವಿಸ್ತರಣಾ ಕೇಂದ್ರ ಮಾಡಿ ಜನರಿಗೆ ಸಹಾಯ ಮಾಡಬಹುದು. ಕೊಪ್ಪಳ ನಗರಸಭೆಯನ್ನು ನಗರಪಾಲಿಕೆ ಮಾಡಿ, ಹೆಚ್ಚಿನ ಅನುದಾನ, ಹೆಚ್ಚು ಪೌರ ಕಾರ್ಮಿಕರು ಮತ್ತು ಹೆಚ್ಚಿನ ತೆರಿಗೆ ವಸೂಲಿಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು, ಈಗ ಪಟ್ಟಣ ಪಂಚಾಯತಿ ಚುನಾವಣೆಯಾಗಿ ಎರಡು ವರ್ಷ ಕಳೆದರೂ ಸಹ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿರುವದಿಲ್ಲ, ಕೊಪ್ಪಳ ನಗರಸಭೆ ಸಹ ಕೆಲವೇ ತಿಂಗಳಲ್ಲಿ ಹೊಸ ಚುನಾವಣೆಗೆ ಹೋಗಲಿದ್ದು, ಕ್ರಮ ಜರುಗಿಸಲು ಇದು ಸಕಾಲವಾಗಿದೆ.
ಆದ್ದರಿಂದ ಭಾಗ್ಯನಗರವನ್ನು ಕೊಪ್ಪಳ ನಗರಸಭೆಗೆ ಸೇರಿಸಿ, ಕ್ಷೇತ್ರ ಪುನರ್ ವಿಂಗಡಣೆ ಮಾಡಿ, ಜನಸಂಖ್ಯೆ ಮತ್ತು ಕ್ಷೇತ್ರದ ವಿಸ್ತೀರ್ಣ ಎಲ್ಲಾ ವಾರ್ಡುಗಳಿಗೆ ಸಮಾನವಾಗಿ ಬರುವಂತೆ ಮಾಡುವ ಮೂಲಕ ಆಯ್ಕೆಯಾಗುವ ಎಲ್ಲಾ ಸದಸ್ಯರಿಗೆ ಮತ್ತು ವಾರ್ಡಿಗೆ ಸೂಕ್ತ ನ್ಯಾಯ ನೀಡಲು ಮನವಿ ಮಾಡಿಕೊಳ್ಳುತ್ತೇನೆ. ಈ ವಿಷಯವಾಗಿ ನ್ಯಾಯಾಲಯದ ಮೊರೆ ಹೋಗಲು ಸಹ ಇಚ್ಚಿಸಿದ್ದು ತಾವು ಅನುಮತಿಸಿದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತದೆ ಎಂದು ಗೊಂಡಬಾಳ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: