ಪ್ರಜ್ವಲ್ ರೇವಣ್ಣ ಬಂಧನಕ್ಕೆ ಮಹಿಳಾ ಕಾಂಗ್ರೆಸ್ ಒತ್ತಾಯ-ಭಿತ್ತಿಪತ್ರ ಹಿಡಿದು ಧಿಕ್ಕಾರ ಕೂಗಿ ಆಕ್ರೋಶ
ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ
ಕೊಪ್ಪಳ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಹೇಳಿದರು.
ನಗರದ ಅಶೋಕ ವೃತ್ತದಲ್ಲಿ ಶನಿವಾರ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವಿದೆ. ಅದರಲ್ಲೂ ಜೆಡಿಎಸ್‌ನಲ್ಲಿ ತೆನೆಹೊತ್ತ ಮಹಿಳೆಯ ಗುರುತಿಗೆ ವಿರುದ್ಧವಾಗಿ ಸಂಸದರು ಹಾಗೂ ಶಾಸಕರು ನಡೆದುಕೊಳ್ಳುತ್ತಿರುವುದು ನಾಚಿಕೇಡಿನ ಸಂಗತಿ. ಅಪ್ಪ-ಮಗ ಇಬ್ಬರು ಮನೆಯ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ನೊಂದ ಮಹಿಳೆ ಪ್ರಕರಣ ದಾಖಲಿಸುವ ಮೂಲಕ ಸಾರ್ವಜನಿಕರೆದುರು ಪ್ರಜ್ವಲ್ ಹಾಗೂ ರೇವಣ್ಣ ಹೀನ ಕೃತ್ಯವನ್ನು ಬಹಿರಂಗಪಡಿಸಿದ್ದಾರೆ. ದಿನವೊಂದಕ್ಕೆ ಪ್ರಕರಣ ಗಂಭೀರವಾಗ ತೊಡಗಿದೆ. ಕೂಡಲೇ ಕಾಮುಕ ಸಂಸದನನ್ನು ಬಂಧಿಸಿ ಎಂದರು.
ಕಾಮದಾಸೆಗಾಗಿ ಮನೆಕೆಲಸದ ಕೂಲಿಕಾರ್ಮಿಕರು, ರಾಜಕೀಯ ಹಾಗೂ ಸರ್ಕಾರಿ ವೃತ್ತಿಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಬಳಸಿಕೊಂಡಿರುವುದು ನಾಡಿನ ದೊಡ್ಡ ದುರಂತ. ಶೋಷಣೆಗೆ ಒಳಗಾಗಿರುವ ಮಹಿಳೆಯರನ್ನು ರಕ್ಷಿಸುವ ಸಲುವಾಗಿ ರಾಜ್ಯದ ಮಹಿಳೆಯರು ಒಗ್ಗಟ್ಟಾಗಿ ಕೈ ಜೋಡಿಸಿ ಕಾಮುಕರನ್ನು ಮಟ್ಟ ಹಾಕಲು ಪ್ರಕರಣ ದಾಖಲಿಸಬೇಕು ನೊಂದ ಮಹಿಳೆಯರ ಪರ ನಮ್ಮ ಸರ್ಕಾರವಿದೆ ದೃತಿಗೇಡಬೇಡಿ ಎಂದರು.
ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬೂದನೂರ ಮಾತನಾಡಿ,ಎಚ್.ಡಿ.ಕುಮಾರಸ್ವಾಮಿ ಗ್ಯಾರಂಟಿ ಹಣದಿಂದ ಸ್ವಾಭಿಮಾನದ ಜೀವನ ನಡೆಸುತ್ತಿರುವ ಮಹಿಳೆಯರನ್ನು ಸಹಿಸಿಕೊಳ್ಳಲಾರದೇ ಮಹಿಳೆಯರಿಗೆ ಹಾದಿ ತಪ್ಪುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ ನೈತಿಕವಾಗಿ ಹಾದಿ ತಪ್ಪುವ ಕೆಲಸವನ್ನು ಅವರ ಕುಟುಂಬದವರೇ ಮಾಡಿದ್ದಾರೆ. ಕುಮಾರಸ್ವಾಮಿಯರೇ ಮಹಿಳೆಯರು ಹಾದಿತಪ್ಪಿಲ್ಲ, ನೀವು ಮತ್ತು ನಿಮ್ಮ ಕುಟುಂಬ ಹಾದಿತಪ್ಪಿದೇ. ನಿಮಗೆ ಮಹಿಳೆಯರ ಬಗ್ಗೆ ಗೌರವ ಇದ್ದರೇ ಪ್ರಜ್ವಲ್ ರೇವಣ್ಣನನ್ನು ಸರ್ಕಾರಕ್ಕೆ ಒಪ್ಪಿಸಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಮುಖಂಡ ಅಮರೇಶ ಕರಡಿ ಮಾತನಾಡಿ, ಜೆಡಿಎಸ್ ಪಕ್ಷದ ವರಿಷ್ಟರು ತೆನೆಹೊತ್ತ ಮಹಿಳೆಯ ಗುರುತನ್ನು ತೆಗೆದುಹಾಕಬೇಕು. ಇಂಥ ಪ್ರಕರಣದಿಂದ ನಾಡಿನ ಆರೂವರೆ ಕೋಟಿ ಕನ್ನಡಿಗರು ಇಡೀ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ. ಪ್ರಜ್ವಲ್ ಕುಟುಂಬದ ಸದಸ್ಯರು ನೈತಿಕ ಹೊಣೆಹೊತ್ತು ರಾಜಕೀಯ ನಿವೃತ್ತಿ ಘೋಷಿಸಿ ಮಹಿಳೆಯರಿಗೆ ಗೌರವ ಸೂಚಿಸಬೇಕು. ಪ್ರಜ್ವಲ್ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇಡೀ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ. ಮೋದಿಯವರೇ ಮುಂಚೆಯೇ ಈ ಪ್ರಕರಣದ ಬಗ್ಗೆ ಅರಿವು ಇದ್ದರೂ ಹಾಸನದಲ್ಲಿ ಕಾಮುಕ ಪ್ರಜ್ವಲ್ ಪರ ಮತಯಾಚಿಸಿದ್ದಾರೆ. ಅಮಿತ್ ಶಾ ಅವರೇ ನೀವೇ ಗೃಹ ಸಚಿವರು ಆಗಿದ್ದೀರಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಯಾಕೆ ಸಹಕರಿಸುತ್ತಿಲ್ಲ? ನಿಮಗೆ ಮಹಿಳೆಯರ ಮೇಲೆ ಗೌರವ ಇಲ್ಲವೇ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ನ ಪ್ರಮುಖರಾದ ಜ್ಯೋತಿ ಗೊಂಡಬಾಳ, ಸಾವಿತ್ರಿ ಮುಜಂದಾರ, ರಜಿಯಾ ಮನಿಯಾರ್, ರೇಷ್ಮಾ ಖಾಜಾವಲಿ, ಸವಿತಾ ಗೋರಂಟ್ಲಿ, ನಾಗರತ್ನ ಪೂಜಾರ, ಸುಮಂಗಲಾ ನಾಯಕ, ಯಶೋಧಾ ಮರಡಿ, ಕಾವೇರಿ ಆರ್. ಬಸವರಾಜ ಭೋವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Comments are closed.