ರಾಜಶೇಖರ ಅಂಗಡಿ ಎಂಬ ‘ಹುಂಬ’ ಗೆಳೆಯ‘ಕನ್ನಡವೆಂದರೆ ನಾ ಮುಂದೆ’ ಎನ್ನುತ್ತಿದ್ದ ಸಂಘಟನಾಕಾರ-ಆನಂದತೀರ್ಥ ಪ್ಯಾಟಿ

Get real time updates directly on you device, subscribe now.

ಇಪ್ಪತ್ತೈದು ವರುಷಗಳ ಹಿಂದಿನ ದಿನಗಳವು. ನಾನು, ಮಂಜು (ಮಂಜುನಾಥ ಡೊಳ್ಳಿನ), (ಬಸವರಾಜ) ಕರುಗಲ್, ಗಿರೀಶ (ಪಾನಘಂಟಿ), ಶಂಕ್ರಯ್ಯ (ಅಬ್ಬಿಗೇರಿಮಠ), (ಬಸವರಾಜ) ಮೂಲಿಮನಿ, ಶರಣು (ಶರಣಬಸವರಾಜ ಗದಗ), ರಾಜೇಶ, ಜಿ.ಎಸ್. ಗೋನಾಳ ಎಂಬೆಲ್ಲ ಸಾಂಸ್ಕೃತಿಕ ಲೋಕದ ಉದಯೋನ್ಮುಖ ನಾಯಕರು (!) ಕನ್ನಡದ ಚಟುವಟಿಕೆಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದೆವು. ಆ ಚಟುವಟಿಕೆಗಳಾದರೋ, ಸ್ಥಳೀಯ ಪತ್ರಿಕೆಗಳಲ್ಲಿ ಲೇಖನ ಬರೆಯುವುದು, ಕವಿಗೋಷ್ಠಿಯಲ್ಲಿ ಪದ್ಯ ಓದುವುದು, ‘ಚುಸಾಪ’ ಎಂದು ವಿಚಿತ್ರವಾಗಿ ಕರೆಸಿಕೊಳ್ಳುತ್ತಿದ್ದ ಚುಟುಕ ಸಾಹಿತ್ಯ ಪರಿಷತ್ತಿನ ತರಹೇವಾರಿ ಘಟಕಗಳನ್ನು ಸ್ಥಾಪಿಸುವುದು, ಪ್ರಕಟಣೆ ಹೊರಡಿಸಿ, ಕವಿಗಳಿಂದ ಕವನ ತರಿಸಿಕೊಂಡು ಸಂಕಲನ ಪ್ರಕಟಿಸುವುದು, ಜಿಲ್ಲಾಡಳಿತ ಆಯೋಜಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆರಂಭದಿಂದ ವಂದನಾರ್ಪಣೆವರೆಗೆ ಹಾಜರ್ ಇರುವುದು ಇಂಥವೇ ಆಗಿರುತ್ತಿದ್ದವು! ಈ ಚಟುವಟಿಕೆಗಳನ್ನು ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಣಿಯೊಬ್ಬರು ಮೆಚ್ಚಿದ್ದು ನಮಗೆ ಡಬಲ್ ಹೆಮ್ಮೆ ಮೂಡಿಸುತ್ತಿತ್ತು.
ಇವರೆಲ್ಲರ ಪೈಕಿ ನನ್ನ ಹೆಸರು ತೀರಾ ಒಂಚೂರು ಜಾಸ್ತಿಯೇ ಚಾಲ್ತಿಯಲ್ಲಿತ್ತು; ಯಾಕೆಂದರೆ ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿದ್ದವು. ಮಂಜು ತನ್ನ ಸ್ನೇಹಿತರ ಜತೆಗೂಡಿ ‘ನವಚೇತನ ಮಿತ್ರವೃಂದ’ದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುತ್ತಿದ್ದ. ಹಾಗಿದ್ದಾಗ, (1997ರಲ್ಲಿ ಇರಬೇಕು) ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಪರಿಚಯವಾದ ರಾಜಶೇಖರ ಅಂಗಡಿ, ಬಿಡುವಿನ ಮಧ್ಯೆ ಅಶೋಕ ಸರ್ಕಲ್ಲಿನ ‘ಹರಿನಿವಾಸ’ ಹೋಟೆಲಿಗೆ ಚಹಾ ಕುಡಿಯಲು ಕರೆದೊಯ್ದ. ಆತ ಅಲ್ಲಿ ಮಾತು ಶುರು ಮಾಡಿದ್ದೇ ಒಂದು ತಕರಾರಿನಿಂದ: “ನನ್ನ ಹೆಸರು ಒಮ್ಮೆಯೂ ಪೇಪರಿನಾಗ ಬರಿಸಿಲ್ಲ ನೀನು.”
“ಪತ್ರಿಕೆಗಳಲ್ಲಿ ಹೆಸರು ಬರೋದ ಕಷ್ಟ. ಅಂಥದ್ರಾಗ ನೀನ ಕಥಿ, ಕವನ, ಲೇಖನ ಬರೀಲಾರದ ಹೆಸರು ಹ್ಯಾಂಗ ಬರ್ತದೋ ದೋಸ್ತ” ಅಂತ ಜತೆಗಿದ್ದ ಮಿತ್ರ ಮಂಜು ಚಿಂತಾಕ್ರಾಂತನಾಗಿ ರಾಜಶೇಖರನನ್ನು ಕೇಳಿದ. “ಅಲ್ಲಪಾ ದೋಸ್ತ… ಕತಿ, ಕವನ ಬರದ್ರ ಮಾತ್ರ ಸಾಹಿತಿ ಅಂತಾರನು?’’ ಎಂದು ರಾಜಶೇಖರ ಮರುಪ್ರಶ್ನೆ ಹಾಕಿದ. ಅದಕ್ಕೆ ನಾನು “ಹಂಗಲ್ಲ… ಆದ್ರೂ” ಅಂತ ಸಮಜಾಯಷಿ ಕೊಡಲು ಹೋದಾಗ, ಮಂಜು ಮಾತ್ರ “ಆತು ಬಿಡು ದೋಸ್ತ. ಒಂದ ಕಾರ್ಯಕ್ರಮದ ವರದಿಯಾಗ ನಿನ್ನ ಹೆಸರು ಸೇರಿಸ್ತೀವಿ ಬಿಡು” ಅಂತ ಭರವಸೆ ಕೊಟ್ಟ. ರಾಜಶೇಖರ ಡಬಲ್ ಡೋಸ್ ಚಹಾದ ಬಿಲ್ ಕೊಟ್ಟ.
ಅವತ್ತಿನಿಂದ ಶುರುವಾಗಿದ್ದು ನಮ್ಮ ಜತೆಗೆ ರಾಜಶೇಖರನ ದೋಸ್ತಿ. ಕಾರ್ಯಕ್ರಮಗಳ ವರದಿಯನ್ನು ಅಚ್ಚುಕಟ್ಟಾಗಿ ಬರೆದು, ಅವತ್ತಿನ ಪತ್ರಿಕಾ ವರದಿಗಾರರಿಗೆ ಕೊಡುವ ಕೆಲಸವನ್ನು ನಾನು ಹಾಗೂ ಮಂಜು ಎಷ್ಟೋ ಸಲ ಮಾಡಿದ್ದಿದೆ. ಅದರಲ್ಲಿ ರಾಜಶೇಖರನ ಹೆಸರು ‘ಉಪಸ್ಥಿತರಿದ್ದರು’ ಎಂಬ ಸಾಲಿನಲ್ಲಿ ಸೇರಿರುತ್ತಿತ್ತು! ಆತನಿಗೋ ಖುಷಿಯೋ ಖುಷಿ! ಅದರಲ್ಲೂ ರಾಜಶೇಖರನೇ ಸ್ಥಾಪಿಸಿದ್ದ ’ತಿರುಳ್ಗನ್ನಡ ಕ್ರಿಯಾ ಸಮಿತಿ’ ನೇತೃತ್ವದಲ್ಲಿ ನಡೆಯುತ್ತಿದ್ದ ಕನ್ನಡಪರ ಚಟುವಟಿಕೆಗಳ ಸಂಬಂಧಿ ಪತ್ರಿಕಾ ವರದಿಗಳಲ್ಲಿ ತನ್ನ ಹೆಸರು ಪದೇ ಪದೇ ಕಾಣುವಂತಾದಾಗ, ಸಿಕ್ಕಾಪಟ್ಟೆ ಸಂತೋಷಪಡುತ್ತಿದ್ದ. ಅದೇ ಹುಮ್ಮಸ್ಸಿನಲ್ಲಿ ಮತ್ತಷ್ಟು ಕನ್ನಡದ ಕೆಲಸಗಳನ್ನು ಕ್ರಿಯಾಶೀಲವಾಗಿ ಮಾಡುತ್ತಿದ್ದ. ಆ ಮಟ್ಟಿಗೆ ರಾಜಶೇಖರನಿಗೆ ಸಾಟಿಯೇ ಇರಲಿಲ್ಲ! ಪತ್ರಿಕೆಗಳಲ್ಲಿ ಈತನ ಹೆಸರನ್ನೂ, ಕೆಲಸಗಳನ್ನೂ ಕಂಡು ಗಾಬರಿಯಾದ ಆಗಿನ ಮೂರ್ನಾಲ್ಕು ಖ್ಯಾತ ಸಾಹಿತಿ- ಕವಿಪುಂಗವರು, “ಇವನ್ಯಾರ್ರೀ” ಎಂದು ಬಂಡಾಯ ಕವಿ ವಿಠ್ಠಪ್ಪ ಗೋರಂಟ್ಲಿ ಅವರಲ್ಲಿ ಕೇಳಿದ್ದರಂತೆ!
ಕಾರ್ಯಕ್ರಮ ಸಂಘಟಿಸುವಲ್ಲಿ ರಾಜಶೇಖರನಿಗೆ ಇದ್ದ ಸಾಮರ್ಥ್ಯ ಅಸಾಧಾರಣ. ದಿನಕ್ಕೆ 24 ತಾಸು ಸಹ ಸಾಲದಂತೆ ದುಡಿದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿಬಿಡುತ್ತಿದ್ದ. ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳ ಚುಕ್ಕಾಣಿ ಹಿಡಿದು, ಅವುಗಳು ಗುರಿ ಮುಟ್ಟುವವರೆಗೆ ಆ ಕೆಲಸವನ್ನು ನಿಲ್ಲಿಸುತ್ತಿರಲಿಲ್ಲ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ, ಹಿರೇವಂಕಲಕುಂಟಾದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ಒಂದು ದಿನ ಬೆಳಿಗ್ಗೆ ಫೋನ್ ಮಾಡಿ, ಮಟಮಟ ಮಧ್ಯಾಹ್ನ ಮನೆಗೆ ಬಂದ. ಸಮ್ಮೇಳನದ ಒಂದು ಗೋಷ್ಠಿಯಲ್ಲಿ ಮಾತಾಡಲು ಆಹ್ವಾನ ನೀಡಿದ. ಆದರೆ ಅದೇಕೋ ಅವತ್ತು ಸಿಟ್ಟಿನಿಂದ ನಾನು, “ಬರೀ ಕತೆ, ಕವನ ಬರೆಯುವವರಷ್ಟೇ ಸಾಹಿತಿಗಳಾ? ಹೊಟ್ಟೆಗೆ ಅನ್ನ ತಿನ್ನುವವರು ಅದನ್ನು ಬೆಳೆದುಕೊಡುವ ರೈತರನ್ನು ಸಮ್ಮೇಳನಗಳಲ್ಲಿ ನೆನಪಿಸಿಕೊಳ್ಳುವುದೇ ಇಲ್ಲ. ಯಾರಿಗೆ ಬೇಕಿದೆ ನಿನ್ನ ಸಮ್ಮೇಳನ. ಬರೋದಿಲ್ಲ ಹೋಗು” ಎಂದು ಹೇಳಿದೆ. ಎಳ್ಳಷ್ಟೂ ಬೇಸರ ಮಾಡಿಕೊಳ್ಳದ ರಾಜಶೇಖರ, ತಕ್ಷಣವೇ “ದೋಸ್ತಾ… ಈ ಸಮ್ಮೇಳನ ಉದ್ಘಾಟನೆ ಆದ ಮ್ಯಾಲ ಒಂದನೇ ಗೋಷ್ಠಿ ನೀನು ಹೇಳಿದಂಗ ಮಾಡಣ ತಗಳಪ” ಎಂದು ಸಮಾಧಾನಪಡಿಸಿದ; ಮತ್ತು ಅದನ್ನು ಚಾಚೂ ತಪ್ಪದಂತೆ ನಿರ್ವಹಿಸಿದ. ರೈತರ ಸಮಸ್ಯೆ, ಯಶಸ್ಸು, ಪರಿಹಾರದಂಥ ಅನುಭವಿಗಳ ಮಾತುಗಳಿಗೆ ಅವತ್ತಿನ ಗೋಷ್ಠಿ ಸಾಕ್ಷಿಯಾಗಿತ್ತು. ಸುಮಾರು 50 ದೇಸಿ ತಳಿ ಜೋಳ ಸಂರಕ್ಷಣೆ ಮಾಡುತ್ತಿರುವ ಬೆಳಗಾವಿಯ ಒಬ್ಬ ರೈತರನ್ನು ಕರೆಸಿ, ಆ ಎಲ್ಲ ಜೋಳದ ತೆನೆಗಳ ‘ಲೈವ್ ಡೆಮೋ’ ಮಾಡಿದ್ದು ಗೋಷ್ಠಿಯ ‘ಹೈಲೈಟ್’ ಆಗಿತ್ತು. ಆ ಬಗ್ಗೆ ರಾಜಶೇಖರನಿಗೆ ಅಭಿನಂದನೆ ಸುರಿಮಳೆ ಸಿಕ್ಕಾಗ, ಖುಷಿಯಿಂದ “ದೋಸ್ತಾ ನೀ ಹೇಳಿದ್ದೆಲ್ಲ ಸರಿ ಆತಲ್ಲ?” ಎಂದು ಕೇಳಿದ್ದ.
ಆತನ ಸಂಘಟನಾ ಚಾತುರ್ಯಕ್ಕೆ ಶ್ರೇಷ್ಠ ಉದಾಹರಣೆ ಎಂದರೆ, ‘ಶಿವಸಂಚಾರ’ ತಂಡದಿಂದ ನಾಟಕ ಪ್ರದರ್ಶನ. ರಾಜ್ಯದೆಲ್ಲೆಡೆ ಸಂಚರಿಸುತ್ತ ರಂಗಾಸಕ್ತರಿಗೆ ನಾಟಕಗಳ ರಸದೌತಣ ನೀಡುವ ‘ಶಿವಸಂಚಾರ’ವನ್ನು ಕೊಪ್ಪಳಕ್ಕೆ ಕರೆಸಿ, ಪ್ರದರ್ಶನ ನಡೆಸುವಂತೆ ರಾಜಶೇಖರನನ್ನು ನಾನು, ಮಂಜು ಒತ್ತಾಯಿಸಿದೆವು. ಮೊದಲಿಗೆ “ಅವರು ಎಂಥವರೋ ಗೊತ್ತಿಲ್ಲ ದೋಸ್ತ… ನಮಗೆ ಅಡ್ಜಸ್ಟ್ ಆಗ್ತಾರೋ ಇಲ್ಲೋ’ ಎಂದು ಮುಗುಮ್ಮಾಗಿ ಹೇಳಿ, ಹಿಂಜರಿದ. ಪಟ್ಟು ಬಿಡದ ನಾವಿಬ್ಬರೂ, ಆತನಿಗೆ ಹುಮ್ಮಸ್ಸು ತುಂಬಿದೆವು. “ಆತು ದೋಸ್ತ. ಕರೆಸೇ ಬಿಡಾಣ” ಎಂದು ಪ್ರಕಟಿಸಿದ ರಾಜಶೇಖರ, ಆ ತಂಡವನ್ನು ಆಹ್ವಾನಿಸಿ ಕೊಪ್ಪಳದ ರಂಗಪ್ರೇಮಿಗಳಿಗೆ ಸುಗ್ಗಿಯನ್ನೇ ಕೊಟ್ಟ.
ರಾಜಶೇಖರನನ್ನು ನಾವೆಲ್ಲಾ ಆತ್ಮೀಯವಾಗಿ ಕರೆಯುತ್ತಿದ್ದುದು ‘ಹುಂಬ’ ಅಂತಲೇ. ಎಂಥ ಕಾರ್ಯಕ್ರಮವನ್ನಾದರೂ ತನ್ನ ಶಕ್ತಿ, ತಾಕತ್ತಿನಿಂದ ಸಲೀಸಾಗಿ ನಿರ್ವಹಿಸಿಬಿಡುತ್ತಿದ್ದ. ವಿವರ ಸಂಗ್ರಹ, ಯೋಜನೆ, ಅನುಷ್ಠಾನ ಎಂಬೆಲ್ಲ ‘ಪ್ರಕ್ರಿಯೆ’ (ಪ್ರೊಸೀಜ಼ರ್) ಆತನಲ್ಲಿ ಮೂಡುತ್ತಿರಲೇ ಇಲ್ಲ. ಏಕ್‍ದಂ ಕಾರ್ಯಕ್ರಮ ಜಾರಿಯೇ ಆತನ ಸ್ಟ್ರಾಟಜಿ!
ಇಂಥ ಹುಂಬನನ್ನು ಪಾತ್ರಧಾರಿಯಾಗಿಸಿ ಪ್ರಯೋಗಿಸಿದ ನಾಟಕಗಳನ್ನು ಕೊಪ್ಪಳದ ಜನತೆ ವೀಕ್ಷಿಸಿದ್ದೊಂದು ಮರೆಯಲಾಗದ ನೆನಪು. ಸ್ವಾತಂತ್ರ್ಯ ಮಹೋತ್ಸವದ ಸುವರ್ಣ ಸಂಭ್ರಮಕ್ಕೆಂದು ಜಿಲ್ಲಾಡಳಿತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ನೇಹಿತ ಬಸವರಾಜ ಮೂಲಿಮನಿ ಬರೆದ ‘ಕೊಪ್ಪಳದ ಸ್ವಾತಂತ್ರ್ಯ ಸಮರ’ ನಾಟಕದಲ್ಲಿ ರಾಜಶೇಖರ ಅಂಗಡಿಯು ಸುರಪುರದ ವೆಂಕಟಪ್ಪ ನಾಯಕದ ಪಾತ್ರಕ್ಕೆ ಬಣ್ಣ ಹಚ್ಚಿದ್ದ. ಅದಕ್ಕೆ ಕಥಾ ಸಂಚಾಲಕನಾಗಿದ್ದು ನಾನು! ಪರದೆಯ ಹಿಂದೆ ಮರೆಯಾಗಿ ನಿಂತು, ಕೈಯಲ್ಲಿ ನಾಟಕದ ಹಸ್ತಪ್ರತಿ ಹಿಡಿದುಕೊಂಡು ಪಾತ್ರಧಾರಿಗಳಿಗೆ ಅವರ ‘ಡೈಲಾಗ್ ಎತ್ತಿ ಕೊಡುವ’ ಕೆಲಸ ನನ್ನದು. ಪ್ರೇಕ್ಷಕರಿಗೆ ಎದುರಾಗಿ ಸಂಭಾಷಣೆ ಹೇಳದೇ, ಹಿಂದೆ ಹೊರಳಿ ಹೊರಳಿ (ನನ್ನ ಮಾತು ಆಲಿಸುತ್ತ) ಡೈಲಾಗ್ ಹೊಡೆಯುತ್ತಿದ್ದ ರಾಜಶೇಖರನ ಅಭಿನಯವೂ ಚೆನ್ನಾಗಿಯೇ ಇತ್ತು.
ಕೊಪ್ಪಳದ ಜನರಿಂದ ಈ ನಾಟಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಇದರಿಂದ ಸ್ಪೂರ್ತಿಗೊಂಡು, ದಿವಂಗತ ಸಾಹಿತಿ ಬಿ.ಸಿ. ಪಾಟೀಲ ರಚಿಸಿದ್ದ ‘ಕಾಯಕಯೋಗಿ’ ನಾಟಕದ ಪ್ರದರ್ಶನಕ್ಕೆ ಮಂಜು ಹಾಗೂ ಮಿತ್ರರ ತಂಡ ನಿರ್ಧರಿಸಿತು. ಆದರೆ ಅಕ್ಕಮಹಾದೇವಿ ಪಾತ್ರ ವಹಿಸಲು ಯಾರೂ ಮುಂದಾಗಲಿಲ್ಲ. ಆಗ ನಾನು ಮತ್ತು ಮಂಜು ಒಂದೆಡೆ ರಾಜಶೇಖರನನ್ನು ಕರೆದೊಯ್ದು, ಮನವೊಲಿಸಿದೆವು. ಪ್ರದರ್ಶನದ ದಿನ ಮೀಸೆ ತೆಗೆಸಿಕೊಂಡು ಬಂದ ರಾಜಶೇಖರನ ಮುಖ ವಿಚಿತ್ರವಾಗಿ ಕಾಣಿಸಿತು. ಅದಾದ ಮೇಲೆ, ಮೈತುಂಬ ಬೂದಿ ಬಳಿದುಕೊಂಡು, ಸುಮಾರು ಏಳೆಂಟು ಚೌರಿ ಕೂದಲುಗಳನ್ನು ಕಟ್ಟಿಕೊಂಡು, ನಮ್ಮೆದುರು ಅಕ್ಕನ ರೂಪದಲ್ಲಿ ನಿಂತಾಗ ಎಲ್ಲರೂ ದಿಗ್ಭ್ರಾಂತಗೊಂಡಿದ್ದೆವು.
ಸರಿ… ರಂಗ ಪ್ರದರ್ಶನ ಶುರುವಾಯಿತು. ಅಕ್ಕಮಹಾದೇವಿ ವೇದಿಕೆ ಪ್ರವೇಶಿಸುತ್ತಲೇ ಜನರಿಂದ “ಹೋ” ಎಂಬ ಉದ್ಗಾರ; ಹರ್ಷೋಲ್ಲಾಸದ ಕೂಗು! ಅದು ಅನುಭವ ಮಂಟಪದಲ್ಲಿ ಅಲ್ಲಮಪ್ರಭು- ಅಕ್ಕಮಹಾದೇವಿ ನಡುವಿನ ವಾಗ್ವಾದದ ಸನ್ನಿವೇಶ. ರಾಜಶೇಖರನ ಯಶಸ್ಸನ್ನು ತುಸು ‘ಬೇರೆ’ ಥರ ನೋಡುತ್ತಿದ್ದ ಇಬ್ಬರು ಕಲಾವಿದರು, ಪರದೆ ಹಿಂದೆ ಡೈಲಾಗ್ ಎತ್ತಿ ಕೊಡುತ್ತಿದ್ದ ನನ್ನ ಬಳಿ ಬಂದು, “ಮಂದಿ ಅವನ ಡ್ರೆಸ್, ಮೇಕಪ್ ನೋಡಿ ನಗ್ಲಿಕ್ಕ ಹತ್ಯಾರ್ರಿ. ಆದ್ರ ಅವಗ ಗೊತ್ತಾಗವಲ್ದು… ಮಬ್ ನನ್ಮಗ…” ಎಂದು ಗೇಲಿ ಮಾಡಿದರು. ನಾನು ತುಸು ಕೋಪದಿಂದ “ಹಂಗೇನೂ ಇರಲಿಕ್ಕಿಲ್ಲ. ಜನ ಎಂಜಾಯ್ ಮಾಡ್ತಿರಬಹುದು” ಅಂತ ವಾದಿಸಿದೆ. ನಮ್ಮ ನಡುವೆ ಈ ಮಾತುಕತೆ ನಡೆಯುವ ಹೊತ್ತಿನಲ್ಲಿ, ನನಗೆ ಅರಿವಿಲ್ಲದಂತೆ ಡೈಲಾಗ್ ಹೇಳಿ ಕೊಡುವ ಕೆಲಸ ಮರೆತೇಹೋಗಿತ್ತು. ದಿಢೀರನೇ ನೆನಪಾಗಿ, ಹಸ್ತಪ್ರತಿ ಗಮನಿಸಿದರೆ ಅಘಾತ! ವಿಷಯ ಏನೆಂದರೆ, ಅಲ್ಲಮಪ್ರಭುವಿನ ಸಂಭಾಷಣೆಯನ್ನು ಅಕ್ಕಮಹಾದೇವಿಯೂ, ಆಕೆಯ ಮಾತುಗಳನ್ನು ಪ್ರಭುಗಳೂ ಹೇಳುತ್ತಿದ್ದಾರೆ! ಗದ್ದಲದ ಮಧ್ಯೆ ಸಂಭಾಷಣೆಗಳನ್ನು ಮತ್ತೆ ಹಳಿಗೆ ತಂದೆ. ಆ ಅಂಕ ಮುಗಿದು, ಪರದೆ ಹಿಂದೆ ರಾಜಶೇಖರ ಬಂದಾಗ, ಸಿಕ್ಕಾಪಟ್ಟೆ ಬೈದೆ. ಆದರೆ ಆತ ಅಷ್ಟೇ ಶಾಂತಚಿತ್ತದಿಂದ “ಅಲ್ಲೋ ಮಾರಾಯ… ಒಟ್ನ್ಯಾಗ ಯಾರ ಡೈಲಾಗೂ ಮಿಸ್ ಆಗ್ಲಿಲ್ಲ ಹೌದಲ್ಲ? ಯಾರ ಹೇಳಿದ್ರೇನಪಾ?” ಅನ್ನಬೇಕೇ? ಅಷ್ಟರ ಮಧ್ಯೆ, ಶೂನ್ಯ ಸಿಂಹಾಸನದ (ವಾಸ್ತವವಾಗಿ ಅದು ಮದುವೆಗೆ ಬಳಸುವ ಮಹಾರಾಜಾ ಚೇರ್! ಒಂದಷ್ಟು ಅಲಂಕಾರ ಮಾಡಲಾಗಿತ್ತು, ಅಷ್ಟೇ) ಮೇಲೆ ಕೂತು ಫೋಟೋ ತೆಗೆಸಿಕೊಳ್ಳುವ ಪಾತ್ರಧಾರಿಯೊಬ್ಬನ ಒತ್ತಾಯವು ವೇದಿಕೆ ಮೇಲೆ ಘರ್ಷಣೆಗೆ ಕಾರಣವಾಯಿತು. ಅದನ್ನು ಪರಿಹರಿಸಲು ರಾಜಶೇಖರ ಹೋದಾಗ, ಮತ್ತೆ ‘ಹೋ’ ಎಂಬ ಕೇಕೆ, ಕೂಗು. ಅಸಲಿ ಸಂಗತಿ ಏನಾಗಿತ್ತೆಂದರೆ, ಒಳಗೆ ಟವೆಲ್ ಸುತ್ತಿಕೊಂಡು, ಮೈಮೇಲೆಲ್ಲ ಚೌರಿಕೂದಲು ಕಟ್ಟಿಕೊಂಡಿದ್ದ ರಾಜಶೇಖರ, ಅಭಿನಯ ಮುಗಿಸಿ ಪರದೆ ಹಿಂದೆ ಬರುತ್ತಲೇ ಕೂದಲನ್ನು ಸುರುಳಿ ಮಾಡಿ ಎಡಗೈಗೆ ಸುತ್ತಿಕೊಂಡಿದ್ದ. ಒಳಗೆ ಟವಲ್ ಕಾಣುತ್ತಿತ್ತು. ಅದೇ ವೇಷದಲ್ಲಿ ಜಗಳ ಬಗೆಹರಿಸಲು ವೇದಿಕೆ ಮೇಲೆ ಹೋಗಿದ್ದ. ಅದೂ, ಅಲ್ಲಿಯವರೆಗೆ ಧರ್ಮ, ತತ್ವಗಳ ಸಂಭಾಷಣೆ ಉಸುರುತ್ತಿದ್ದ ಪಾತ್ರಧಾರಿಯೊಬ್ಬ, ಜಗಳ ನಿಲ್ಲಿಸಲು ‘ಲೇ ನಿಮ್ಮವ್ರ’ ಎಂದು ಜೋರಾಗಿ ಬೈಯುತ್ತ..!
ಕೊಪ್ಪಳದಲ್ಲಿ ನಡೆಯುತ್ತಿದ್ದ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ನಾನು ಹೆಚ್ಚೇನೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರಲಿಲ್ಲ. ಹಾಗಿದ್ದರೂ ಪಟ್ಟು ಬಿಡದೇ ರಾಜಶೇಖರ ನನ್ನ ಜತೆ ಪದೇ ಪದೇ ಮಾತಾಡಿ, ಸಂಪನ್ಮೂಲ ವ್ಯಕ್ತಿಗಳ ವಿವರ ಪಡೆದು ಸಮ್ಮೇಳನಗಳಿಗೆ ಆಹ್ವಾನಿಸುತ್ತಿದ್ದ. ಉಳಿದಂತೆ, ಎದುರಿಗೆ ಸಿಕ್ಕಾಗಲೆಲ್ಲ “ಒಂದು- ನೀನು ಪರಿಷತ್ತಿನ ಕಾರ್ಯಕ್ರಮಕ್ಕ ಬರಂಗಿಲ್ಲ. ಎರಡನೇದ್ದು- ನಿನ್ ತೋಟಕ್ಕ ಒಟ್ಟ ಕರೀತಿಲ್ಲ. ಹ್ಯಾಂಗೋ ಇದು ದೋಸ್ತಾ” ಎಂದು ಹುಸಿಕೋಪ ತೋರುತ್ತಿದ್ದ.
ನನ್ನ ಊಹೆಗೂ ಮೀರಿ ರಾಜಶೇಖರನ ಸಹಾಯ ಹಸ್ತ ಸಿಕ್ಕಿದ ಘಟನೆಯೊಂದನ್ನು ನೆನಪಿಸಿಕೊಳ್ಳದೇ ಹೋದರೆ ಅಷ್ಟರ ಮಟ್ಟಿಗೆ ಕೃತಘ್ನನಾದಂತೆ. ಇಪ್ಪತ್ತು ವರುಷಗಳ ಹಿಂದೊಂದು ದಿನ ನಮ್ಮ ಬಂಧುಗಳೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ರಾತ್ರಿ 8ರ ಸುಮಾರಿಗೆ ರಾಜಶೇಖರ ದಿಢೀರೆಂದು ಹಾಜರಾಗಿ, “ಏನಾರ ಹೆಲ್ಪ ಬೇಕಾಗ್ಯಾದಂತ ಒಂದ ಮಾತ ಕೇಳಬಾರದಾ” ಎಂದು ಆಕ್ಷೇಪಿಸಿದ. ಅಲ್ಲಿನ ಸ್ಥಿತಿ ಗಮನಿಸಿದ. ಪೋಸ್ಟ್ ಮಾರ್ಟಂ ಬಳಿಕ ಶರೀರ ಸುತ್ತಲು ಬಟ್ಟೆ ಬೇಕಿತ್ತು; ಆದರೆ ಅವತ್ತು ಗಣೇಶ ಹಬ್ಬ. ಅಂಗಡಿ ಎಲ್ಲವೂ ಬಂದ್. ತಕ್ಷಣ ಬೈಕ್ ಹತ್ತಿ ಹೊರಟ ರಾಜಶೇಖರ, ಬಟ್ಟೆ ಮಳಿಗೆಯೊಂದರ ಮಾಲೀಕರ ಮನೆಗೆ ಹೋಗಿ, ಅವರನ್ನು ಕರೆತಂದು, ಅಂಗಡಿ ತೆರೆಸಿ, ಬಟ್ಟೆ ಖರೀದಿಸಿ ಆಸ್ಪತ್ರೆಗೆ ಬಂದು ವೈದ್ಯರ ಕೈಗೆ ಕೊಟ್ಟ. ಪೋಸ್ಟ್ ಮಾರ್ಟಂ ನಡೆಯಿತು. ರಾತ್ರಿ 10ರ ಸುಮಾರು ಎಲ್ಲ ಮುಗಿಸಿ, ಅಲ್ಲಿಂದ ಅಂತ್ಯಸಂಸ್ಕಾರಕ್ಕೆ ಹೋಗಬೇಕಿತ್ತು. ಮತ್ತೆ ಪ್ರತ್ಯಕ್ಷವಾದ ರಾಜಶೇಖರ, “ಇಗಾ ದೋಸ್ತ… ಇಲ್ಲಿ ನಾಲ್ಕು ಬೈಕ್ ಅದಾವ. ಎಲ್ಲಾ ನಿಮ್ದ ಅಂತ ತಿಳಕೋ” ಅಂತ ನಾಲ್ಕು ಸ್ನೇಹಿತರನ್ನು ನಮಗೆ ಒಪ್ಪಿಸಿ ಹೊರಟು ಹೋದ. ದೊಡ್ಡದೊಂದು ಅಘಾತಕ್ಕೆ ಸಿಲುಕಿ, ಏನೂ ತಿಳಿಯದಂಥ ಸ್ಥಿತಿಯಲ್ಲಿದ್ದ ನಮಗೆ ಆತ ಆಪತ್ಬಾಂಧವನಂತೆ ಗೋಚರಿಸಿದ್ದ.
ಕನ್ನಡದ ಸೇವೆ ಎಂದರೆ ಬರೀ ಕಥೆ, ಕವನ, ಲೇಖನ ಬರೆಯುವುದಲ್ಲ; ಭಾಷೆಯ ಉಳಿವಿಗಾಗಿ ನಡೆಯುವ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಅದೂ ಕನ್ನಡಮ್ಮನ ಸೇವೆಯೇ ಎಂಬುದನ್ನು ರಾಜಶೇಖರ ಅಂಗಡಿ ಸಾಧಿಸಿ ತೋರಿಸಿದ. ಸಾಹಿತ್ಯ ರಚನೆಯಷ್ಟೇ ಕನ್ನಡಪರ ಚಟುವಟಿಕೆ ಕೂಡ ಮಹತ್ವದ್ದು ಎಂಬುದನ್ನು ಸಾಬೀತುಪಡಿಸಿದ. ‘ರಾಜಶೇಖರ ಅಂಗಡಿ ಏನು ಬರೆದಿದ್ದಾನೆ’ ಎಂಬ ಮಾತನ್ನು ಆತನ ಕಾರ್ಯಾರಂಭದ ದಿನಗಳಲ್ಲಿ ಕೆಲವರು ಕೊಂಕುನುಡಿಗಳಲ್ಲಿ ಪ್ರಶ್ನಿಸಿದ್ದರು. ಬರೆಯುವುದಕ್ಕಿಂತ ಶ್ರೇಷ್ಠವೆನಿಸುವ ಕನ್ನಡಪರ ಕೆಲಸಗಳ ಸಂಘಟನೆಯನ್ನು ರಾಜಶೇಖರ ಮಾಡಿದ್ದಾನೆ. ಆತನ ಬರಹಗಳು ನಮ್ಮೆದುರು ಇಲ್ಲದಿರಬಹುದು; ಆದರೆ ಕೊಪ್ಪಳ ಜಿಲ್ಲೆಯಲ್ಲಿ ಕನ್ನಡದ ಸೊಲ್ಲು ಕೇಳಿಬಂದಾಗಲೆಲ್ಲ ರಾಜಶೇಖರನ ಹೆಸರು ಪ್ರಸ್ತಾಪವಾಗದೇ ಇರಲು ಹೇಗೆ ಸಾಧ್ಯ. ಅಷ್ಟರ ಮಟ್ಟಿಗೆ ಈ ನಾಡಿನಲ್ಲಿ ರಾಜಶೇಖರ ನಮ್ಮೆದುರು ಸದಾ ಇದ್ದೇ ಇರುತ್ತಾನೆ.

  • ಆನಂದತೀರ್ಥ ಪ್ಯಾಟಿ, ಕೊಪ್ಪಳ

ವಿಳಾಸ: ಟ್ರಿನಿಟಿ ಸ್ಕೂಲ್ ಹತ್ತಿರ, ಡಾ. ಸಿಂಪಿ ಲಿಂಗಣ್ಣ ರಸ್ತೆ, ಯೂರೋಪ್ ಟೇಲರ್ಸ್ ಹಿಂದೆ, ಕೊಪ್ಪಳ-583231
ಮೊ: 9448240676
-0-

Get real time updates directly on you device, subscribe now.

Comments are closed.

error: Content is protected !!