ಬರಪೀಡಿತ ಜಿಲ್ಲೆ ಘೋಷಿಸಲು ಆಗ್ರಹ : ಬಿಜೆಪಿ ಮೋರ್ಚಾ ರೈತ ಘಟಕದಿಂದ ಪ್ರತಿಭಟನೆ
ರಾಜ್ಯ ಸರಕಾರದ ನಡೆಗೆ ಕ್ಯಾವಟರ್, ನಾಯಕ್ ಅಸಮಾಧಾನ
![]()
-ಬರಪೀಡಿತ ಪ್ರದೇಶ ಘೋಷಿಸಲು ಆಗ್ರಹ*
*-ಜಿಲ್ಲಾ ಬಿಜೆಪಿ ಮೋರ್ಚಾ ರೈತ ಘಟಕದಿಂದ ಪ್ರತಿಭಟನೆ*
*-ಶಾಸಕ- ಸಚಿವರ ವಿರುದ್ಧ ಕಿಡಿ*
ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಕಾರಟಗಿ ಹಾಗೂ ಯಲಬುರ್ಗಾ ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದರೂ ಕ್ರಮ ಕೈಗೊಳ್ಳದರಾಜ್ಯ ಸರಕಾರದ ನಡೆ ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಅಸಮರ್ಪಕ ಮಳೆಯಿಂದ ಕೃಷಿಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿದ್ದರೂ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿಲ್ಲ. ಹೀಗಾಗಿ ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಮೊದಲು ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೈ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಚೇರಿಯ ಸಾಂಸ್ಥಿಕ ಸಿಬ್ಬಂದಿಗೆ ಮನವಿ ಸಲ್ಲಿಸಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಬಸವರಾಜ ಕ್ಯಾವಟರ್ ಮಾತನಾಡಿ, ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಅಗತ್ಯ ಪ್ರಮಾಣದ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರ ಜೀವನೋಪಾಯಕ್ಕೆ ತೊಂದರೆಯಾಗದಂತೆ ಉದ್ಯೋಗಾವಕಾಶ ಹೆಚ್ಚಿಸಬೇಕು. ಸರಕಾರ ಕೇವಲ ಕಚೇರಿ ಮಟ್ಟದ ವರದಿಗಳಿಗೆ ಸೀಮಿತವಾಗದೆ, ವಾಸ್ತವ ಪರಿಸ್ಥಿತಿಯನ್ನು ಅರಿಯಲು ಅಧಿಕಾರಿಗಳ ತಂಡಗಳನ್ನು ಗ್ರಾಮಗಳಿಗೆ ಕಳುಹಿಸಿ ಸಮಗ್ರ ಸಮೀಕ್ಷೆ ನಡೆಸಬೇಕು.
ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಜಿಲ್ಲೆಯ ಹಲವು ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಗಿ ಎದುರು ನೋಡುತ್ತಿರುವ ರೈತರು ಕೃಷಿ ಚಟುವಟಿಕೆಗಳಿಗೆ ಮಾಡಿರುವ ಸಾಲ ಹಾಗೂ ಹೂಡಿಕೆಯನ್ನು ಮರಳಿ ಪಡೆಯುವ ಆತಂಕದಲ್ಲಿದ್ದಾರೆ. ಕೆಲವೆಡೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು-ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ.
ಬರ ಪರಿಸ್ಥಿತಿಯಿಂದ ರೈತರ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಮುನ್ನ ಸರಕಾರ ಜಿಲ್ಲೆಯನ್ನು ಸಮಗ್ರವಾಗಿ ಪರಿಶೀಲಿಸಿ, ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಬೆಳೆ ನಷ್ಟದ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ ಅರ್ಹ ರೈತರಿಗೆ ಬೆಳೆ ಪರಿಹಾರ ನೀಡಬೇಕು.
ರೈತರಿಗೆ ಬೆಳೆ ವಿಮೆ, ಸಾಲ ಸೌಲಭ್ಯ ಹಾಗೂ ಇತರೆ ಸರಕಾರಿ ನೆರವು ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಾಸಕ- ಸಚಿವರ ನಡೆಗೆ ಆಕ್ರೋಶ: ಪ್ರತಿಭಟನೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಸಚಿವ ಶಿವರಾಜ್ ತಂಗಡಗಿ ವಿರುದ್ಧ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು.ಸಚಿವಗಿರಿಗೆ ಮೂರ್ನಾಲ್ಕು ತಿಂಗಳು ಕ್ಷೇತ್ರ ಬಿಟ್ಡು ಬೆಂಗಳೂರು, ದೆಹಲಿಯಲ್ಲಿ ಟೀಕಾಣಿ ಹೂಡುವ ಶಾಸಕರಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ರೈತರ ಕುರಿತು ಕಾಳಜಿಯಿಲ್ಲ. ಬರ ಪೀಡಿತ ಪ್ರದೇಶದ ಸ್ಥಿತಿಗತಿ ಅಧ್ಯಯನಕ್ಕಾಗಿ ಸಚಿವರ ನೇತೃತ್ವದ ಸಭೆ ಜರುಗಿದಾಗ ಭಾಗವಹಿಸದೇ ದೂರ ಉಳಿದರು. ಕನಿಷ್ಠ ಸಂಸದ ರಾಜಶೇಖರ ಹಿಟ್ನಾಳ್ ಕೂಡ ಭಾಗಿಯಾಗಲಿಲ್ಲ.
ಈ ರೀತಿ ಬೇಜವಾಬ್ದಾರಿತನ ತೋರಿದ್ದರಿಂದ ಬರ ಪೀಡಿತ ಪ್ರದೇಶಗಳ ಘೋಷಣೆಯಲ್ಲಿ ಕೊಪ್ಪಳ ಕೈ ತಪ್ಪಿದೆ ಎಂದು ಬಸವರಾಜ ಕ್ಯಾವಟರ್ ಹಾಗೂ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗಣೇಶ ಹೊರತಟ್ನಾಳ, ದೇವರಾಜ ಹಾಲಸಮುದ್ರ, ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಘಟಕಗಳ ಮುಖಂಡರು, ಅಮರೇಶ ಮುರುಳಿ, ವೀರೇಶ ಸಜ್ಜನ, ಪ್ರಭುರಾಜ್ ಪಾಟೀಲ್, ಚಂದ್ರಶೇಖರ್ ಹಲಗೇರಿ , ಉಮೇಶ ಕುದ್ರೆಕರ್, ರೈತ ಮೋರ್ಚಾದ ಅಧ್ಯಕ್ಷರಾದ ಅಶೋಕ್ ಗುಳದಳ್ಳಿ, ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಸದಸ್ಯರು, ರೈತ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.