ಸಾರ್ವಜನಿಕರು 90 ದಿನಗಳ ಮಧ್ಯಸ್ಥಿಕೆಯ ವಿಶೇಷ ಆಂದೋಲನದ ಸದುಪಯೋಗ ಪಡೆದುಕೊಳ್ಳಿ – ನ್ಯಾ. ಮಹಾಂತೇಶ ಎಸ್. ದರಗದ
ರಾಜಿ ಸಂಧಾನದ ಮೂಲಕ ರಾಜಿ ಆಗಬಹುದಾದ ಪ್ರಕರಣಗಳ ಇತ್ಯರ್ಥಕ್ಕಾಗಿ ಈಗಾಗಲೇ ಜುಲೈ 1 ರಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಹಮ್ಮಿಕೊಂಡಿರುವ 90 ದಿನಗಳ ಮಧ್ಯಸ್ಥಿಕೆಯ ವಿಶೇಷ ಆಂದೋಲನದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ ಹೇಳಿದರು.ಮಧ್ಯಸ್ಥಿಕೆಯು ರಾಜಿ ಸಂಧಾನದ ಮೂಲಕ ಕಡಿಮೆ ಅವಧಿಯಲ್ಲಿ ಶೀಘ್ರ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದರಿಂದ ಉಭಯ ಪಕ್ಷಗಾರರು ಸಮಯದ ಜೊತೆಗೆ ಹಣದ ಉಳಿತಾಯವನ್ನು ಮಾಡಬಹುದಾಗಿದೆ. ರಾಷ್ಟ್ರವ್ಯಾಪಿ ಮಧ್ಯಸ್ಥಿಕೆಯ ಕುರಿತು 90 ದಿನಗಳ ಕಾಲ ವಿಶೇಷ ಅಂದೋಲನದ ವ್ಯವಸ್ಥೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ವೋಚ್ಛ ನ್ಯಾಯಾಲಯವು ಈ ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಈ ಪ್ರಕ್ರಿಯೆಯ ಮೂಲಕ ಉಭಯ ಪಕ್ಷಗಾರರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ತಟಸ್ಥ ಹೊಂದಿದ ಮಧ್ಯಸ್ಥಿಕೆಗಾರರು ಮಧ್ಯಸ್ಥಿಕೆ ಮಾಡುವ ಮೂಲಕ ವಿವಾದವನ್ನು ಸೃಜನಾತ್ಮಕವಾಗಿ ಇತ್ಯರ್ಥ ಪಡಿಸಲು ಅನುಕೂಲವಾಗುತ್ತದೆ. ಮಧ್ಯಸ್ಥಿಕೆಯು ಸ್ವಪ್ರೇರಿತವಾದುದಲ್ಲದೇ ಗೌಪ್ಯವಾಗಿಯೂ ಇರುತ್ತದೆ ಮತ್ತು ಇದು ಪಾರದರ್ಶಕತೆಯಿಂದ ಕೂಡಿರುತ್ತದೆ. ಮಧ್ಯಸ್ಥಿಕೆಯಲ್ಲಿ ಕಡಿಮೆ ಕಾಲ ಮಿತಿಯಲ್ಲಿ ಆಪ್ತ ಸಮಾಲೋಚನೆ ಮೂಲಕ ಮಧ್ಯಸ್ಥಿಕೆ ನಡೆಯುವುದರಿಂದ ಅರ್ಥಪೂರ್ಣ ಚರ್ಚೆ ನಡೆದು ಪ್ರಕರಣವು ವ್ಯಾಜ್ಯ ಮುಕ್ತವಾಗಿ ಬಗೆಹರಿಯಲು ಸಹಾಯಕವಾಗುತ್ತದೆ ಎಂದರು.
ಮಧ್ಯಸ್ಥಿಕೆಯಲ್ಲಿ ಕೌಟುಂಬಿಕ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು, ವಿಚ್ಛೇದನ ಪ್ರಕರಣಗಳು, ಚೆಕ್ ಬೌನ್ಸ ಪ್ರಕರಣಗಳು ಬಗೆಹರಿಸಬಹುದಾಗಿದೆ. 90 ದಿನಗಳ ವಿಶೇಷ ಮಧ್ಯಸ್ಥಿಕೆಯು ಪ್ರತಿ ದಿನವು ನಡೆಯಲಿದ್ದು, ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಇದರಿಂದ ವಕೀಲರು ತಮ್ಮ ಕಕ್ಷಿಗಾರರ ಮನವೊಲಿಸುವ ಮೂಲಕ ಮಧ್ಯಸ್ಥಿಕೆಯ ವಿಶೇಷ ಆಂದೋಲನವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
*ಖಾಯಂ ಜನತಾ ನ್ಯಾಯಾಲಯ:* ಸಾರ್ವಜನಿಕ ಉಪಯುಕ್ತ ಸೇವೆ (Public Utility Services) ಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ವಿವಾದಗಳ ಅತಿ ಶೀಘ್ರ ಹಾಗೂ ಖರ್ಚಿಲ್ಲದ ತೀರ್ಮಾನಕ್ಕಾಗಿ ಖಾಯಂ ಜನತಾ ನ್ಯಾಯಾಲಯಗಳು (Permanent Lok Adalat) ವರವೆಂದೇ ಹೇಳಬಹುದು. 1987ರ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯಿದೆಯನ್ನು 2002ರಲ್ಲಿ ಕೇಂದ್ರ ಸರ್ಕಾರವು ತಿದ್ದುಪಡಿ ಮಾಡಿ, ವಿ.ಐ.ಎ ಅಧ್ಯಾಯವನ್ನು ಹೊಸದಾಗಿ ಸೇರಸುವುದರ ಮೂಲಕ ಖಾಯಂ ಜನತಾ ನ್ಯಾಯಾಲಯಗಳನ್ನು ಅಸ್ಥಿತ್ವಕ್ಕೆ ತಂದಿದೆ. 2007ರಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರು, ಬೆಳಗಾವಿ, ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಿದೆ ಎಂದರು.
Comments are closed.