ಸಂವಿಧಾನವನ್ನು ನಾವಿಂದು ರಕ್ಷಿಸಿಕೊಳ್ಳದಿದ್ದರೆ ಮುಂದಿನ ನಮ್ಮ ಪೀಳಿಗೆಯ ಭವಿಷ್ಯ ಕರಾಳವಾಗಲಿದೆ
ವಿಜಯಪುರ ನ. ೨೭-
ನಮ್ಮ ಸಂವಿಧಾನವನ್ನು ನಾವಿಂದು ರಕ್ಷಿಸಿಕೊಳ್ಳದಿದ್ದರೆ ಮುಂದಿನ ನಮ್ಮ ಪೀಳಿಗೆಯ ಭವಿಷ್ಯ ಕರಾಳವಾಗಲಿದೆ ಎಂದು ಬಹುಜನ ಚಳವಳಿಯ ಮುಖಂಡ ಕಲ್ಲಪ್ಪ ತೊರವಿ ಎಚ್ಚರಿಕೆ ನೀಡಿದರು.
ನಿನ್ನೆ ಸಂಜೆ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಬುದ್ಧವಿಹಾರ ನಿರ್ಮಾಣ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಸರಕಾರಿ ಸಂಸ್ಥೆಗಳೆಲ್ಲ ಖಾಸಗಿಯವ ಪಾಲಾಗುತ್ತಿವೆ. ಸರಕಾರಿ ವಲಯದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ನಮ್ಮ ಮಕ್ಕಳು ಉದ್ಯೋಗದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಈಗಲೇ ನಾವೆಲ್ಲ ಎಚ್ಚತ್ತುಕೊಳ್ಳದಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತದ ನಿರ್ಮಾಣ ನನಸಾಗಬೇಕಾದರೆ ಸಂವಿಧಾನವು ಸಂಪೂರ್ಣವಾಗಿ ಜಾರಿಯಾಗಬೇಕು. ಆದರೆ ಸಂವಿಧಾನವನ್ನು ಜಾರಿ ಮಾಡುವ ಸ್ಥಾನದಲ್ಲಿ ಮನುವಾದಿಗಳು ಕುಳಿತಿದ್ದಾರೆ. ಈ ಸಂವಿಧಾನವೇ ಬೇಡ ಎನ್ನುವವರ ಕೈಯಲ್ಲಿ ಅಧಿಕಾರವಿದೆ. ಶೋಷಿತ ವರ್ಗಗಳು ಒಂದಾಗಿ ರಾಜ್ಯಾಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಮನುವಾದಿ ಶಕ್ತಿಗಳು ಒಂದಾಗುತ್ತಿದ್ದಾರೆ. ಆದರೆ ಜಾತ್ಯಾತೀತ ಶಕ್ತಿಗಳು ಹರಿದು ಹಂಚಿಹೋಗುತ್ತಿವೆ. ಜಾತಿಧರ್ಮದ ಹೆಸರಿನಲ್ಲಿ ಸಮಾಜವನ್ನು ಇಬ್ಭಾಗ ಮಾಡಲಾಗುತ್ತಿದೆ. ಸಮಾಜದ ಒಂದು ವರ್ಗವನ್ನು ಮೂರನೆಯ ದರ್ಜೆಗೆ ಇಳಿಸುವ ಹುನ್ನಾರ ನಡೆಯುತ್ತಿದೆ. ದೇಶದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕಾರಣವಾಗಿವೆ. ಈಗಲೇ ಈ ಸ್ಥಿತಿಯನ್ನು ಸರಿಪಡಿಸದೇ ಹೋದರೆ ದೇಶವು ಇನ್ನಷ್ಟು ಅಧೋಗತಿಯತ್ತ ಸಾಗಲಿದೆ. ಸಮಾನತೆ ಮತ್ತು ಸೌಹಾರ್ದತೆಯನ್ನು ಬಯಸುವವರೆಲ್ಲ ಒಂದೇ ವೇದಿಕೆಗೆ ಬಂದು ಸಂವಿಧಾನ ಮತ್ತು ದೇಶವನ್ನು ಉಳಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬುದ್ಧ ವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಯಡಹಳ್ಳಿ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಶ್ರೇಷ್ಠವಾದ ಸಂವಿಧಾನವನ್ನು ನೀಡಿದ್ದಾರೆ. ಹಲವು ಧರ್ಮ, ಜಾತಿ, ಸಂಸ್ಕೃತಿ, ಭಾಷೆಗಳನ್ನು ಒಗ್ಗೂಡಿಸುವ ಶಕ್ತಿ ಸಂವಿಧಾನಕ್ಕೆ ಮಾತ್ರವಿದೆ. ನಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಸಂವಿಧಾನ ರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು ಎಂದರು.
ಬುದ್ಧವAದನೆಯೊAದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನ್ಯಾಯವಾದಿ ಕೆ.ಎಂ. ಕೂಡಲಗಿ ಅವರು ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ಬುದ್ಧವಿಹಾರ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು ಸ್ವಾಗತಿಸಿದರು. ಉಪಾಧ್ಯಕ್ಷ ಸಾಬು ಚಲವಾದಿ ವಂದಿಸಿದರು. ಪ್ರತಾಪ ಚಿಕ್ಕಲಕಿ ನಿರೂಪಿಸಿದರು.
ಶಶಿಕಾಂತ ಹೊನವಾಡಕರ, ಚಿದಾನಂದ ನಿಂಬಾಳ, ದಶವಂತ ಗುನ್ನಾಪುರ, ಅನಿಲ ಹೊಸಮನಿ, ಆನಂದ ಔದಿ, ರಾಜೇಶ ತೊರವಿ, ಕೆ.ಎಂ. ಶಿವಶರಣ, ಎಂ.ಬಿ. ಹಳ್ಳದಮನಿ, ರಮೇಶ ಹಳ್ಳಿ, ಚೆನ್ನು ಕಟ್ಟಿಮನಿ, ಮನೋಹರ ಇನಾಮದಾರ, ಯಶೋಧಾ ಅಥರ್ಗಾ, ವಿಜಯಲಕ್ಷಿö್ಮ ಅಥರ್ಗಾ, ಸುಭಾಸ ಹೊನ್ನಕಂಟಿ, ರಮೇಶ ಯಡಹಳ್ಳಿ, ಮತ್ತಿತರರು ಉಪಸ್ಥಿತರಿದ್ದರು.
Comments are closed.