ಫ್ಯಾಕ್ಟರಿ ವಿರುದ್ಧ ಹೋರಾಟ ಹಳಿ ತಪ್ಪದಂತೆ ನೋಡಿಕೊಳ್ಳಿ: ಸಿವಿಸಿ ಕಳಕಳಿಯ ಮನವಿ

Get real time updates directly on you device, subscribe now.

ಕೊಪ್ಪಳ: ಬಲ್ದೋಟ ಕಾರ್ಖಾನೆಯ ವಿರುದ್ಧ ನಡೆಯುತ್ತಿರುವ ಹೋರಾಟ
ಹಳಿ ತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಬಂಧಪಟ್ಟವರ ಮೇಲಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದ್ದಾರೆ.

“ಶನಿವಾರ ಪ್ರತಿಭಟನಾ ಕಾರ್ಯಕ್ರಮದ ರೀತಿ, ಅಲ್ಲಿ ಮಾತನಾಡಿದ ಜನರ ನಿಲುವುಗಳು, ಪ್ರಸ್ತುತ ಪಡಿಸಲಾದ ವಿಚಾರಗಳು ಹಾಗೂ ಅದು ನೀಡಿದ ಸಂದೇಶ ಒಂದು ವರ್ಷದ ಹೋರಾಟದ ಹಾದಿಯನ್ನೇ ಪ್ರಶ್ನಿಸುವಂತಿವೆ. ಹೋರಾಟದ ಮೂಲ ಉದ್ದೇಶವನ್ನು ಬದಿಗಿರಿಸಿ ಕೆಲವೊಬ್ಬರಿಗೆ ಅನುಕೂಲ ಮಾಡಿಕೊಳ್ಳುವ ಅಜೆಂಡಾ ಇರುವಂತೆ ತೋರಿದೆ. ಇಂತಹ ಅಪಾಯದ ಕುರಿತು ಸಂಘಟಕರು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಒಂದು ಹಿತಾಸಕ್ತಿಯ ಪರವಾಗಿ ಕೆಲಸ ಮಾಡಲು ಹೊರಟರೆ ಆಗುವ ದುರಂತಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು ಸಾಧ್ಯವಿಲ್ಲ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಂತಹ ಕೆಲಸಗಳನ್ನು ಮಾಡಬೇಕಾದ ಜವಾಬ್ದಾರಿ ಜನಪ್ರತಿನಿಧಿಗಳದ್ದು. ಈ ವ್ಯವಸ್ಥೆಯಲ್ಲಿ ಅವರು ಮಾತ್ರ ಈ ಸಮಸ್ಯೆ ಬಗೆಹರಿಸಲು ಸಾಧ್ಯ. ಆದ್ದರಿಂದ ಈ ಕೆಲಸವನ್ನು ಅವರೇ ಮಾಡಬೇಕು ಎಂದು ಗವಿಶ್ರೀ ಅವರು ಒಂದು ವರ್ಷದ ಹಿಂದೆಯೇ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಂದು ಸಾಮೂಹಿಕವಾಗಿ ಕೈಗೊಂಡ ನಿರ್ಧಾರವನ್ನು ಈಡೇರಿಸಲು ಇಲ್ಲಿಯ ತನಕ ಸ್ಥಳೀಯ ಶಾಸಕ ಮತ್ತು ಸಂಸದ ಏನು ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸಬೇಕಿತ್ತು. ಜವಾಬ್ದಾರಿ ನಿಭಾಯಿಸಬೇಕಾದವರನ್ನು ಬಿಟ್ಟು ಜವಾಬ್ದಾರಿ ನೆನಪಿಸಿದವರನ್ನು ಗುರಿಯಾಗಿಸಿಕೊಂಡಿರುವುದು ಎಷ್ಟು ಸರಿ ಎಂಬುದನ್ನು ಸಂಘಟಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗಿಂತಲೂ ಕಳೆದ ಮೂರು ವರ್ಷಗಳಲ್ಲಿ ಸಮಸ್ಯೆಯ ಕುರಿತು ವಿಧಾನ ಪರಿಷತ್ ನಲ್ಲಿ ಶ್ರೀಮತಿ ಹೇಮಲತಾ ನಾಯಕ ಅವರು ಹೆಚ್ಚು ಸಶಕ್ತವಾಗಿ ಸರಕಾರದ ಗಮನ ಸೆಳೆದಿದ್ದಾರೆ. ಅವಮಾನಕರವಾಗಿ ವೇದಿಕೆಯಿಂದ ಅವರು ಏಕೆ ನಿರ್ಗಮಿಸುವಂತಾಯಿತು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಹೋರಾಟ ಯಾವುದೋ ಪಕ್ಷ, ಸಿದ್ಧಾಂತ ಅಥವಾ ಹಿತಾಸಕ್ತಿಯ ಒತ್ತಡಕ್ಕೆ ಮಣಿದಂತೆ ತೋರುತ್ತದೆ. ಇಂತಹ ಬೆಳವಣಿಯಿಂದ ಹೋರಾಟ ಬದ್ಧತೆ ಮತ್ತು ಮಹತ್ವವನ್ನು ಕಳೆದುಕೊಳ್ಳಬಹುದು,” ಎಂದು ಎಚ್ಚರಿಸಿದ್ದಾರೆ.

ಇಲ್ಲಿಯ ತನಕ ಇಲ್ಲಿಯ ಶಾಸಕರು ಹಾಗೂ ಸಂಸದರು ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಯನ್ನು ಹೋರಾಟಗಾರರು ವೇದಿಕೆಯ ಮೇಲೆ ಗಟ್ಟಿಯಾಗಿ ಕೇಳಬೇಕಿತ್ತು. ಕಳೆದ ಮೂರು ವರ್ಷಗಳಲ್ಲಿ ಶಾಸಕರು ಮತ್ತು ಸಂಸದರು ಈ ಸಮಸ್ಯೆ ಕುರಿತು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಎಷ್ಟು ಸಲ ಪ್ರಸ್ತಾಪ ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸಬೇಕಿತ್ತು.

ಸಮಸ್ಯೆಯ ಕುರಿತು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಉನ್ನತ ತನಿಖೆ ಆಗುವಂತೆ ನಮ್ಮ ಪಕ್ಷ ನೋಡಿಕೊಂಡಿತು. ವಿಸ್ತರಣೆಯಾಗುವ ಮುಕುಂದ ಸುಮಿ ಕಾರ್ಖಾನೆಯ ವಿರುದ್ಧ ದೊಡ್ಡ ಪ್ರಮಾಣದಲ್ಲಿ ನಾವು ಧ್ವನಿಯೆತ್ತಿದೆವು. ಈ ವಿಷಯ ತಮಗೆ ತಿಳಿದೇ ಇಲ್ಲ ಹಾಗೂ ತಮ್ಮನ್ನು ಯಾರು ಆಹ್ವಾನಿಸಿಲ್ಲ ಎಂದು ಸಾರ್ವಜನಿಕವಾಗಿ ಘಂಟಾಘೋಷವಾಗಿ ಶಾಸಕರು ಹೇಳಿದಾಗಲೂ ಹೋರಾಟಗಾರರು ಮೌನಕ್ಕೆ ಶರಣಾಗಿದ್ದು ಅನೇಕ ಸಂಶಯಗಳಿಗೆ ಈಡುಮಾಡಿದೆ.
ಒಂದು ಪಕ್ಷ ಹಾಗೂ ಸಿದ್ಧಾಂತದ ಪರವಾಗಿ ಈ ಹೋರಾಟ ನಡೆಯುತ್ತದೆ ಎಂಬ ಸಂಶಯ ಜನಸಾಮಾನ್ಯರಲ್ಲಿ ಬಲವಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಏಕೆ ನಿಭಾಯಿಸಲಿಲ್ಲ ಎಂಬುದರ ಕುರಿತು ಹೋರಾಟ ನಡೆಯಬೇಕು. ಸಮಸ್ಯೆ ನಿವಾರಣೆಗೆ ಅವರ ಮೇಲೆ ಒತ್ತಡ ಹೇರಬೇಕು. ವಿಧಾನಸಭೆಯ ಕಲಾಪಗಳಲ್ಲಿ ಸ್ವಾಮೀಜಿಗಳಿಗಾಗಲಿ, ನಮಗಾಗಲಿ ಅಥವಾ ಹೋರಾಟಗಾರರಿಗಾಗಲಿ ಮಾತನಾಡಲು ಅವಕಾಶವಿಲ್ಲ ಎಂಬ ಸತ್ಯ ಗೊತ್ತಾಗಬೇಕು ಎಂದು ಹೇಳಿದ್ದಾರೆ.

ಕಾರ್ಖಾನೆ ವಿರೋಧಿಸುವುದಕ್ಕಿಂತಲೂ ಈ ಸಮಸ್ಯೆ ಬಗ್ಗೆ ಹರಿಸಲು ವಿಫಲಗೊಂಡಿರುವ ಸ್ಥಳೀಯ ಜನಪ್ರತಿನಿಧಿಗಳ ನಿಷ್ಕ್ರಿಯತೆಯ ವಿರುದ್ಧ ಸಂಘಟಕರು ಹೋರಾಟ ಮಾಡಲಿ. ಹೋರಾಟವನ್ನು ರಾಜಕಾರಣಗೊಳಿಸುವುದು, ಹೋರಾಟಗಾರರನ್ನು ಸಂಶಯಿಸುವುದು ತಮ್ಮ ಉದ್ದೇಶವಲ್ಲ. ಹೋರಾಟ ಹಳಿ ತಪ್ಪದಿರಲಿ ಎಂಬುದು ಮಾತ್ರ ತಮ್ಮ ಕಳಕಳಿ. ಇದು ಹೋರಾಟಗಾರರು ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ ಎಂದು ಸ್ಪಷ್ಟಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!