ಕನಕಗಿರಿ ಪಿಎಂ ಶ್ರೀ ಆದರ್ಶ ವಿದ್ಯಾಲಯಕ್ಕೆ ಎಸಿ ಮೆಹಬೂಬ್ ಜಿಲಾನಿ ಭೇಟಿ

Get real time updates directly on you device, subscribe now.

ವಿದ್ಯಾರ್ಥಿಗಳ ವಿಜ್ಞಾನ, ಗಣಿತ ಮಾದರಿಗಳ ವೀಕ್ಷಣೆ – ಶೈಕ್ಷಣಿಕ ಚಟುವಟಿಕೆಗಳಿಗೆ ಮೆಚ್ಚುಗೆ

ಕನಕಗಿರಿ: ಪಟ್ಟಣದ ಪಿಎಂ ಶ್ರೀ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಕೊಪ್ಪಳದ ಸಹಾಯಕ ಆಯುಕ್ತರಾದ ಮೆಹಬೂಬ್ ಜಿಲಾನಿ, ಕನಕಗಿರಿಯ ತಹಶೀಲ್ದಾರರಾದ ಚಂದ್ರಶೇಖರ್ ಗಾಳಿ ಹಾಗೂ ಶಿಕ್ಷಣ ಇಲಾಖೆಯ ಪಾಟೀಲ್ ಸರ್ ಅವರು ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಗೆ ಆಗಮಿಸಿದ ಗಣ್ಯರನ್ನು ಮುಖ್ಯೋಪಾಧ್ಯಾಯರಾದ ಸುರೇಶ್ ಅವರು ಹೂಗುಚ್ಛಗಳನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ವಿಜ್ಞಾನ ಮತ್ತು ಗಣಿತ ವಿಷಯಗಳ ವಿವಿಧ ಮಾದರಿಗಳನ್ನು ಗಣ್ಯರು ವೀಕ್ಷಿಸಿದರು. ವಿದ್ಯಾರ್ಥಿಗಳು ತಮ್ಮ ಮಾದರಿಗಳ ಕಾರ್ಯವೈಖರಿ ಹಾಗೂ ವೈಜ್ಞಾನಿಕ ಪರಿಕಲ್ಪನೆಗಳನ್ನು ವಿವರಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದರು.

ಬಳಿಕ ಶಾಲೆಯ ಬ್ಯಾಂಡ್ ಸೆಟ್ ತಂಡವು ಗೌರವಪೂರ್ವಕ ಸೆಲ್ಯೂಟ್ ಮೂಲಕ ಗಣ್ಯರನ್ನು ಸ್ವಾಗತಿಸಿ ಕಾರ್ಯಾಲಯಕ್ಕೆ ಬರಮಾಡಿಕೊಂಡಿತು. ಅಧಿಕಾರಿಗಳು ಶಾಲೆಯ ಎಲ್ಲಾ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಗಳಿಸುವಂತೆ ಹುರಿದುಂಬಿಸಿದರು.

ಶಾಲೆಯ ಸ್ವಚ್ಛ, ಸುಂದರ ಹಾಗೂ ಕಲಿಕೆಗೆ ಪೂರಕವಾದ ವಾತಾವರಣವನ್ನು ಕಂಡು ಸಹಾಯಕ ಆಯುಕ್ತರಾದ ಮೆಹಬೂಬ್ ಜಿಲಾನಿ ಅವರು ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರೊಂದಿಗೆ ಸಂವಾದ ನಡೆಸಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಹೊನ್ನೂರ್ ಸಾಬ್, ಸದಸ್ಯರಾದ ವೀರೇಶ್ ತೆಗ್ಗಿನಮನಿ, ಮುಖ್ಯ ಗುರುಗಳು ಸುರೇಶ್. ಶಿಕ್ಷಕರಾದ ಶಶಿಭೂಷಣ್ ರಂಗನಾಥ್, ಶ್ರೀಮತಿ ಶಿರಿನ್, ಶ್ರೀಮತಿ ಶಾರದಾ ಆರ್. ವಿಶ್ವನಾಥ್, ಪಾಂಡುರಂಗ ಜಾಲಿ, ಮಹೇಶ್ ಮರಾಠಿ, ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ ಶ್ರೀವಾಣಿ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅಧಿಕಾರಿಗಳ ಈ ಭೇಟಿಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದ್ದು, ಶಾಲೆಯ ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ಪ್ರೇರಣೆ ನೀಡಿತು.

Get real time updates directly on you device, subscribe now.

Comments are closed.

error: Content is protected !!