ವಿಧಾನಸಭಾ ಚುನಾವಣೆಯ ಗೆಲುವಿನ ಮೊದಲ ಹೆಜ್ಜೆ: ಸಿವಿಸಿ

Get real time updates directly on you device, subscribe now.

ಕೊಪ್ಪಳ: ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದಿರುವ ದ್ವೈವಾರ್ಷಿಕ ಚುನಾವಣೆಯ ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಒಕ್ಕೂಟ ಜಯಗಳಿಸಿರುವುದು ಅದಕ್ಷ ಕಾಂಗ್ರೆಸ್ ಸರಕಾರದ ಪತನದ ಆರಂಭ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದ್ದಾರೆ.

“ಶಶೀಲ್ ನಮೋಶಿ, ಎಸ್ ವಿ ಸಂಕನೂರ, ಎ ಪಿ ರಂಗನಾಥ್ ಹಾಗೂ ಕೆ ಎಂ ಸುರೇಶ್ ಅವರ ಗೆಲುವು 2028 ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ ಒಕ್ಕೂಟದ ಗೆಲುವಿನ ಮೊದಲ ಹೆಜ್ಜೆ. ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸರಕಾರದ ಶೂನ್ಯ ಸಂಪಾದನೆ ಜನರಲ್ಲಿ ಮಡುಗಟ್ಟಿರುವ ಆಡಳಿತ ವಿರೋಧಅಲೆಯ ಸೂಚನೆ,” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿತ್ತು. ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿತ್ತು. ಅವೈಜ್ಞಾನಿಕ ಯೋಜನೆಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಕರ್ನಾಟಕ ದಿವಾಳಿ ಅಂಚಿನಲ್ಲಿ ನಿಂತಿದೆ. ಕೆ ಪಿ ಎಸ್ ಸಿ ನೇಮಕಾತಿ ಹಗರಣ, ಸ್ಟಿಂಗ್ ಆಪರೇಷನ್ ಹಾಗೂ ಸಿದ್ದರಾಮಯ್ಯ ಅವರನ್ನು ಅವಮಾನಕರವಾಗಿ ಅಧಿಕಾರದಿಂದ ಕೆಳಗಿಳಿಸಿದ್ದಕ್ಕಾಗಿ ಶಿಕ್ಷಕರು ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

“ನಮೋಶಿಯವರ ಗೆಲುವು ಖಚಿತ ಎಂದು ನಾನು ಮೊದಲೇ ಹೇಳಿದ್ದೆ. ಅದು ನಿಜವಾಗಿದೆ. ಕೊಪ್ಪಳ ಕ್ಷೇತ್ರದಲ್ಲಿ ವ್ಯಾಪಕವಾದ ಆಡಳಿತ ವಿರೋಧಿ ಅಲೆ ಇದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದ ಸೋಲು ಖಚಿತ. ನನ್ನ ಈ ಭವಿಷ್ಯ ವಾಣಿಯೂ ನಿಜವಾಗಲಿದೆ,” ಎಂದು ಅವರು ಹೇಳಿದ್ದಾರೆ.

ಎನ್ ಡಿ ಎ ಒಕ್ಕೂಟದ ಅಭ್ಯರ್ಥಿಗಳ ಪರವಾಗಿ ಮತದಾನ ಮಾಡಿದ ಎಲ್ಲಾ ಮತದಾರರಿಗೆ ಧನ್ಯವಾದಗಳು ಹಾಗೂ ಪರಿಷತ್ತ್ ಗೆ ಆಯ್ಕೆಯಾದ ನಾಲ್ಕು ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!