ಕೆರೆಗಳಿಗೆ ನೀರು ತುಂಬಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್, ಸ್ಥಳೀಯ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಕೃಷ್ಣಾ ಬಿ ಸ್ಕೀಮ್‌ಗೆ 15 ದಿನಗಳ ಗಡುವು
ಕೊಪ್ಪಳ ಅ,18: ಕೃಷ್ಣಾ ಬಿ ಸ್ಕೀಮ್ ಯೋಜನೆಯಡಿ ಇರಕಲ್ಲಗಡಾ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತಕ್ಷಣ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ, ಈ ಭಾಗದ ರೈತರು ಸರ್ಕಾರದ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ್ದಾರೆ. ರೈತರಿಗೆ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿರುವ ರೈತರು, ಅಷ್ಟರೊಳಗೆ ಬೇಡಿಕೆ ಈಡೇರದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತರು ಹಾಗೂ ರೈತ ಮುಖಂಡರಾದ ಅಲ್ಲಾಭಕ್ಷಿ ಚಳ್ಳಾರಿ,ಹಾಗೂ ಇರಕಲ್ಲಗಡಾ ಹೋಬಳಿಯ ರೈತರ ಬಹುದಿನಗಳ ನೀರಾವರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೃಷ್ಣಾ ಬಿ ಸ್ಕೀಮ್ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಸರ್ಕಾರ ತಕ್ಷಣ ಚಾಲನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆರೆಗಳಿಗೆ ನೀರು ಹರಿದರೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಅಂತರ್ಜಲ ಮಟ್ಟ ಸುಧಾರಿಸಿ, ರೈತರ ಬದುಕಿಗೆ ಆಸರೆಯಾಗಲಿದೆ. ಆದರೆ, ರೈತರ ಪ್ರಮುಖ ಬೇಡಿಕೆಗೆ ಸ್ಪಂದನೆ ದೊರೆಯದಿರುವುದು ಈ ಭಾಗದ ಅನ್ನದಾತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಶಾಸಕರು ರೈತರ ಪರ ನಿಲ್ಲಲಿ
ಸ್ಥಳೀಯ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಿ, ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತಬೇಕು. ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ರೈತರ ಹಿತ ಕಾಪಾಡಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಸ್ಪಂದಿಸದಿದ್ದರೆ ಹೆದ್ದಾರಿ ಬಂದ್, ಚುನಾವಣೆ ಬಹಿಷ್ಕಾರ!
ಸರ್ಕಾರ ನಿಗದಿತ 15 ದಿನಗಳ ಗಡುವಿನೊಳಗೆ ಬೇಡಿಕೆ ಈಡೇರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಥಾ ನಡೆಸಿ, ಹೆದ್ದಾರಿ ಬಂದ್ ಮಾಡುವುದಾಗಿ ರೈತರು ಎಚ್ಚರಿಸಿದ್ದಾರೆ. ಅಲ್ಲದೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸುವ ನಿರ್ಧಾರವನ್ನೂ ಪ್ರಕಟಿಸಿದ್ದಾರೆ.
ಸರ್ಕಾರಕ್ಕೆ ರೈತರ ಸ್ಪಷ್ಟ ಸಂದೇಶ
ರೈತರ ನೀರಾವರಿ ಸಮಸ್ಯೆ ಇತ್ಯರ್ಥಪಡಿಸುವುದು ಸರ್ಕಾರದ ಆದ್ಯತೆಯಾಗಬೇಕು. ಕೇವಲ ಭರವಸೆಗಳಿಗೆ ಸೀಮಿತವಾಗದೆ, ಕೃಷ್ಣಾ ಬಿ ಸ್ಕೀಮ್ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಕಾರ್ಯರೂಪದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂಬ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ.
ರೈತರ ತಾಳ್ಮೆ ಪರೀಕ್ಷಿಸಬೇಡಿ: ಅಲ್ಲಾಭಕ್ಷಿ ಚಳ್ಳಾರಿ ಎಚ್ಚರಿಕೆ!
ಇರಕಲ್ಲಗಡಾ: ಕೃಷ್ಣಾ ಬಿ ಸ್ಕೀಮ್ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಬೇಡಿಕೆಯನ್ನು ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು. ಸ್ಥಳೀಯ ಶಾಸಕರು ರೈತರ ಧ್ವನಿಯಾಗಿ ಸರ್ಕಾರದ ಗಮನ ಸೆಳೆದು, ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರೈತರ ಬದುಕು ಹಸನಾಗಬೇಕಾದರೆ ನೀರಾವರಿ ಸೌಲಭ್ಯ ಅನಿವಾರ್ಯ. 15 ದಿನಗಳ ಗಡುವಿನೊಳಗೆ ಸ್ಪಂದಿಸದಿದ್ದರೆ ರೈತರ ಆಕ್ರೋಶ ಹೋರಾಟವಾಗಿ ಸ್ಫೋಟಗೊಳ್ಳಲಿದೆ ಎಂದು ರೈತ ಮುಖಂಡ ಅಲ್ಲಾಭಕ್ಷಿ ಚಳ್ಳಾರಿ ಎಚ್ಚರಿಸಿದ್ದಾರೆ.


Comments are closed.