ಶೌಚಾಲಯದ ಅಗತ್ಯತೆ ಕುರಿತು ಪ್ರೇರಣೆ ನೀಡಿ- ಆರ್. ರಾಮಚಂದ್ರನ್

ಕೊಪ್ಪಳ – ವೈಯಕ್ತಿಕ ಶೌಚಾಲಯಗಳು ಪ್ರತಿಯೊಂದು ಕುಟುಂಬಕ್ಕೆ ಎಷ್ಟು ಅಗತ್ಯ ಹಾಗೂ ಅದರ ಮಹತ್ವ ಕುರಿತು ಪ್ರತಿಯೊಂದು ಗ್ರಾಮಗಳ ಶೌಚಾಲಯ ರಹಿತ ಕುಟುಂಬಗಳಿಗೆ ಮನವರಿಕೆ ಮಾಡಿಕೊಟ್ಟು, ಶೌಚಾಲಯ ಕಟ್ಟಿಸಲು ಪ್ರೇರಣೆ ನೀಡುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಕರೆ ನೀಡಿದರು.

ಜಿಲ್ಲಾ ಪಂಚಾಯತಿ, ಯುನಿಸೆಫ್ ಹಾಗೂ ದೆಹಲಿಯ ಫೀಡ್ ಬ್ಯಾಕ್ ಫೌಂಡೇಷನ್ ಸಹಯೋಗದಲ್ಲಿ ಕೊಪ್ಪಳ, ಯಾದಗಿರಿ ಮತ್ತು ದಾವಣಗೆರೆ ಜಿಲ್ಲೆಯ ಪಿಡಿಓಗಳು ಹಾಗೂ ಪ್ರೇರೇಪಕರಿಗಾಗಿ ತಾಲೂಕಿನ ಟಣಕನಕಲ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ ಐದು ದಿನಗಳ ಸಮುದಾಯ ಆಧಾರಿತ ಸಂಪೂರ್ಣ ಸ್ವಚ್ಛತೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  ಪ್ರತಿಯೊಂದು  ಕುಟುಂಬಕ್ಕೂ ಶೌಚಾಲಯ ಎಷ್ಟು ಮಹತ್ವದ್ದು ಹಾಗೂ ಅದರ ಅಗತ್ಯತೆಯ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.  ಕೊಪ್ಪಳ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗುತ್ತಿದ್ದರೂ, ನಿರೀಕ್ಷಿತ ಯಶಸ್ಸು ಇನ್ನೂ ದೊರಕಬೇಕಿದೆ.  ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು, ಎಲ್ಲ ಕುಟುಂಬಗಳೂ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಂಡು, ಅದನ್ನು ಬಳಸುವ ಕಾರ್ಯ ಆಗಬೇಕಿದೆ.   ಗ್ರಾಮ ಪಂಚಾಯತಿಗಳಲ್ಲಿ ಶೌಚಾಲಯ ಜಾಗೃತಿಗಾಗಿ ನೇಮಕಗೊಂಡಿರುವ ಪ್ರೇರೇಪಕರು ಈ ನಿಟ್ಟಿನಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಬೇಕು.  ಕೊಪ್ಪಳ ಜಿಲ್ಲೆಯಷ್ಟೇ ಅಲ್ಲ ರಾಜ್ಯದ ಎಲ್ಲ ಜಿಲ್ಲೆಗಳು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರ ಶ್ರಮ ಅಗತ್ಯವಿದೆ.  ಈ ತರಬೇತಿಯ ಸದುಪಯೋಗ ಪಡೆದುಕೊಂಡು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಪಣತೊಡಣ.  ಹಿಂದಿನ ಅವಧಿಯಲ್ಲಿ ಜಿ.ಪಂ. ಸಿಇಓ ಆಗಿದ್ದ ಕೃಷ್ಣ ಉದಪುಡಿ ಯವರು ಮಾಡಿದ ಸಾಧನೆಯನ್ನು ಸ್ಮರಿಸಿದ ಅವರು,  ಅವರು ಹಾಕಿಕೊಟ್ಟ ಮಾರ್ಗದಲ್ಲಿ ಉತ್ತಮ ಪ್ರಗತಿ ಸಾಧಿಸುವುದರತ್ತ ಗಮನಹರಿಸೊಣ. ತರಬೇತಿಯಲ್ಲಿ  ಭಾಗಿಯಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪ್ರೇರೆಪಕರು ಪೀಡ್‌ಬ್ಯಾಕ್ ಸಂಸ್ಥೆಯವರು ನೀಡುವ ಯೋಜನೆಯ ಉಪಯೋಗವನ್ನು ಪಡೆದು ತಮ್ಮ ಗ್ರಾಮ/ಗ್ರಾಮ ಪಂಚಾಯತ್‌ಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಬೇಕು ಮತ್ತು ಇತರೆ ಗ್ರಾಮ ಪಂಚಾಯತ್‌ಗಳಲ್ಲಿ ಸಹ ಪ್ರೇರೆಪಿಸಿ ಸಹಕರಿಸಬೇಕು. ಆಗ ಕೊಪ್ಪಳ ಜಿಲ್ಲೆಯನ್ನು ಶೀಘ್ರವಾಗಿ ಬಯಲು ಬಹಿರ್ದೆಸೆ ಮಾಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಹೇಳಿದರು.   ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಯುನಿಸೆಫ್‌ನ ರಾಜ್ಯ ಸಮಾಲೋಚಕ ಕೃಷ್ಣನ್, ತಾ.ಪಂ. ಇಒ ಕೃಷ್ಣಮೂರ್ತಿ, ಫೀಡ್‌ಬ್ಯಾಕ್ ಫೌಂಡೇಷನ್ ಸಂಸ್ಥೆಯ ಜ್ಯೋತಿ ಪ್ರಕಾಶ, ಕಿರಣ ಕುಲಕರ್ಣಿ,ಶಿವಕುಮಾರ ಶರ್ಮ, ಅಮಿತಿ, ಲಕನ್, ಅಪೇಕ್ಷಾ ಮುಂತಾದವರು ಉಪಸ್ಥಿತರಿದ್ದರು.  ತರಬೇತಿಯು ಅ. ೨೩ ರವರೆಗೆ ಟಣಕನಕಲ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಲಿದೆ.

Related posts

Leave a Comment