ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಶೂನ್ಯಕ್ಕೆ ತನ್ನಿ- ಕರಡಿ ಸಂಗಣ್ಣ

????????????????????????????????????

 ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳನ್ನು ಪುನಃ ಶಾಲೆಗೆ ಕರೆ ತರಬೇಕು. ಈ ಮೂಲಕ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಶೂನ್ಯಕ್ಕೆ ತರಬೇಕು ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ೦೧ ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡ ಸಮೀಕ್ಷೆಯನ್ವಯ ೧೪೮ ಗಂಡು ಹಾಗೂ ೧೫೭- ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು ೩೦೫ ಮಕ್ಕಳು ಶಾಲೆಯಿಂದ ಹೊರಗುಳಿದ ಮಕ್ಕಳಿದ್ದು, ಈ ಪೈಕಿ ೧೧೦ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲಾಗಿದ್ದು, ಇನ್ನು ೧೯೫ ಮಕ್ಕಳನ್ನು ದಾಖಲಿಸುವ ಕಾರ್ಯ ಆಗುವುದು ಬಾಕಿ ಇದೆ ಎಂದು ಸರ್ವ ಶಿಕ್ಷಣ ಅಭಿಯಾನ ಉಪ ಸಮನ್ವಯಾಧಿಕಾರಿ ವೆಂಕಟೇಶ್ ಅವರು ಸಭೆಗೆ ವಿವರಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಕರಡಿ ಸಂಗಣ್ಣ ಅವರು, ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಾಗಿ ಕಾಯ್ದೆ ಜಾರಿಗೊಂಡಿದ್ದರೂ, ಜಿಲ್ಲೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿಯಿಂದಾಗಿ ಇನ್ನೂ ಮಕ್ಕಳು ಶಾಲೆಯಿಂದ ಹೊರಗುಳಿಯುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು, ಎಲ್ಲ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಸರಿಯಾದ ಕಾರ್ಯಕ್ರಮ ಯೋಜಿಸಿ ಎಂದು ಸೂಚನೆ ನೀಡಿದರು. ಇದಕ್ಕೆ ದನಿಗೂಡಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು, ಶಾಲೆ ಬಿಟ್ಟಿರುವ ಮಕ್ಕಳನ್ನು ಕರೆತರಲು ಅಧಿಕಾರಿಗಳು ಯಾವುದೇ ಸಮರ್ಪಕ ಕಾರ್ಯ ನಿರ್ವಹಿಸದಿರುವುದು ಅಂಕಿ-ಅಂಶಗಳೇ ಹೇಳುತ್ತವೆ. ಶಾಲೆಯಿಂದ ಹೊರಗುಳಿದಿರುವ ಎಲ್ಲ ಮಕ್ಕಳ ಹೆಸರು, ವಿಳಾಸ, ಶಾಲೆಯಿಂದ ಹೊರಗುಳಿಯಲು ಕಾರಣ ಇವೆಲ್ಲ ಅಂಶದ ಸಹಿತ, ವಿವರವಾದ ಮಾಹಿತಿ ಹಾಗೂ ಅಂತಹ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಂಡ ಕ್ರಮದ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

????????????????????????????????????
ಶಿಕ್ಷಕರ ಕೊರತೆಗೆ ಪರಿಹಾರ ಕಂಡುಕೊಳ್ಳಿ : ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ನೂರಾರು ಸಂಖ್ಯೆಯ ಮಕ್ಕಳಿಗೆ ಕೇವಲ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಇರುವಂತಹ ಸ್ಥಿತಿ ಇದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಳ್ಳುತ್ತಿದ್ದರೂ, ಅಧಿಕಾರಿಗಳು ಇದ್ಯಾವುದಕ್ಕೂ ಪರಿಹಾರ ಕಂಡುಕೊಳ್ಳುವ ಗೊಜಿಗೆ ಹೋದಂತೆ ಕಂಡುಬರುತ್ತಿಲ್ಲ. ಪರಿಸ್ಥಿತಿ ಹೀಗಾದರೆ, ಶೈಕ್ಷಣಿಕವಾಗಿ ಕೊಪ್ಪಳ ಜಿಲ್ಲೆ ಮುಂದೆ ಬರಲು ಹೇಗೆ ಸಾಧ್ಯವಾದೀತು. ಕೂಡಲೆ ಶಿಕ್ಷಕರ ತೀವ್ರ ಕೊರತೆ ಎದುರಿಸುತ್ತಿರುವ ಶಾಲೆಗಳನ್ನು ಗುರುತಿಸಿ, ಅಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸರಿಯಾದ ಕ್ರಮ ಕೈಗೊಳ್ಳಿ ಎಂದು ಡಿಡಿಪಿಐ ಶ್ಯಾಮಸುಂದರ್ ಅವರಿಗೆ ಸೂಚನೆ ನೀಡಿದರು.
ಸೆ. ೧೫ ರೊಳಗೆ ೨ನೇ ಸಮವಸ್ತ್ರ ನೀಡಿ : ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ೦೧ ರಿಂದ ೦೮ ನೇ ತರಗತಿಯ ೧,೬೪,೩೯೧ ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷಕ್ಕೆ ೦೨ ನೇ ಜೊತೆ ಸಮವಸ್ತ್ರ ಪೂರೈಸಲು ಪ್ರತಿ ವಿದ್ಯಾರ್ಥಿಗೆ ರೂ. ೨೦೦ ರಂತೆ ಈಗಾಗಲೆ ಜಿಲ್ಲೆಗೆ ೩. ೨೮ ಕೋಟಿ ರೂ. ಅನುದಾನವನ್ನು ಆಯಾ ಎಸ್‌ಡಿಎಂಸಿ ಜಂಟಿ ಖಾತೆಗೆ ಜಮಾ ಮಾಡಲಾಗಿದೆ. ಆಗಸ್ಟ್ ೧೫ ರ ಒಳಗಾಗಿ ಎಲ್ಲ ವಿದ್ಯಾರ್ಥಿಗಳಿಗೆ ಎರಡನೆ ಜೊತೆಯ ಸಮವಸ್ತ್ರ ಪೂರೈಕೆಯಾಗಬೇಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದುವರೆಗೂ ಸಮವಸ್ತ್ರ ಪೂರೈಕೆಯಾಗಿಲ್ಲ. ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಬೇಕು. ನಿಯಮಾನುಸಾರ ಕ್ರಮ ಕೈಗೊಂಡು, ಸೆ. ೧೫ ರ ಒಳಗಾಗಿ ಮಕ್ಕಳಿಗೆ ಎರಡನೆ ಜೊತೆಯ ಸಮವಸ್ತ್ರ ಪೂರೈಕೆ ಆಗಬೇಕು. ಸಮವಸ್ತ್ರದ ಮಾದರಿಯನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಮ್ಮ ಗಮನಕ್ಕೆ ತಂದು, ಕಾರ್ಯಕ್ರಮ ತ್ವರಿತವಾಗಿ ಅನುಷ್ಠಾನಗೊಳ್ಳಬೇಕು ಎಂದು ಸಂಸದ ಕರಡಿ ಸಂಗಣ್ಣ ಅವರು ಸೂಚನೆ ನೀಡಿದರು.
ರಸಗೊಬ್ಬರಗಳ ಮಾರಾಟ ದರ ಬಗ್ಗೆ ನಿಗಾ ವಹಿಸಿ : ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಆದರೆ ಜುಲೈ ತಿಂಗಳಿನಲ್ಲಿ ಅಲ್ಪ ಮಟ್ಟಿಗೆ ಕೊರತೆಯಾಗಿದೆ. ಆದರೆ ಆಗಸ್ಟ್ ತಿಂಗಳಿನಲ್ಲಿ ಶೇ. ೪೦ ರಷ್ಟು ಮಳೆಯ ಕೊರತೆ ಕಂಡುಬಂದಿದೆ. ಪ್ರಮುಖವಾಗಿ ಅಳವಂಡಿ, ಕುಕನೂರು, ಕವಲೂರು ಹೋಬಳಿಗಳಲ್ಲಿ ತೀವ್ರ ಮಳೆಯ ಕೊರತೆ ಕಂಡುಬಂದಿದೆ. ಮೆಕ್ಕೆಜೋಳ ಬೆಳೆ ಮಳೆಯ ಕೊರತೆಯಿಂದ ಕುಂಠಿತವಾಗಿದ್ದು, ಸಜ್ಜೆ ಬೆಳೆ ಉತ್ತಮವಾಗಿದೆ. ಈ ವಾರದಲ್ಲಿ ಮಳೆ ಅಗತ್ಯವಾಗಿದ್ದು, ಇಲ್ಲದಿದ್ದಲ್ಲಿ ಬೆಳೆಗಳ ದೃಷ್ಟಿಯಿಂದ ತೊಂದರೆ ಯಾಗಲಿದೆ ಎಂದು ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು ವಿವರಿಸಿದರು. ಡಿಎಪಿ, ಯೂರಿಯಾ ರಸಗೊಬ್ಬರಗಳ ಬೆಲೆ ಕಡಿಮೆಯಾಗಿದ್ದು, ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಆಗದ ರೀತಿ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ : ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಸಲುವಾಗಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಸಮೀಕ್ಷೆಯಂತೆ ಕೊಪ್ಪಳ ಜಿಲ್ಲೆಯಲ್ಲಿ ೮೫೮೯೨ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಕೊಡಿಸಲು ಅವಕಾಶವಿದೆ. ಕುಟುಂಬದ ಮಹಿಳೆಯ ಹೆಸರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಸರ್ಕಾರ ಪ್ರತಿ ಸಂಪರ್ಕಕ್ಕೆ ೧೬೦೦ ರೂ. ಸಹಾಯಧನ ನೀಡಲಿದೆ. ಉಳಿದಂತೆ ಸಿಲಿಂಡರ್ ರೀಫಿಲ್ ಹಾಗೂ ಗ್ಯಾಸ್ ಒಲೆ ಖರೀದಿಸಗೆ ಕಂತುಗಳ ಆಧಾರದಲ್ಲಿ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ. ಜಿಲ್ಲೆಯಲ್ಲಿ ಒಟ್ಟು ೧೭ ಅಡುಗೆ ಅನಿಲ ವಿತರಕರು ಇದ್ದು, ಈಗಾಗಲೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಯೋಜನೆ ಕುರಿತು ಅಧಿಕಾರಿ ವೇಣು ಅವರು ಮಾಹಿತಿ ನೀಡಿದರು. ಯೋಜನೆಯ ಜಾರಿಗೆ ತ್ವರಿತ ಕ್ರಮ ಕೈಗೊಳ್ಳಿ ಎಂದು  ಅವರು ತಿಳಿಸಿದರು.
ರೈಲ್ವೆ ಯೋಜನೆಗಳಿಗೆ ಭೂ-ಸ್ವಾಧೀನ ತ್ವರಿತಗೊಳ್ಳಲಿ : ಜಿಲ್ಲೆಯಲ್ಲಿ ಗದಗ-ವಾಡಿ ಮತ್ತು ಗಿಣಿಗೇರಾ-ಮೆಹಬೂಬ್‌ನಗರ ಎರಡು ಪ್ರಮುಖ ರೈಲ್ವೆ ಯೋಜನೆಗಳು ಜಾರಿಯಲ್ಲಿವೆ. ಈ ಎರಡೂ ಯೋಜನೆಗಳೂ ಸಹ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಶೇ. ೫೦ ರಷ್ಟು ಅನುದಾನ ಸಹಭಾಗಿತ್ವದ ಯೋಜನೆಗಳಾಗಿವೆ. ಗಿಣಿಗೇರಾ-ಮೆಹಬುಬ್‌ನಗರ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಅಯೋಧ್ಯ, ಯರಡೋಣ, ಕಾರಟಗಿ ಬಳಿ ಭೂಸ್ವಾಧೀನ ವಿಳಂಬವಾಗುತ್ತಿದೆ. ಗದಗ-ವಾಡಿ ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ೧೨೪೯ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಿದ್ದು, ಈವರೆಗೂ ಪ್ರಗತಿಯಾಗಿಲ್ಲ. ಈಗಾಗಲೆ ತಳಕಲ್-ಕುಷ್ಟಗಿ ೫೭ ಕಿ.ಮೀ. ಅನ್ನು ೧೧೪. ೬೬ ಕೋಟಿ ರೂ ಯೋಜನೆಗೆ ಟೆಂಡರ್ ಕರೆಯಲಾಗಿದೆ. ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಡುವ ಕುರಿತು ಜಿಲ್ಲಾ ಮಟ್ಟದಲ್ಲಿ ತ್ವರಿತವಾಗಿ ಕಾರ್ಯ ಆಗಬೇಕಿದೆ ಎಂದು  ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಕೊಪ್ಪಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳಾದ ಸತ್ಯನಾರಾಯಣ ದೇಶಪಾಂಡೆ, ವಿಜಯಕುಮಾರ್, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Please follow and like us:
error