ಶಾಂತಿ-ಸೌಹಾರ್ದತೆಯಿಂದ ಗೌರಿ ಗಣೇಶ ಹಬ್ಬ ಆಚರಿಸಿ- ಜಿಲ್ಲಾಧಿಕಾರಿ ಎಂ. ಕನಗವಲ್ಲಿ

????????????????????????????????????

ಕೊಪ್ಪಳ : ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಜೊತೆಗೆ ಪರಿಸರ ಸ್ನೇಹಿಯನ್ನಾಗಿ ಆಚರಿಸುವ ಮೂಲಕ ದೇವರಿಗೆ ಭಕ್ತಿ-ಭಾವ ಸಮರ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಸೆ. 05 ರಿಂದ ಸೆ. 15 ರವರೆಗೆ ಗೌರಿ-ಗಣೇಶ ಹಬ್ಬದ ಆಚರಣೆ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೂರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಏಕ-ಗವಾಕ್ಷಿ ಯೋಜನೆಯಲ್ಲಿ ಕೊಪ್ಪಳ ನಗರಸಭೆಯಲ್ಲಿಯೇ ಒದಗಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ದೊಡ್ಡ ಗಾತ್ರದ ಮೂರ್ತಿಯನ್ನು ಇಡುವುದು ಸಮಂಜಸವಲ್ಲ. ಆದಷ್ಟು ಚಿಕ್ಕ ಗಾತ್ರದ ಪರಿಸರ ಸ್ನೇಹಿ ಗಣಪನನ್ನೇ ಕೂರಿಸಿ. ಅನುಮತಿಗಾಗಿ ಅರ್ಜಿ ಸಲ್ಲಿಸುವವರು ಗಣೇಶ ಮೂರ್ತಿಯ ಎತ್ತರ, ಕರೆತರುವ ಹಾಗೂ ವಿಸರ್ಜನೆಗೆ ತೆರಳುವ ಮಾರ್ಗ, ಗಣೇಶ ಕೂರಿಸುವ ಒಟ್ಟು ದಿನಗಳು. ಮುಖ್ಯಸ್ಥರ ಹೆಸರು, ಮೊಬೈಲ್ ಸಂಖ್ಯೆ, ಹೀಗೆ ಸಮಗ್ರ ವಿವರವನ್ನು ಒದಗಿಸಬೇಕು. ಅರ್ಜಿ ಸಲ್ಲಿಸಿದ 24 ಗಂಟೆಯ ಒಳಗಾಗಿ ಅರ್ಜಿಗಳ ವಿಲೇವಾರಿ ಮಾಡಬೇಕು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು, ಮೈಕ್ ಬಳಸುವುದನ್ನು ನಿಷೇಧಿಸಲಾಗಿದೆ. ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಸಾರ್ವಜನಿಕರು ಬಳಸುವುದು ಸೂಕ್ತ. ಕುಡಿಯುವ ನೀರಿನ ಮೂಲಗಳಾದ ಬಾವಿ, ಕರೆಗಳಲ್ಲಿ ರಾಸಾಯನಿಕ ಬಣ್ಣಯುಕ್ತ ಗಣೇಶ ಮೂರ್ತಿಗಳನ್ನು ವಿಸರ್ಜಿಸಬಾರದು. ಇಲ್ಲದಿದ್ದಲ್ಲಿ, ಕುಡಿಯುವ ನೀರು ವಿಷಯುಕ್ತವಾಗಲಿದೆ. ಹೆಚ್ಚು ಶಬ್ದ ಬರುವ ಪಟಾಕಿಗಳು ವೃದ್ಧರು ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಅಂತಹ ಪಟಾಕಿಗಳನ್ನು ಬಳಸಬೇಡಿ. ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಪಾಲನೆಯ ಸಲುವಾಗಿ ‘ಬನಾಯೇಂಗೆ ಮಂದಿರ್’ ಎಂಬ ಹಾಡನ್ನು ಸಾರ್ವಜನಿಕವಾಗಿ ಹಾಡದಂತೆ ಮತ್ತು ಆಡಿಯೋ ರೂಪದಲ್ಲಿ ಬಿತ್ತರಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಹಾಗೂ ಸೌಹಾರ್ದತೆಯಿಂದ ಗೌರಿ-ಗಣೇಶ ಹಬ್ಬ ಆಚರಿಸುವಲ್ಲಿ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡರು.ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಡಿವೈಎಸ್‍ಪಿ ಶ್ರೀಕಾಂತ್ ಕಟ್ಟಿಮನಿ., ಸಿಪಿಐ ಮೋಹನ್ ಪ್ರಸಾದ್, ಸೇರಿದಂತೆ ನಗರಸಭೆ, ಜೆಸ್ಕಾಂ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಅಬಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಗಣೇಶ ಉತ್ಸವ ಸಮಿತಿಯ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

 

Please follow and like us:
error