ಲೇಖಕರು ಕ್ರಿಯಾಶೀಲರಾಗಿ ಒಬ್ಬರೊಡನೊಬ್ಬರು ಒಡನಾಡಬೇಕು -ಅಲ್ಲಮಪ್ರಭು ಬೆಟ್ಟದೂರು

ಕೊಪ್ಪಳ ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ದ್ವಿತೀಯ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಇತ್ತೀಚೆಗೆ ಮಾತನಾಡಿದರು. ಸಂಘದಲ್ಲಿ ೧೩೦ ಲೇಖಕ ಸದಸ್ಯರಿದ್ದು, ರೂ. ೧.೯೪ ಲಕ್ಷ ಷೇರು ಬಂಡವಾಳ ಹೊಂದಿದೆ. ಕಾರ್ಯಕಾರಿ ಸಮಿತಿಯ ಸಭೆಗಳನ್ನು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಡೆಸುವಾಗ ಸಾಹಿತ್ಯ ಸಂಚಾರ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಸಂಚಾರ ಕಾರ್ಯಕ್ರಮದಲ್ಲಿ ಆಯಾ ತಾಲೂಕಿನ ಬರಹಗಾರರ ಪುಸ್ತಕ ಪರಿಚಯ ಹಾಗೂ ಸಾಹಿತಿಗಳ ಪರಿಚಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಲೇಖಕರಿಗೆ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಪುಸ್ತಕ ಹಾಗೂ ಲೇಖನ ಸಾಮಗ್ರಿ ಖರೀದಿಸಲು ಅನುಕೂಲವಾಗುವಂತೆ ಸದಸ್ಯರಿಗೆ ರೂ. ೧೦,೦೦೦ ತುರ್ತು ಸಾಲ ಕೊಡುವ ವ್ಯವಸ್ಥೆ ಮಾಡಲಾಗಿದೆ. ಪುಸ್ತಕ ಪ್ರಕಟಣೆಗೆ ರೂ. ೨೦,೦೦೦ದ ವರೆಗೆ ಸಾಲ ಕೊಡಲಾಗುವುದು. ಯುವ ಲೇಖಕರಿಗೆ ಪ್ರೋತ್ಸಾಹ ನೀಡಬೇಕು. ರೈತರ ಆತ್ಮಹತ್ಯೆ ತಡೆ ಮತ್ತು ಬರ ನಿರ್ವಹಣೆ ಕುರಿತ ಪುಸ್ತಕ ಹೊರತರಲು ಪ್ರಾಯೋಜಕರ ಅಗತ್ಯವಿದೆ ಎಂದು ಅವರು ಹೇಳಿದರು.
ಸಂಘದ ಉಪಾಧ್ಯಕ್ಷರಾದ ಬಸವರಾಜ ಆಕಳವಾಡಿ ಅವರು ಪ್ರಾರಂಭದಲ್ಲಿ ಸ್ವಾಗತಿಸಿ, ವಾರ್ಷಿಕ ಲೆಕ್ಕ ಪತ್ರದ ವರದಿ ವಾಚನ ಮಾಡಿದರು. ಜಿ. ಎಸ್. ಗೋನಾಳ ಹಾಗೂ ಚಂದಪ್ಪ ಹಕ್ಕಿ ಅವರು ಸಂಘದ ಧ್ಯೇಯೋದ್ಧೇಶ ಹಾಗೂ ಕಾರ್ಯಕ್ರಮ ಕುರಿತು ಶ್ಲ್ಯಾಘಿಸಿದರು. ಇದೇ ವೇದಿಕೆಯಿಂದ ಸಂಘದ ಸದಸ್ಯರಿಗಾಗಿ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ೨೨ ಜನ ಹಿರಿ ಕಿರಿಯ ಕವಿಗಳು ತಮ್ಮ ಸ್ವ ರಚಿತ ಕವನ ವಾಚನ ಮಾಡಿದರು ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಈಶ್ವರ ಹತ್ತಿ, ಚಂದಪ್ಪ ಹಕ್ಕಿ, ನಿಂಗಪ್ಪ ಸಜ್ಜನ, ರಮೇಶ ಗಬ್ಬೂರ ಹಾಗೂ ವಿಮಲಾ ಇನಾಮದಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯದರ್ಶಿ ವೈ. ಬಿ. ಜೂಡಿ ಅವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಕೊಟಗಿ ಅವರು ವಂದಿಸಿದರು.

Please follow and like us:
error