ರೈಲು ನಿಲ್ದಾಣಗಳಲ್ಲಿ ನಿಷೇಧಾಜ್ಞೆ ಜಾರಿ

ಕೊಪ್ಪಳ  (ಕ ವಾ):  ಸೆ. ೧೫ ರಂದು ರೈಲು ತಡೆ ಚಳುವಳಿ ನಡೆಯುವ ಸಾಧ್ಯತೆಗಳಿರುವುದರಿಂದ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಕೊಪ್ಪಳ, ಭಾನಾಪುರ, ಬನ್ನಿಕೊಪ್ಪ, ಗಿಣಿಗೇರಾ, ಹಿಟ್ನಾಳ, ಮುನಿರಾಬಾದ್ ರೈಲ್ವೆ ನಿಲ್ದಾಣ ಸುತ್ತಮುತ್ತಲ ೨೦೦ ಮೀ. ವ್ಯಾಪ್ತಿಯಲ್ಲಿ ಸೆ. ೧೫ ರಂದು ಬೆಳಿಗ್ಗೆ ೦೬ ಗಂಟೆಯಿಂದ ರಾತ್ರಿ ೦೮ ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ವಿವಿಧ ಸಂಘಟನೆಗಳು ಸೆ. ೧೫ ರಂದು ಜಿಲ್ಲೆಯಲ್ಲಿ ರೈಲು ತಡೆ ಚಳುವಳಿ ಕೈಗೊಳ್ಳುವ ಸಾಧ್ಯತೆಗಳಿದ್ದು, ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೊಪ್ಪಳ, ಭಾನಾಪುರ, ಬನ್ನಿಕೊಪ್ಪ, ಹಿಟ್ನಾಳ, ಗಿಣಿಗೇರಾ ಹಾಗೂ ಮುನಿರಾಬಾದ್ ರೈಲು ನಿಲ್ದಾಣಗಳ ಸುತ್ತಮುತ್ತಲಿನ ೨೦೦ ಮೀ. ಪ್ರದೇಶದಲ್ಲಿ ಸಿ.ಆರ್.ಪಿಸಿ ೧೯೭೩ ಕಲಂ ೧೪೪ ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರನ್ವಯ ನಿಷೇಧಿತ ವಲಯದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ. ಈ ಆದೇಶವು ಮದುವೆ, ಶವ ಸಂಸ್ಕಾರ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply