ರೈತ ಫಲಾನುಭವಿಗಳ ಸಮಾವೇಶ – ಕೃಷಿಭಾಗ್ಯ ಯೋಜನೆ ಸಾಕ್ಷ್ಯಚಿತ್ರ ಆ. 29 ರಂದು ಬಿಡುಗಡೆ

ಕೊಪ್ಪಳ  : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆ. 29 ರಂದು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿರುವ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೃಷಿ ಭಾಗ್ಯ ಯೋಜನೆಯ ಯಶಸ್ಸು ಕುರಿತಂತೆ ತಯಾರಿಸಿರುವ ಕೃಷಿಭಾಗ್ಯ- ಸಾಕ್ಷ್ಯಚಿತ್ರ ಸಿ.ಡಿ. ಯನ್ನು ಆ. 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳದಲ್ಲಿ ಬಿಡುಗಡೆ ಮಾಡಲಿದ್ದಾರೆ. ರಾಜ್ಯದ ಒಣ ಬೇಸಾಯ ಅವಲಂಬಿತ ರೈತರು, ಮಳೆ ಕೊರತೆಯಾಗಿ ಸಂಕಷ್ಟ ಅನುಭವಿಸುವ ರೈತರ ನೆರವಿಗೆ ಬರಬೇಕೆಂಬ ಉದ್ದೇಶದಿಂದ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಕೃಷಿ ಹೊಂಡಗಳ ಮೂಲಕ ಸಂಗ್ರಹಿಸಿ, ಮಳೆಯ ಕೊರತೆ ಸಂದರ್ಭದಲ್ಲಿ ಈ ನೀರು ಉಪಯೋಗಿಸಿಕೊಂಡು, ಬೆಳೆ ಉಳಿಸಿಕೊಳ್ಳುವುದು, ಅದೇ ರೀತಿ ಪಾಲಿಹೌಸ್ ಘಟಕ ಮುಂತಾದ ಕಾರ್ಯಕ್ರಮಗಳು ರೈತರಿಗೆ ವರದಾನವಾಗಿ ಪರಿಣಮಿಸಿವೆ. ಕೃಷಿಭಾಗ್ಯ ಯೋಜನೆಯ ಯಶಸ್ವಿ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸಾಕ್ಷ್ಯಚಿತ್ರವನ್ನು ತಯಾರಿಸಿದ್ದು, ಅದರ ಸಿಡಿ ಯನ್ನು ಆ. ೨೯ ರಂದು ಕೊಪ್ಪಳದಲ್ಲಿ ಜರುಗಲಿರುವ ರೈತ ಫಲಾನುಭವಿಗಳ ಸಮಾವೇಶ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡುವರು.ವಾರ್ತಾ ಇಲಾಖೆಯಿಂದ ವ್ಯಾಪಕ ಪ್ರಚಾರ : ಇದೇ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳ ಸಮಾವೇಶದ ಯಶಸ್ವಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಚಾರಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೆ ಕಾರ್ಯಕ್ರಮ ಕುರಿತಂತೆ ಟಿ.ವಿ. ವಾಹಿನಿಗಳಲ್ಲಿ ಹಾಗೂ ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ವ್ಯಾಪಕ ಪ್ರಚಾರ ಕೈಗೊಂಡಿದೆ. ಅದೇ ರೀತಿ ಕೊಪ್ಪಳದಲ್ಲಿ 10 ಕ್ಕೂ ಹೆಚ್ಚು ಹೆದ್ದಾರಿ ಫಲಕಗಳಲ್ಲಿಯೂ ಜಾಹೀರಾತು ಅಳವಡಿಸಿದೆ. ಚಂದನದಲ್ಲಿ ಕಿರುಚಿತ್ರ ಪ್ರಸಾರ : ವಾರ್ತಾ ಇಲಾಖೆಯಿಂದ ರೂಪಿಸಿರುವ ಕೃಷಿ ಭಾಗ್ಯ ಯೋಜನೆಗೆ ಸಂಬಂಧಿತ ಕಿರು ಚಿತ್ರ ಆ. 29 ರಂದು ದೂರದರ್ಶನದ ಚಂದನ ವಾಹಿನಿಯಲ್ಲಿ ಸಂಜೆ 6-45 ಗಂಟೆಯಿಂದ 7 ಗಂಟೆಯವರೆಗೆ ಪ್ರಸಾರವಾಗಲಿದ್ದು, ಸಾರ್ವಜನಿಕರು ಕಾರ್ಯಕ್ರಮವನ್ನು ಚಂದನ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ರಾಜ್ಯಾದ್ಯಂತ ಕೇಬಲ್ ನೆಟ್‌ವರ್ಕ್ ಮೂಲಕವೂ ಕೃಷಿಭಾಗ್ಯ ಕಿರು ಚಿತ್ರ ಪ್ರಸಾರವಾಗಲಿದೆ. ಕೃಷಿಭಾಗ್ಯ ಮಡಿಕೆ ಪತ್ರ ವಿತರಣೆ : ವಾರ್ತಾ ಇಲಾಖೆಯು ಕೃಷಿ ಇಲಾಖೆಯ ಸಹಯೋಗದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಹಾಗೂ ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿರುವ ಮಡಿಕೆ ಪತ್ರವನ್ನು ರೈತ ಸಮಾವೇಶ ಸಂದರ್ಭದಲ್ಲಿ ರೈತರಿಗೆ ವಿತರಿಸಲು ಇಲಾಖೆಯು ಕ್ರಮ ಕೈಗೊಂಡಿದೆ.ಆಕರ್ಷಕ ವಸ್ತುಪ್ರದರ್ಶನ ಮಳಿಗೆ : ರಾಜ್ಯ ಸರ್ಕಾರ ಕೃಷಿಭಾಗ್ಯ ಯೋಜನೆ ಮೂಲಕ ರೈತರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿದ್ದು, ರೈತ ಬಾಂಧವರಿಗೆ ಸರಳವಾಗಿ ಯೋಜನೆಗಳ ಮಾಹಿತಿ ದೊರೆಯುವಂತೆ ಮಾಡಲು ವಾರ್ತಾ ಇಲಾಖೆಯು ರೈತ ಫಲಾನುಭವಿಗಳ ಸಮಾವೇಶ ನಡೆಯುವ ಮೈದಾನದಲ್ಲಿ ವಿಶೇಷ ಆಕರ್ಷಕ ವಸ್ತು ಪ್ರದರ್ಶನ ಮಳಿಗೆಯನ್ನು ಸ್ಥಾಪಿಸಿದ್ದು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ತಿಳಿಸಿದ್ದಾರೆ.

Please follow and like us:
error

Related posts

Leave a Comment