ರೈತ ಫಲಾನುಭವಿಗಳ ಸಮಾವೇಶದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ- ಸಚಿವ ಕೃಷ್ಣ ಭೈರೇಗೌಡ

????????????????????????????????????

ಕೊಪ್ಪಳ – ಇದೇ ಆಗಸ್ಟ್ 29 ರಂದು ಕೊಪ್ಪಳದಲ್ಲಿ ಜರುಗುವ ಕೃಷಿ ಭಾಗ್ಯ ಯೋಜನೆಯ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿ ಸಮಾವೇಶದಲ್ಲಿ, ರೈತರಿಗೆ ಸಂಬಂಧಿತ ತೋಟಗಾರಿಕೆ, ಪಶುಸಂಗೋಪನೆ, ಕೃಷಿ ವಿವಿ.ತೋಟಗಾರಿಕೆ ಕಾಲೇಜು, ಸಹಕಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಕ್ರಿಯವಾಗಿ ತೊಡಗಿಸಿಕೊಂಡು, ಸಮಾವೇಶಕ್ಕೆ ಬರುವ ರೈತರಿಗೆ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿ ನೀಡಬೇಕು ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

????????????????????????????????????

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರೈತ ಫಲಾನುಭವಿಗಳ ಸಮಾವೇಶವನ್ನು ಆ. 29 ರಂದು ಕೊಪ್ಪಳದಲ್ಲಿ ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮಾವೇಶದ ಉದ್ಘಾಟನೆ ನೆರವೇರಿಸುವರು. ಕೃಷಿ ಭಾಗ್ಯ ಯೋಜನೆ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯಗೊಂಡಿದ್ದು, ಹೀಗಾಗಿ, ಉತ್ತರ ಕರ್ನಾಟಕದ ಸುಮಾರು 12 ರಿಂದ 15 ಜಿಲ್ಲೆಗಳ ರೈತ ಫಲಾನುಭವಿಗಳು ಕೊಪ್ಪಳಕ್ಕೆ ಆಗಮಿಸಿ, ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ಯಾವುದೇ ರಾಜಕೀಯ ಪ್ರೇರಿತವಾಗಿರದೆ, ಕೃಷಿಕರಿಗಾಗಿಯೇ ಇನ್ನಷ್ಟು ವಿಷಯಗಳನ್ನು ತಿಳಿಸಲು, ಕೃಷಿಗೆ ಪ್ರೇರೇಪಿಸಲು ಹಾಗೂ ರೈತರಿಗೆ ಭದ್ರ ನೆಲೆಗಟ್ಟಿನ ಮೇಲೆ ನಿಲ್ಲುವಂತೆ ಮಾಡುವ ಸ್ವಾಭಿಮಾನಿ ರೈತರ ಸಮಾವೇಶವನ್ನಾಗಿಸಲಾಗುವುದು. ರೈತರಿಗೆ ಇದೊಂದು ಕೃಷಿ ಅಧ್ಯಯನ ಪ್ರವಾಸ ಆಗುವಂತೆ ಮಾಡಲಾಗುವುದು. ಕೃಷಿ ಭಾಗ್ಯ ಯೋಜನೆಯಡಿ ಒಣ ಬೇಸಾಯ ಅವಲಂಬಿತ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಹೊಂಡ ಕಾರ್ಯಕ್ರಮವಿದೆ. ಅದೇ ರೀತಿ ಅತ್ಯಂತ ಕಡಿಮೆ ನೀರು ಬಳಸಿ, ಹೆಚ್ಚು ಇಳುವರಿ ಪಡೆಯುವಂತಹ ಪಾಲಿಹೌಸ್ ನಿರ್ಮಾಣದ ಕಾರ್ಯಕ್ರಮವಿದೆ. ಬರ ಪರಿಸ್ಥಿತಿಯನ್ನು ರೈತರು ಸಮರ್ಥವಾಗಿ ನಿಭಾಯಿಸಲು ಕೃಷಿ ಭಾಗ್ಯ ಯೋಜನೆ ಹೆಚ್ಚು ಪ್ರಸ್ತುತವೆನಿಸಿದೆ. ಕೃಷಿ ಇಲಾಖೆ ಈಗಾಗಲೆ ಸಮಾವೇಶದ ರೂಪುರೇಷೆ ಸಿದ್ಧಪಡಿಸಿದ್ದು, ಕೊಪ್ಪಳದ ಹೊರವಲಯದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಜರುಗಿದ್ದು, ಅದರ ಜೊತೆಗೆ ಕೃಷಿಕರಿಗೆ ಕೃಷಿ ಭಾಗ್ಯ ಯೋಜನೆಗೆ ಸಂಬಂಧಿತ ಕೃಷಿ ಹೊಂಡ, ಪಾಲಿಹೌಸ್, ನವೀನ ತಾಂತ್ರಿಕತೆಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಉಪಯೋಗಿಸುವ ಪ್ರಾತ್ಯಕ್ಷಿಕೆ ಸಮಾವೇಶ ಸಂದರ್ಭದಲ್ಲಿ ರೈತರಿಗೆ ಲಭ್ಯವಾಗಲಿದೆ. ಇದರ ಜೊತೆಗೆ ರೈತರಿಗೆ ಸಂಬಂಧಿತ ಇತರೆ ಇಲಾಖೆಗಳಾದ ತೋಟಗಾರಿಕೆ, ಪಶುಸಂಗೋಪನೆ, ಸಹಕಾರ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳು, ತೋಟಗಾರಿಕೆ ಕಾಲೇಜು, ಹೀಗೆ ಪೂರಕ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಂಡು, ಕೃಷಿಕರಿಗೆ ಉಪಯುಕ್ತ ಮಾಹಿತಿ ಒದಗಿಸಬೇಕು. ತೋಟಗಾರಿಕೆ ಇಲಾಖೆಯಲ್ಲಿನ ವಿವಿಧ ಯೋಜನೆಗಳ ಮಾಹಿತಿ, ಪಶುಸಂಗೋಪನೆ ಇಲಾಖೆಯಿಂದ ಹೊಸ ಹೊಸ ಕುರಿ, ಜಾನುವಾರುಗಳ ತಳಿಗಳನ್ನು ಪರಿಚಯಿಸುವಂತಾಗಬೇಕು. ಸಹಕಾರ ಇಲಾಖೆಯಿಂದ ಯಶಸ್ವಿನಿ ರೈತ ಸಹಕಾರಿ ಯೋಜನೆ, ಕೃಷಿ ವಿವಿ ಗಳಿಂದ ಬೆಳೆಗಳ ಹೊಸ ತಳಿಗಳು, ಆಧುನಿಕ ಬೇಸಾಯ ಪದ್ಧತಿಗಳ ಮಾಹಿತಿ ಲಭ್ಯವಾಗಬೇಕು. ಹೀಗೆ ಎಲ್ಲ ಇಲಾಖೆಗಳು ಸಮಾವೇಶ ಸಂದರ್ಭದಲ್ಲಿ ರೈತರಿಗೆ ಉಪಯುಕ್ತ ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ರೈತ ಫಲಾನುಭವಿಗಳ ಸಮಾವೇಶದ ಉದ್ಘಾಟನೆ ಆಗುವ ಪೂರ್ವದಲ್ಲೇ ರೈತರು ಸಮಾವೇಶ ಸ್ಥಳದಲ್ಲಿ ಸೇರುವುದರಿಂದ, ಈ ಸಮಯದ ಸದುಪಯೋಗ ಪಡೆದುಕೊಂಡು, ರೈತರಿಗೆ ಹೆಚ್ಚು, ಹೆಚ್ಚು, ಕೃಷಿಗೆ ಸಂಬಂಧಿತ ಮಾಹಿತಿ ಒದಗಿಸಬೇಕು. ರೈತರ ಯಶೋಗಾಥೆಗಳನ್ನು ಬಿಂಬಿಸುವ ವಿಡಿಯೋವನ್ನು ಇತರೆ ರೈತರಿಗೆ ಪ್ರೇರಣೆ ನೀಡುವ ರೀತಿಯಲ್ಲಿ ಪ್ರದರ್ಶನದ ವ್ಯವಸ್ಥೆ ಮಾಡಬೇಕು. ಸೆಪ್ಟಂಬರ್ ತಿಂಗಳಿನಲ್ಲಿ ಜಿಲ್ಲೆಯ ಎಲ್ಲ ರೈತ ಸಹಕಾರಿಗಳನ್ನು ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ತರುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದ್ದು, ಇದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಈಗಿನಿಂದಲೇ ತಯಾರಿ ನಡೆಸುವಂತೆ ಸೂಚನೆ ನೀಡಿದರು.

Please follow and like us:
error