ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ವ್ಯಾಪ್ತಿಗೆ ತರಲು ವಿಶೇಷ ಅಭಿಯಾನ – ಸಚಿವ ಬಸವರಾಜ ರಾಯರಡ್ಡಿ

????????????????????????????????????

ಕೊಪ್ಪಳ –  ಜಿಲ್ಲೆಯ ಎಲ್ಲ ಸಹಕಾರಿಗಳನ್ನು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯ ವ್ಯಾಪ್ತಿಗೆ ತರುವ ಉದ್ದೇಶದಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ವಿಶೇಷ ನೋಂದಣಿ ಅಭಿಯಾನವನ್ನು ಸೆಪ್ಟಂಬರ್ ತಿಂಗಳಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ  ಸಚಿವ ಬಸವರಾಜ ರಾಯರಡ್ಡಿ ಅವರು ಸಹಕಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊಪ್ಪಳದ ನಿರ್ಮಿತಿ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರದಂದು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಶಸ್ವಿನಿ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಗೆ ಪ್ರಸಕ್ತ ಸಾಲಿನ ನೋಂದಣಿಗಾಗಿ ಕೊನೆಯ ದಿನಾಂಕವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.  ಆದರೆ ಜಿಲ್ಲೆಯಲ್ಲಿ ಅನೇಕ ಸಹಕಾರಿಗಳು ಯಶಸ್ವಿನಿ ಯೋಜನೆಗಾಗಿ ನೋಂದಣಿಯಾಗಿಲ್ಲ.  ಮಾರಣಾಂತಿಕ ರೋಗಗಳಿಗೆ ಒಳಗಾದಾಗ ಜನಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ಸಹಾಯ ಯಾಚಿಸಲು ಮುಂದಾಗುತ್ತಾರೆ.  ಸಹಕಾರಿಗಳಿಗೆ ಉಚಿತ ಚಿಕಿತ್ಸೆ ದೊರಕುವ ಯಶಸ್ವಿನಿ ಯೋಜನೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ.  ಜಿಲ್ಲೆಯಲ್ಲಿ ಇದುವರೆಗೂ ನೋಂದಣಿಯಾಗಿರುವ ಹಾಗೂ ಬಾಕಿ ಉಳಿದಿರುವ ನಗರ ಮತ್ತು ಗ್ರಾಮೀನ ಸಹಕಾರಿಗಳ ಸಂಖ್ಯೆ ಹಾಗೂ ವಿವರವಾದ ಮಾಹಿತಿಯನ್ನು ಕಲೆ ಹಾಕಬೇಕು.  ಇದುವರೆಗೂ ನೋಂದಣಿಯಾಗದವರಿಗೆ ಸೆಪ್ಟಂಬರ್ ತಿಂಗಳಿನಲ್ಲಿ ವಿಶೇಷವಾಗಿ ‘ಯಶಸ್ವಿನಿ ನೋಂದಣಿ ಮಾಸಾಚರಣೆ ಅಭಿಯಾನ’ ವನ್ನು ಹಮ್ಮಿಕೊಂಡು, ಶೇ. 100 ರಷ್ಟು ಸಹಕಾರಿಗಳನ್ನು ಯಶಸ್ವಿನಿ ವ್ಯಾಪ್ತಿಗೆ ತರುವಂತಾಗಬೇಕು ಎಂದು ಸಚಿವರು ಸಹಕಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಉತ್ತರಿಸಿದ ಸಹಕಾರ ಇಲಾಖೆ ಉಪನಿಬಂಧಕ ಗುರುಮೂರ್ತಿ ಅವರು ಕಳೆದ ವರ್ಷ ನಗರ ಮತ್ತು ಗ್ರಾಮೀಣ ಸೇರಿದಂತೆ ಒಟ್ಟು 64564 ಸಹಕಾರಿಗಳನ್ನು ನೋಂದಣಿ ಮಾಡಿಸಲಾಗಿತ್ತು.  ಈ ವರ್ಷ  1. 2 ಲಕ್ಷ ಸಹಕಾರಿಗಳ ನೋಂದಣಿಯ ಗುರಿ ಇದೆ.  ಈವರೆಗೆ 42 ಸಾವಿರ ಸಹಕಾರಿಗಳ ನೋಂದಣಿಯಾಗಿದೆ.  ನೋಂದಣಿ ಅವಧಿ ಆ. 31 ಕ್ಕೆ ಮುಕ್ತಾಯಗೊಳ್ಳಲಿರುವುದಾಗಿ ಸಚಿವರಿಗೆ ತಿಳಿಸಿದರು.  ಕೂಡಲೆ ಸಭೆಯ ನಡುವೆಯೇ ಸಹಕಾರ ಸಚಿವ ಮಹದೇವಪ್ರಸಾದ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು.  ನೋಂದಣಿ ಅವಧಿಯನ್ನು ಸೆಪ್ಟಂಬರ್ ವರೆಗೂ ವಿಸ್ತರಿಸಬೇಕು.  ಅಭಿಯಾನದ ಉದ್ಘಾಟನೆಗೆ ತಾವೇ ಜಿಲ್ಲೆಗೆ ಆಗಮಿಸಬೇಕು. ಹಾಗೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಸಚಿವ ಬಸವರಾಜ ರಾಯಡ್ಡಿ ಅವರು ಸಹಕಾರ ಸಚಿವರಿಗೆ ಕೋರಿದರು.

????????????????????????????????????

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಡಾ. ಪ್ರವೀಣಕುಮಾರ್ ಜಿ.ಎಲ್., ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ  ಶಶಿಕಾಂತ್ ಕೋಟಿಮನಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error