ಬರಗಾಲದಲ್ಲಿಯೂ ಕನಕಾಂಬರ ಹೂವಿನ ಕೃಷಿ ಮಾಡಿ ಯಶಸ್ವಿಯಾದ ರೈತ

ಕೊಪ್ಪಳ ಜಿಲ್ಲೆಯಲ್ಲಿ ಈ ಬಾರಿಯೂ ಮಳೆಯ ಕೊರತೆ ಕಂಡುಬಂದಿದ್ದು, ಬರದ ಛಾಯೆ ರೈತರನ್ನು ಆತಂಕಕ್ಕೀಡು ಮಾಡಿದೆ. ಆದರೆ, ಬರ ಪರಿಸ್ಥಿತಿಯಲ್ಲೂ ಶ್ರಮ ವಹಿಸಿ, ಸ್ವಲ್ಪ ಪ್ರಮಾಣದ ಜಮೀನಿನಲ್ಲಿಯೇ ಭರ್ಜರಿ ಕನಕಾಂಬರ ಹೂವಿನ ಬೆಳೆ ಬೆಳೆದು, ಲಕ್ಷಗಟ್ಟಲೆ ಆದಾಯ ಗಳಿಸುತ್ತಿರುವ ಯಲಬುರ್ಗಾ ತಾಲೂಕು ಹೊಸಳ್ಳಿ ಗ್ರಾಮದ ರೈತ ಕರಿಬಸಯ್ಯ ಬಳಿಗೇರ ಇತರೆ, ರೈತರಿಗೆ ಮಾದರಿಯಾಗಿದ್ದಾರೆ.

ಮಳೆಯೇ ಬಾರದೇ ಬರ ಪರಿಸ್ಥಿತಿಯಲ್ಲಿ ಎದೆಗುಂದದೇ ಇದ್ದ ಸ್ವಲ್ಪೇ ಜಮೀನಿನಲ್ಲಿ ಕನಕಾಂಬರಿ ಪುಷ್ಪ ಬೆಳೆದು ರೂ.೧.೦೦ ಲಕ್ಷಕ್ಕೂ ಹೆಚ್ಚಿನ ಆದಾಯ ಗಳಿಸಿರುವ ಯಲಬುರ್ಗಾ ತಾಲ್ಲೂಕಿನ ಹೊಸಳ್ಳಿ ಗ್ರಾಮದ ರೈತ ಕರಿಬಸಯ್ಯ ತಂ.ಬಸಣ್ಣ ಬಳಿಗೇರ ನಿಜಕ್ಕೂ ಅಬಿನಂದನಾರ್ಹರು.ರೈತ ಕರಿಬಸಯ್ಯ ಬಳಿಗೇರ, ೨೦೧೫ ರ ಅಗಸ್ಟ್ ತಿಂಗಳಿನಲ್ಲಿ ಅರ್ಕ ಕನಕ ಎಂಬ ತಳಿಯನ್ನು ಜಿನ್ನಾಪುರದಿಂದ ಒಂದು ರೂಪಾಯಿಗೆ ಎರಡು ಗಿಡಗಳಂತೆ ಒಟ್ಟು, ರೂ.೩೨೦೦ ಕೊಟ್ಟು ಒಟ್ಟು ೬೦೦೦ ಸಸಿಗಳನ್ನು ಖರೀದಿ ಮಾಡಿ, ತಮ್ಮ ೧೮ ಗುಂಟೆ ಜಮೀನಿನಲ್ಲಿ ನಾಟಿ ಮಾಡಿದರು. ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡಿ ಹನಿ ನೀರಾವರಿ ಅಳವಡಿಸಿಕೊಂಡು ೨ ೧/೨ * ೧ ೧/೨ ಅಡಿ ಅಂತರದಲ್ಲಿ ನಾಟಿ ಮಾಡಿದರು. ತೋಟಗಾರಿಕೆ ಇಲಾಖೆಯ ನೆರವನ್ನು ಪಡೆದು, ಸಾವಯವ ಗೊಬ್ಬರ ಮತ್ತು ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಮತ್ತು ಲಘು ಪೋಷಕಾಂಶಗಳಾದ ಜಿಂಕ್, ಬೋರಾನ್ ಅನ್ನು ಗಿಡಗಳಿಗೆ ಒದಗಿಸಿದರು. ನಾಟಿ ಮಾಡಿದ ೨ ತಿಂಗಳ ನಂತರ ಕುಡಿ ಚಿವುಟಿ ಸಸ್ಯ ಚೋದಕ ಸಿಂಪಡಿಸಿದರು. ಈ ರೀತಿ ಆರೈಕೆ ಮಾಡಿದ ಬೆಳೆ ೨೦೧೫ ರ ಡಿಸೆಂಬರ್ ತಿಂಗಳಿನಿಂದ ಇಳುವರಿ ಕೊಡಲು ಆರಂಬಿಸಿದೆ. ಪುಷ್ಪಕೃಷಿಗಾಗಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದು, ತೋಟಗಾರಿಕೆ ಇಲಾಖೆಯಿಂದ ಶೇ. ೯೦ ರಷ್ಟು ಸಬ್ಸಿಡಿ ರೈತನಿಗೆ ದೊರೆತಿದೆ.
ಮೊದಲು ೨-೨ ೧/೨ ಕೆ.ಜಿ. ಇಳುವರಿ ಕೊಡುತ್ತಿದ್ದ ಬೆಳೆ ಜನೆವರಿ ತಿಂಗಳಿನಿಂದ ಪ್ರತಿ ದಿನ ೫ ಕೆ.ಜಿ. ಯಷ್ಟು ಇಳುವರಿಯನ್ನು ಕೊಟ್ಟಿದೆ. ಇದುವರೆಗೂ ಸುಮಾರು ೫ ಕ್ವಿಂಟಾಲ್ ನಷ್ಟು ಕನಕಾಂಬರ ಹೂವಿನ ಇಳುವರಿ ಪಡೆದಿದ್ದು, ಪ್ರತಿ ಕ್ವಿಂಟಾಲ್‌ಗೆ ಸರಾಸರಿ ೨೦,೦೦೦ ರೂ. ಗಳಂತೆ, ಗಜೇಂದ್ರಗಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಈವರೆಗೆ ಸುಮಾರು ೧. ೨೦ ಲಕ್ಷ ರೂ. ಆದಾಯ ಗಳಿಸಿದ್ದಾರೆ ರೈತ ಕರಿಬಸಯ್ಯ. ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದ ಸುತ್ತಮುತ್ತ ರೈತರಿಂದ ೨೦-೨೫ ಎಕರೆ ಪ್ರದೇಶದಲ್ಲಿ ಕನಕಾಂಬರ ಹೂ ಬೆಳೆಯಲಾಗುತ್ತಿದೆ. ಬೇಸಿಗೆಯಲ್ಲಿ ಒಳ್ಳೆಯ ಇಳುವರಿ ಕೊಡುವ ಈ ಬೆಳೆ, ರೈತರಿಗೆ, ಅದರಲ್ಲೂ ಸಣ್ಣ ರೈತರಿಗೆ ಆಶಾದಾಯಕ ಬೆಳೆಯಾಗಿದೆ. ಕನಕಾಂಬರ ಕುಟುಂಬಕ್ಕೆ ಸೇರಿದ ಅತ್ಯಂತ ಸುಂದರ ಹಗುರವಾದ ಬಹು ಬೇಡಿಕೆವುಳ್ಳ ಪುಷ್ಪ ಇದೊಂದು ಮಧ್ಯಮಾವಧಿ ಅಂದರೆ ೨-೩ ವರ್ಷದ ಬೆಳೆ ಆಗಿದೆ. ೩ ನೇ ವರ್ಷದಿಂದ ಗಿಡದಲ್ಲಿ ಇಳುವರಿ ಕುಂಠಿತವಾಗುತ್ತದೆ. ಸದ್ಯ ಹವಾಮಾನಕ್ಕೆ ಅನುಗುಣವಾಗಿ ಇಳುವರಿ ಕಡಿಮೆ ಇದ್ದು, ಇನ್ನೂ ಒಂದೆರಡು ತಿಂಗಳು ಆದಾಯ ಕೊಡಬಲ್ಲ ಈ ಬೆಳೆಯಿಂದ ಅಂದಾಜು ರೂ.೧. ೫೦ ಲಕ್ಷ ಆದಾಯದ ನಿರೀಕ್ಷೆ ಇದೆ ಎನ್ನುತ್ತಾರೆ ರೈತ.
ಸೊರಗು ರೋಗ, ರಸಹೀರುವ ಕೀಟಗಳು ಈ ಬೆಳೆಯ ಮುಖ್ಯ ಶತ್ರುಗಳು. ಕೊಪ್ಪಳದ ತೋಟಗಾರಿಕೆ ಇಲಾಖೆ ವಿಷಯ ತಜ್ಞ ವಾಮನಮೂರ್ತಿ, ಇನ್ನೋರ್ವ ಸಲಹೆಗಾರ ಚಂದ್ರಶೇಖರ ಅವರ ಮಾರ್ಗದರ್ಶನ ಮತ್ತು ಅವರ ಸಲಹೆಯಂತೆ ಕೀಟನಾಶಕ, ಲಘುಪೋಷಕಾಂಶಗಳು ಮತ್ತು ಶಿಲೀಂದ್ರ ನಾಶಕಗಳನ್ನು ಸಿಂಪಡಿಸಿ ಕೀಟ ಮತ್ತು ರೋಗಗಳ ನಿಯಂತ್ರಣ ಕೈಗೊಳ್ಳಲಾಯಿತು. ಈ ಬೆಳೆಗೆ ಮುಖ್ಯ ಖರ್ಚೆಂದರೆ ಕಟಾವು ಮಾಡಲು ಆಳುಗಳು. ದಿನಾಲು ಕನಿಷ್ಟ ೮ ರಿಂದ ೧೦ ಆಳುಗಳ ಅವಶ್ಯಕತೆ ಇದೆ. ಪುಷ್ಪ ಕೃಷಿಯಿಂದ ತಮ್ಮ ಕುಟುಂಬವಷ್ಟೇ ಅಲ್ಲ, ಗ್ರಾಮದ ೮ ರಿಂದ ೧೦ ಕುಟುಂಬಗಳಿಗೂ ಸಹ ಉದ್ಯೋಗ ದೊರೆಯುತ್ತಿದ್ದು, ಇದು ನನಗೆ ಹೆಮ್ಮೆಯ ವಿಷಯವಾಗಿದೆ ಎನ್ನುತ್ತಾರೆ ರೈತ ಕರಿಬಸಯ್ಯ. `ಬರಗಾಲದಲ್ಲಿಯೂ ಎದೆಗುಂದದೆ ಇದ್ದ ಸ್ವಲ್ಪೇ ಜಮೀನಿನಲ್ಲಿ ಯಶಸ್ವಿಯಾಗಿ ಪುಷ್ಪ ಕೃಷಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ರೈತ ಕರಿಬಸಯ್ಯ. ರೈತರು ಎಂತಹ ಪರಿಸ್ಥಿತಿಯಲ್ಲೂ ಆತ್ಮ ಸ್ಥೈರ್ಯ ಕಳೆದುಕೊಳ್ಳದೇ ಇಲಾಖೆ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಬೇಕು ಎನ್ನುತ್ತಾರೆ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಲಿಂಗಣ್ಣನವರ ಅವರು.
ಹೆಚ್ಚಿನ ಮಾಹಿತಿಗಾಗಿ ಯಲಬುರ್ಗಾ ತೋಟಗಾರಿಕೆ ಇಲಾಖೆ ಅಥವಾ ಕೊಪ್ಪಳದ ತೋಟಗಾರಿಕೆ ವಿಷಯ ತಜ್ಞ ವಾಮನಮೂರ್ತಿರವರನ್ನು ಸಂಪರ್ಕಿಸಬಹುದಾಗಿದೆ.

Please follow and like us:
error