ಪರಂಪರಾಗತವಾಗಿ ಬಂದ ಎಲೆಕಟ್ಟಿನ ಸೇವೆ

ಕೊಪ್ಪಳ :  ಶ್ರೀ ಗವಿಮಠದ ಜಾತ್ರಾಮಹೋತ್ಸವದ ಅಂಗವಾಗಿ ಪ್ರತಿ ವರ್ಷವೂ ಮಹಾರಥೋತ್ಸವದ ದಿನದಂದು ಕೊಪ್ಪಳದ ಬಳ್ಳಾರಿ ಮನೆತನದವರು ಬೆಳಗಿನ ಜಾವ ಶ್ರೀಗವಿಸಿದ್ಧೇಶ್ವರನ ಕರ್ತೃ ಗದ್ದುಗೆಗೆ ಸಾವಿರಾರು ವೀಳ್ಯೆದ ಎಲೆಕಟ್ಟಿನ ಸೇವಾ ಕಾರ್ಯವನ್ನು  ನಡೆಸುತ್ತಾ  ಬಂದಿರುತ್ತಾರೆ.

ಎಲೆಕಟ್ಟಿನ ಸೇವೆ ಎಂದರೇನು? ಆಯತಾಕಾರದ ಬಿದಿರಿನ ಚೌಕಟ್ಟಿನ ಮೇಲೆ ಗೋಪುರಾಕಾರವನ್ನು ಮಾಡಿ ಅದರ ಮೇಲೆ ಸುಂದರವಾಗಿ  ಕಳಸದಂತೆ ನಿರ್ಮಾಣ ಮಾಡಿರುವ ಚೌಕಟ್ಟಿನ ತುಂಬೆಲ್ಲಾ ಅಲಂಕೃತವಾಗಿ ವೀಳ್ಯೆದ ಎಲೆಗಳನ್ನು ಜೋಡಿಸಿ ಕಟ್ಟುವಂತಹದ್ದು ಎಲೆಕಟ್ಟಿನ ಸೇವೆಯಾಗಿದೆ. ಈ ರೀತಿ ವೀಳ್ಯೆದ ಎಲೆಯ ಎಲೆಕಟ್ಟಿನ ಸೇವೆಯನ್ನು  ಮಾಡುವದರಿಂದ ಭಕ್ತಾಧಿಗಳಿಗೆ ಸಕಲ ಸಂಪದವು ದೊರಕುವದು ಎಂಬುದು ಭಕ್ತರ ಭಕ್ತಿಯ ಭಾವನೆಯಾಗಿದೆ.
I ಎಲೆಕಟ್ಟಿನ ಜೊತೆಗೆ ಮಂಗಲ ದ್ರವ್ಯಗಳಾದ ಅರಿಷಣಕೊಂಬು, ಉತ್ತತ್ತಿ, ಅಡಕಿ, ಅಕ್ಕಿ, ಬಾಳೆಹಣ್ಣು, ಹೂವಿನ ಹಾರ ಹಾಗೂ ದಕ್ಷಿಣೆಯೊಂದಿಗೆ ಅರ್ಪಿಸುವದು ಸತ್ಸಂಪ್ರದಾಯವಾಗಿದೆ. ಒಂದು  ಸಂದರ್ಭದಲ್ಲಿ  ನಾಡಿನ ಹೆಸರಾಂತ ಕವಿಗಳಾಗಿದ್ದ ಗವಿಸಿದ್ದ ಬಳ್ಳಾರಿಯವರಿಗೆ ಆರೋಗ್ಯ ಸರಿ ಇಲ್ಲದೇ ಇರುವ ಪ್ರಸಂಗದಲ್ಲಿ ಅವರ ತಾಯಿ ಗವಿಸಿದ್ಧೇಶ್ವರನಲ್ಲಿ ಬೇಡಿಕೊಂಡು ನನ್ನ ಮಗನಿಗೆ ಆರೋಗ್ಯ ಭಾಗ್ಯವನ್ನು ಕರುಣಿಸು ನಿನ್ನ ಕರ್ತೃ ಗದ್ದುಗೆಗೆ ಎಲೆಕಟ್ಟಿನ ಸೇವೆಯನ್ನು ಜೀವನ ಪರ್ಯಂತರವಾಗಿ ಮಾಡುತ್ತೇನೆ ಎಂದು ಹರಕೆ ಹೊತ್ತಿದ್ದರು. ಆ ಪ್ರಕಾರ ಮಹಾಮಹಿಮ ಗವೀಶನ ಕೃಪೆಯಿಂದ ಗುಣಮುಖ ಹೊಂದಿದ ಬಾಲಕನನ್ನು ಕಂಡು ತಾಯಿ ವೀರಮ್ಮನವರು ಅಂದಿನಿಂದ ತಮ್ಮ ಜೀವಿತಾವಧಿ ಉದ್ದಕ್ಕು ಎಲೆಕಟ್ಟಿ ಸೇವೆಯನ್ನು ಮಾಡುತ್ತ ಬಂದರು. ಆ ಪರಂಪರೆಯನ್ನು ಈಗಲೂ ಬಳ್ಳಾರಿ ಮನೆತನದವರು ಆ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಸುಖ ಶಾಂತಿ ಸಮೃದ್ಧಿಯನ್ನು ಆ ಮನೆತನಕ್ಕೆ ಇಂದಿಗೂ ಕರುಣಿಸಿದ್ದಾನೆ.

ಎಸ್.ಎಂ ಕಂಬಾಳಿಮಠ  ನಿವೃತ್ತ ಶಿಕ್ಷಕರು ಕೊಪ್ಪಳ.

Leave a Reply