ನೂತನ ಮೂರ್ತಿ ಪ್ರತಿಷ್ಠಾಪನೆ

ಕೊಪ್ಪಳ: ಕುಕನೂರ ಪಟ್ಟಣದ ಕೊಳಿಪೇಟೆಯಲ್ಲಿ ಸಹಸ್ರಾರು ಭಕ್ತ ಸಮೂಹದ ಜಯ ಘೋಷಣೆಗಳ ನಡುವೆ ಮೈಲಾರಲಿಂಗೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ, ಭವ್ಯ ಮೆರವಣಿಗೆ  ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಮೈಲಾರಲಿಂಗೇಶ್ವರ ಶಿಬರ ಕಟ್ಟೆಯಲ್ಲಿ ನಾನಾ ಪೂಜಾ ಕಾರ್ಯಕ್ರಮಗಳು ಜರುಗಿದ ನಂತರ. ಮೈಲಾರಲಿಂಗೇಶ್ವರ ಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕೊಳಿಪೇಟೆ ಶಾಲೆಯಿಂದ ಪ್ರಾರಂಭಿಸಿ ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ, ವೀರಭದ್ರಪ್ಪ ವೃತ್ತ ಹಾಗೂ ತೇರಿನಗಡ್ಡಿ ವೃತ್ತಗಳ ಮುಖಾಂತರ ಸಾಗಿತು. ಗೊರವಪ್ಪ, ಗೊರಮ್ಮ ಬಾರಕೋಲಿನ ಚಾಟಿ ಹಾಗೂ ಚೌರದಿಂದ ದೇವರಿಗೆ ಹರಕೆ ತೀರಿಸುವ ದೃಶ್ಯ ವಿಶೇಷತೆಯಿಂದ ಕೂಡಿತ್ತು. ಡೊಳ್ಳು ಕುಣಿತ ಹಾಗೂ ಭಾಜಾ ಭಜಂತ್ರಿ ವಾದ ರಸ್ತೆಯುದ್ದಕ್ಕೂ  ಕಾರ್ಯಕ್ರಮಕ್ಕೆ  ಮೆರಗು ತಂದು ಕೊಟ್ಟಿತು. ಪ್ರಮುಖ ರಸ್ತೆಯಲ್ಲಿ ಅದ್ದೂರಿಯಾಗಿ ಸಾಗಿದ ಮೆರವಣಿಗೆ ಮೂರ್ತಿ ಪ್ರತಿಷ್ಠಾಪನಾ ಸ್ಥಳ ತಲುಪಿತು. ಈ ಸಂದರ್ಭದಲ್ಲಿ  ನಾನಾ ಪೂಜಾ ಕಾರ್ಯಕ್ರಮಗಳು ನೇರವೆರಿದವು.  ನಂತರ ಭಕ್ತರು ದೇವರ ಭಕ್ತಿ ಗೀತೆಗಳನ್ನು ಹಾಡಿದರು. ಮೂರ್ತಿ ಪ್ರತಿಷ್ಠಾಪನೆಯಲ್ಲಿ ಕುಕನೂರು, ಬೆಣಕಲ್, ನಿಟ್ಟಾಲಿ, ವೀರಾಪೂರ, ಹಂಚಿನಾಳ, ಚಂಡೂರು, ರಾಜೂರು ಸೇರಿದಂತೆ ಸಹಸ್ರಾರು ಭಕ್ತರು ಆಗಮಿಸಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.

Leave a Reply