ನೀರು ವ್ಯರ್ಥವಾಗಿ ಹರಿದುಹೋಗುತ್ತಿರುವುದನ್ನು ತಡೆ

ಗಂಗಾವತಿ ತಾಲೂಕಿನ ಗ್ರಾಮಗಳಿಗೆ ಅನೀರಿಕ್ಷಿತ ಭೇಟಿ ನೀಡಿದ ಜಿ.ಪಂ. ಅಧಿಕಾರಿಗಳ ತಂಡ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರನ್ನೊಳಗೊಂಡ ತಂಡ ಅನಿರೀಕ್ಷಿತವಾಗಿ ಭೇಟಿ ನೀಡಿತು.

ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮುಲು ನಗರಕ್ಕೆ ಭೇಟಿ ನೀಡಿದ ತಂಡ ಸಿಸ್ಟರ್ನ್ ಮೂಲಕ ಪೋಲಾಗುತ್ತಿದ್ದ ಕುಡಿಯುವ ನೀರಿನ ಬಗ್ಗೆ ಪರಿಶೀಲಿಸಿ, ಕೂಡಲೆ ವಾಟರ್‌ಮನ್‌ಗೆ ಸ್ಥಳಕ್ಕೆ ಕರೆಯಿಸಿಕೊಂಡು, ನೀರು ವ್ಯರ್ಥವಾಗಿ ಹರಿದುಹೋಗುತ್ತಿರುವುದನ್ನು ತಡೆಗಟ್ಟಲಾಯಿತು. ನಂತರ ಅಂಗನವಾಡಿಗೆ ಭೇಟಿ ನೀಡಿ, ಕಿರಿಯ ಆರೋಗ್ಯ ಸಹಾಯಕಿಯರಿಂದ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸುವುದರ ಜೊತೆಗೆ ಗ್ರಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರ ಜೊತೆಗೆ ಸಂವಾದ ನಡೆಸಿದರು. ಗುಂಡೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಅಧಿಕಾರಿಗಳು, ಅಲ್ಲಿನ ಕುಡಿಯುವ ನೀರಿನ ಸಮಸ್ಯೆ, ಉದ್ಯೋಗಖಾತ್ರಿ ಯೋಜನೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಮತ್ತಿತರೆ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಿದರು. ಜಿ.ಪಂ. ಸದಸ್ಯ ವಿಶ್ವನಾಥ ರೆಡ್ಡಿ ಹಾಗೂ ಗುಂಡೂರು ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ಮಾನೆ ಅವರು ಅಧಿಕಾರಿಗಳೊಂದಿಗೆ ಪಾಲ್ಗೊಂಡಿದ್ದರು. ನಂತರ ಸಿದ್ದಾಪುರದ ಬಿಸಿಎಂ ಹಾಸ್ಟೆಲ್, ಬರಗೂರಿನ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ವೈಯಕ್ತಿಕ ಶೌಚಾಲಯ ನಿರ್ಮಾಣ ಹಾಗೂ ಬಳಕೆ ಕುರಿತು ಜಾಗೃತಿ ಮೂಡಿಸಲಾಯಿತು.ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Please follow and like us:
error